ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಶ್ವಾಸದ ಊಟದ ಆಮಿಷದೊಂದಿಗೆ ಗೂಟ ಇಟ್ಟು ಕೋಟಿಗಟ್ಟಲೆ ಹಣ ದೋಚಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸವಿತಾ ಎಂಬ ಮಹಿಳೆಯೊಬ್ಬಳು, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ರಾಜಕಾರಣಿಗಳ ಹೆಸರನ್ನು ಬಳಸಿಕೊಂಡು ತನ್ನ 20ಕ್ಕೂ ಹೆಚ್ಚು ಸ್ನೇಹಿತರಿಂದ ಸುಮಾರು 30 ಕೋಟಿ ರೂಪಾಯಿ ವಂಚನೆ ನಡೆಸಿರುವ ಆರೋಪದಡಿ ಬಸವೇಶ್ವರ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾಳೆ.
ಕಿಟ್ಟಿ ಪಾರ್ಟಿಯ ಆಮಿಷದಲ್ಲಿ ವಂಚನೆ
ಸವಿತಾ ಸಿರಿವಂತ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು, ಕಿಟ್ಟಿ ಪಾರ್ಟಿಗಳೆಂಬ ನೆಪದಲ್ಲಿ ಆಕರ್ಷಿಸುತ್ತಿದ್ದಳು. ತನ್ನ ಮನೆಗೆ ಕರೆದು ರುಚಿಕರವಾದ ಊಟೋಪಚಾರದ ವ್ಯವಸ್ಥೆ ಮಾಡಿ, ತನ್ನ ಸಂಪರ್ಕದ ಬಗ್ಗೆ ಗೌರವ ಮತ್ತು ವಿಶ್ವಾಸವನ್ನು ಗಳಿಸುತ್ತಿದ್ದಳು. ಈ ಒಡನಾಟದ ಮೂಲಕ ಸವಿತಾ, ತಾನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ರಾಜಕಾರಣಿಗಳು ಮತ್ತು ಪ್ರಭಾವಿಗಳ ಜೊತೆಗೆ ಸಂಪರ್ಕ ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಳು.
ಈ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡ ಸವಿತಾ, ಹಣವನ್ನು ದುಪ್ಪಟ್ಟುಗೊಳಿಸುವ ಆಮಿಷ, ಕಡಿಮೆ ಬೆಲೆಯಲ್ಲಿ ಚಿನ್ನದ ಒಡವೆಗಳನ್ನು ಒದಗಿಸುವ ಭರವಸೆ, ಮತ್ತು ಇತರ ಆಕರ್ಷಕ ಆಫರ್‌ಗಳನ್ನು ತೋರಿಸಿ ತನ್ನ ಸ್ನೇಹಿತರಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆಯುತ್ತಿದ್ದಳು. ಒಬ್ಬೊಬ್ಬರಿಂದ 50 ಲಕ್ಷದಿಂದ 2.5 ಕೋಟಿ ರೂಪಾಯಿಗಳವರೆಗೆ ಸಾಲವಾಗಿ ಪಡೆದು, ಒಟ್ಟಾರೆ 30 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ವಂಚನೆಯ ಮೂಲಕ ದೋಚಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ವಂಚನೆಗೊಳಗಾದ ಮಹಿಳೆಯರು ತಮ್ಮ ಹಣವನ್ನು ಮರಳಿ ಪಡೆಯಲು ಸಾಧ್ಯವಾಗದೆ, ದೂರು ದಾಖಲಿಸಿದ ನಂತರ ಬಸವೇಶ್ವರ ನಗರ ಪೊಲೀಸರು ಸವಿತಾಳನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ, ಈಕೆಯು ಈ ಹಿಂದೆಯೂ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಆರೋಪದಡಿ ದೂರು ದಾಖಲಾಗಿದ್ದು, ಬಂಧನಕ್ಕೊಳಗಾಗಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಆದರೆ, ಬಂಧನದ ನಂತರವೂ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.





