ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೊಂದು ಬ್ಲೇಡ್ ಕಂಪನಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕಂಪನಿ ನಂಬಿ ನೂರಾರು ಮಹಿಳೆಯರು ತಾವು ಸಂಪಾದಿಸಿದ ಹಣ ಕಳೆದುಕೊಂಡಿದ್ದಾರೆ. ತಿಂಗಳಿಗೆ 12% ಬಡ್ಡಿ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ವಂಚಕ, ಇದೀಗ ಕಚೇರಿ ಬಾಗಿಲು ಮುಚ್ಚಿಕೊಂಡು ಪರಾರಿಯಾಗಿದ್ದಾನೆ. ಈ ಘಟನೆ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಬೊಮ್ಮಾಲ ರಾಜೇಶ್ ಎಂಬಾತ “ಎಸ್ ಎಲ್ ವಿ ಮಹಿಳಾ ಮಾರ್ಟ್” ಎಂಬ ಸಂಸ್ಥೆಯನ್ನು ಆರಂಭಿಸಿದ್ದ.. ಮಹಿಳೆಯರಿಗೆ ವಿಶೇಷ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳ ಹೆಸರಿನಲ್ಲಿ ಜನರನ್ನು ಸೆಳೆಯುತ್ತಿದ್ದ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ಹೇಳಿ, ಗೃಹಿಣಿಯರು ಮತ್ತು ಮಧ್ಯಮ ವರ್ಗದ ಮಹಿಳೆಯರನ್ನು ಗುರಿಯಾಗಿಸಿಕೊಂಡಿದ್ದಾನೆ ಎನ್ನಲಾಗಿದೆ.
ಬೆಂಗಳೂರು ನಗರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಭಾಗಗಳ ಮಹಿಳೆಯರು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ತಿಂಗಳಿಗೆ 12% ಬಡ್ಡಿ ನೀಡುವುದಾಗಿ ಹೇಳಿದ್ದ ರಾಜೇಶ್, ಮೊದಲ ತಿಂಗಳಲ್ಲಿ ಹೂಡಿಕೆದಾರರಿಗೆ ಸಮಯಕ್ಕೆ ಸರಿಯಾಗಿ ಬಡ್ಡಿ ಹಣ ಪಾವತಿಸಿದ್ದಾನೆ. ಇದರಿಂದ ಮಹಿಳೆಯರಲ್ಲಿ ವಿಶ್ವಾಸ ಹೆಚ್ಚಾಗಿ, ಹಲವರು ಹಣವನ್ನು ಹೂಡಿಕೆ ಮಾಡಿದ್ದಾರೆ. ವಂಚಕನ ಬಣ್ಣ ಬಣ್ಣದ ಮಾತುಗಳು ಹಾಗು ಜಾಹೀರಾತು ನಂಬಿ ನೂರಾರು ಜನರಿಂದ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ಆದರೆ ಮೊದಲ ತಿಂಗಳು ಹಣ ಪಾವತಿಸಿದ ಬಳಿಕ ಎರಡನೇ ತಿಂಗಳ ಬಡ್ಡಿ ಹಣ ಕೇಳಲು ಹೋದ ಮಹಿಳೆಯರಿಗೆ ಕಚೇರಿ ಬಾಗಿಲು ಬಂದ್ ಆಗಿರುವುದು ಕಂಡುಬಂದಿದೆ. ಸಂಸ್ಥೆಯ ಸಿಬ್ಬಂದಿ ಹಾಗೂ ಮುಖ್ಯಸ್ಥ ರಾಜೇಶ್ ಯಾರೂ ಸಂಪರ್ಕಕ್ಕೆ ಸಿಗದೇ ಇದ್ದ ಕಾರಣ ಹೂಡಿಕೆದಾರರು ಆತಂಕಕ್ಕೊಳಗಾಗಿದ್ದಾರೆ.
ವಂಚನೆಗೆ ಒಳಗಾದ ಮಹಿಳೆಯರು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕೋಟ್ಯಂತರ ರೂಪಾಯಿ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಬೊಮ್ಮಾಲ ರಾಜೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಇನ್ನಷ್ಟು ಅಚ್ಚರಿಯ ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ. ವಂಚಕ ಒಬ್ಬನೇ ಕಾರ್ಯಾಚರಣೆ ನಡೆಸಿದ್ದಾನೆಯೋ ಅಥವಾ ಇದರ ಹಿಂದೆ ದೊಡ್ಡ ಜಾಲವಿದೆಯೋ ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.





