ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ನೆಲಮಂಗಲ: ಬೆಂಗಳೂರಿನಲ್ಲಿ ರೋಡ್ರೇಜ್ ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ದಿನೇ ದಿನೇ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆಟೋ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲೇ ಚಾಲಕರಿಬ್ಬರು ಹೊಡೆದಾಡಿಕೊಂಡಿರುವ ಘಟನೆ ನಗರದ ಮಾಕಳಿಯಲ್ಲಿ ನಡೆದಿದೆ. ಇದರಿಂದ ಕೆಲ ಗಂಟೆಗಳ ಕಾಲ ಭಾರೀ ವಾಹನ ಸಂಚಾರ ಅಸ್ತವ್ಯಸ್ತವಾಯಿತು
ಆಟೋ ಹಾಗೂ ಟೆಂಪೋ ನಡುವೆ ಸಂಭವಿಸಿದ ಅಪಘಾತದ ವಿವಾದವು ಹೊಡೆದಾಟಕ್ಕೆ ತಿರುಗಿ, ಗಂಭೀರ ಘಟನೆಯಾಗಿ ಮಾರ್ಪಟ್ಟಿದೆ. ಟೆಂಪೋ ಚಾಲಕ ಮೆಹಬೂಬ್ (42) ಹಾಗೂ ಚಿಕ್ಕಬಿದರಕಲ್ಲು ಮೂಲದ ಆಟೋ ಚಾಲಕ ದರ್ಶನ್ ಎಂಬುವವರ ನಡುವೆ ಗಲಾಟೆ ನಡೆದಿದೆ. ಇವರಿಬ್ಬರ ವಾಗ್ವಾದವು ಮಾರಾಮಾರಿಗೆ ತಿರುಗಿ, ಮೆಹಬೂಬ್ ಅವರನ್ನು ದರ್ಶನ್ ಹಲ್ಲೆ ಮಾಡಿದನೆಂದು ಹೇಳಲಾಗಿದೆ. ಹಲ್ಲೆ ವೇಳೆ ಮೆಹಬೂಬ್ ಪ್ರಜ್ಞೆ ತಪ್ಪಿ ರಸ್ತೆಯಲ್ಲೇ ಬಿದ್ದು ಹೋಗಿದ್ದು, ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೆಹಬೂಬ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್ ಇದೀಗ ಇದೀಗ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ವಶದಲ್ಲಿದ್ದಾನೆ. ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.