ಮಸಾಲೆ ಪದಾರ್ಥಗಳಲ್ಲಿ ಕೃತಕ ಬಣ್ಣ ಹಾಗೂ ಎಥಿಲೀನ್ ಆಕ್ಸೈಡ್ (EtO) ಬಳಕೆ ಕುರಿತು ಆತಂಕ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಕೇಂದ್ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ರಾಜ್ಯದ ಮನವಿ ಹಿನ್ನೆಲೆ ಮಸಾಲೆ ಪದಾರ್ಥಗಳ ಗುಣಮಟ್ಟ, ಬಳಕೆ ಹಾಗೂ ರಾಸಾಯನಿಕಗಳ ಪ್ರಮಾಣದ ಕುರಿತು ಪರಿಶೀಲಿಸಲು ಕೇಂದ್ರ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ.
ಗರಂ ಮಸಾಲೆ, ಚಿಕನ್ ಮಸಾಲೆ, ಬಿರಿಯಾನಿ ಪೌಡರ್, ಸಾಂಬಾರ್ ಪೌಡರ್, ರಸಂ ಪೌಡರ್ ಸೇರಿದಂತೆ ಹಲವು ರೆಡಿಮೇಡ್ ಮಸಾಲೆಗಳನ್ನು ಪ್ರತಿದಿನ ಅಡುಗೆಯಲ್ಲಿ ಬಳಸಲಾಗುತ್ತದೆ. ಇಂತಹ ಉತ್ಪನ್ನಗಳಲ್ಲಿ ಕೃತಕ ಬಣ್ಣ ಅಥವಾ ಇತರ ರಾಸಾಯನಿಕಗಳ ಬಳಕೆ ಎಷ್ಟಿದೆ ಎಂಬುದರ ಬಗ್ಗೆ ಹೆಚ್ಚಿನ ನಿಗಾ ಅಗತ್ಯವಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಭಿಪ್ರಾಯಪಟ್ಟಿದೆ.
ಮಸಾಲೆ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ (EtO) ಬಳಕೆ ಕುರಿತು ಇಲಾಖೆ ಕಳವಳ ವ್ಯಕ್ತಪಡಿಸಿದೆ. ರಫ್ತು ಮಸಾಲೆಗಳಿಗೆ ಅನ್ವಯಿಸುವ ಮಿತಿಗೆ ಹೋಲಿಸಿದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಕೆಲವು ಉತ್ಪನ್ನಗಳಲ್ಲಿ EtO ಪ್ರಮಾಣ ಹೆಚ್ಚಿರಬಹುದೆಂಬ ಅನುಮಾನವಿದೆ. ಈ ಹಿನ್ನೆಲೆ ಸ್ಥಳೀಯ ಮಾರುಕಟ್ಟೆಯಲ್ಲಿನ ಮಸಾಲೆ ಉತ್ಪನ್ನಗಳ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಅಗತ್ಯ ಎದುರಾಗಿದೆ.
EtOಗೆ ಹೆಚ್ಚಿನ ಪ್ರಮಾಣದಲ್ಲಿ ಅಥವಾ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯುತ್ತಿದೆ. ಹೀಗಾಗಿ ಮಸಾಲೆಗಳಲ್ಲಿ ಬಳಸುವ ರಾಸಾಯನಿಕಗಳ ಸುರಕ್ಷಿತ ಮಿತಿಯನ್ನು ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ನಿಗದಿಪಡಿಸುವ ಅಗತ್ಯವಿದೆ.
ಕರ್ನಾಟಕ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು FSSAIಗೆ ಪತ್ರ ಬರೆದು ಮಸಾಲೆ ಪದಾರ್ಥಗಳಲ್ಲಿನ EtO ಬಳಕೆ ಹಾಗೂ ಗುಣಮಟ್ಟದ ಮಾನದಂಡಗಳ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಮನವಿಗೆ ಸ್ಪಂದಿಸಿರುವ ಕೇಂದ್ರವು ಈ ಕುರಿತು ಪರಿಶೀಲನೆ ನಡೆಸಲು ಸಮಿತಿ ರಚಿಸಿದೆ.
ಮುಂದಿನ ದಿನಗಳಲ್ಲಿ ಮಸಾಲೆ ಪದಾರ್ಥಗಳ ಉತ್ಪಾದನೆ, ಮಾರಾಟ ಮತ್ತು ಅವುಗಳಲ್ಲಿ ಬಳಸುವ ರಾಸಾಯನಿಕಗಳ ಪ್ರಮಾಣದ ಮೇಲೆ ಹೆಚ್ಚಿನ ನಿಯಂತ್ರಣ ಜಾರಿಯಾಗುವ ಸಾಧ್ಯತೆ ಇದೆ. ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಮಸಾಲೆ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.





