ಬೆಂಗಳೂರು, ಜೂನ್ 10: ಕಾಂಟ್ರಾಕ್ಟರ್ ಒಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ನೇಪಾಳಿ ಮೂಲದ ದಂಪತಿ, 25 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಆದರೆ ಅಮೃತಹಳ್ಳಿ ಪೊಲೀಸರು ದಾಳಿ ನಡೆಸಿ, ದಂಪತಿಯನ್ನು ಬಂಧಿಸಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ.
ಕೇವಲ ಒಂದು ತಿಂಗಳಲ್ಲಿ ಸಂಚು ನಡೆಸಿದ ದಂಪತಿ
ನೇಪಾಳ ಮೂಲದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಬಂಧಿತ ಆರೋಪಿಗಳು. ಈ ದಂಪತಿ ಅಮೃತಹಳ್ಠಿಯ ಅರ್ಕಾವತಿ ಲೇಔಟ್‌ನಲ್ಲಿರುವ ಕಾಂಟ್ರಾಕ್ಟರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಮನೆಕೆಲಸಕ್ಕಿದ್ದರೆ, ಪತಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇರಿಕೊಂಡಿದ್ದರು. ಕೇವಲ ಒಂದು ತಿಂಗಳಲ್ಲೇ, ಮನೆಯ ಮಾಲೀಕರು ಹಣವನ್ನು ಎಲ್ಲಿ ಇಟ್ಟಿರುತ್ತಾರೆ, ಕೀ ಎಲ್ಲಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿದ್ದರು. ಕಳ್ಳತನ ಮಾಡುವ ಉದ್ದೇಶದಿಂದಲೇ ಕಡಿಮೆ ಸಂಬಳಕ್ಕೆ ಕೆಲಸಕ್ಕೆ ಸೇರಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
25 ಲಕ್ಷ ನಗದು ಸುಲಭವಾಗಿ ಕದ್ದ ದಂಪತಿ
ಕಾಂಟ್ರಾಕ್ಟರ್ ತಮ್ಮ ಕೆಲಸಗಾರರಿಗೆ ಸಂಬಳ ನೀಡಲು ಬ್ಯಾಂಕ್‌ನಿಂದ 25 ಲಕ್ಷ ರೂಪಾಯಿ ಡ್ರಾ ಮಾಡಿ, ಮನೆಯ ಕಬೋರ್ಡ್ ನಲ್ಲಿ ಇಟ್ಟಿದ್ದರು. ಕಬೋರ್ಡ್ ನ ಕೀಯನ್ನು ಮತ್ತೊಂದು ಕಬೋರ್ಡ್ ನಲ್ಲಿ ಇಟ್ಟಿರುವ ವಿಚಾರವೂ ಆರೋಪಿಗಳಿಗೆ ಗೊತ್ತಾಗಿತ್ತು. ಮನೆಯ ಮಾಲೀಕರು ಇಲ್ಲದ ಸಮಯವನ್ನು ನೋಡಿಕೊಂಡ ದಂಪತಿ, ಸುಲಭವಾಗಿ ಕಬೋರ್ಡ್ ತೆರೆದು, 25 ಲಕ್ಷ ರೂಪಾಯಿ ನಗದು ಇದ್ದ ಬ್ಯಾಗ್ ಸಮೇತ ಪರಾರಿಯಾಗಿದ್ದರು.
ಸಮಯಕ್ಕೆ ಸ್ಪಂದಿಸಿದ ಪೊಲೀಸರು
ಕೆಲಸದ ನಿಮಿತ್ತ ಮನೆಯ ಮಾಲೀಕರು ಒಂದು ವಾರದ ಹಿಂದೆ ಹೊರಗೆ ತೆರಳಿದ್ದರು. ವಾಪಸ್ ಬಂದಾಗ ನೇಪಾಳಿ ದಂಪತಿಗಳಿಬ್ಬರೂ ಕಾಣೆಯಾಗಿದ್ದರು. ತಕ್ಷಣ ಅನುಮಾನ ಬಂದ ಅವರು ಕಬೋರ್ಡ್ ಪರಿಶೀಲಿಸಿದಾಗ, ಅದರಲ್ಲಿದ್ದ ಸಂಪೂರ್ಣ 25 ಲಕ್ಷ ರೂಪಾಯಿ ನಗದು ಕಳ್ಳತನವಾಗಿರುವುದು ಗೊತ್ತಾಯಿತು. ಕೂಡಲೇ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಆರೋಪಿಗಳು ಬೆಂಗಳೂರು ತೊರೆಯುವ ಮುನ್ನವೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಂಗೇರಿ ಬಳಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಅವರು ನೇಪಾಳಕ್ಕೆ ಪರಾರಿಯಾಗುವ ಯೋಜನೆಯಲ್ಲಿದ್ದರು ಎಂದು ತಿಳಿದುಬಂದಿದೆ.
25 ಲಕ್ಷ ರೂ. ನಗದು ವಶಕ್ಕೆ
ಬಂಧಿತರಿಂದ ಕಳ್ಳತನ ಮಾಡಿದ್ದ 25 ಲಕ್ಷ ರೂಪಾಯಿ ನಗದನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ. ಕಳ್ಳತನವಾದ ಎರಡೇ ದಿನಗಳಲ್ಲಿ ಪೊಲೀಸರು ಹಣವನ್ನು ಸುರಕ್ಷಿತವಾಗಿ ಮರಳಿ ಪಡೆದುಕೊಂಡಿದ್ದಾರೆ.
ಸಂಚು ರೂಪಿಸಿ ಕೆಲಸಕ್ಕೆ ಸೇರಿದ್ದೇ ಕಳ್ಳತನಕ್ಕೆ
ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ದಂಪತಿಯ ಸಂಪೂರ್ಣ ಸಂಚು ಬೆಳಕಿಗೆ ಬಂದಿದೆ. ಅವರು ಬೇರೆ ಬೇರೆ ಮನೆಗಳಲ್ಲಿ ಕೆಲಸಕ್ಕೆ ಸೇರಿ, ಅಲ್ಲಿ ಕಳ್ಳತನ ಮಾಡುವ ಸಂಚು ಹೊಂದಿದ್ದರು. ಅಮೃತಹಳ್ಳಿಯಲ್ಲೂ ಅದೇ ತಂತ್ರವನ್ನು ಅನುಸರಿಸಿದ್ದರು. ಕಡಿಮೆ ಸಂಬಳಕ್ಕೆ ಒಪ್ಪಿಕೊಂಡು ಮನೆಮಾಲೀಕರ ವಿಶ್ವಾಸ ಗಳಿಸಿ, ಸೂಕ್ತ ಸಮಯ ಕಾದು ಕಳ್ಳತನ ನಡೆಸಿದ್ದರು.
ನ್ಯಾಯಾಂಗ ಬಂಧನಕ್ಕೆ ಒಳಪಟ್ಟ ದಂಪತಿ
ಬಂಧಿತರಾದ ಪವನ್ ಮತ್ತು ಸೀತಾ ಬಿಸ್ತಾ ದಂಪತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಳ್ಳತನದ ಹೆಚ್ಚಿನ ವಿವರಗಳಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





