ಅಮೆರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ನಡುವೆ ನಡೆದ ಜಗಳ ಈಗ ವಿಶ್ವದೆಲ್ಲಡೆ ಸುದ್ದಿಯಾಗ್ತಾ ಇದೆ. ನಾಲ್ಕು ಗೋಡೆಗಳ ಮಧ್ಯೆ ಇದ್ದ ವ್ಯವಹಾರವನ್ನ ಕ್ಯಾಮೆರಾಗಳ ಎದುರು ಮಾಡಿದ್ದು, ಜಗಳ ಆಡಿದ್ದು, ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿಗೆ ಅವಮಾನ ಮಾಡಿದ್ದರ ಹಿಂದಿನ ಲೆಕ್ಕಾಚಾರ ಬೇರೇನೇ ಇದೆ. ಅದು ಪಕ್ಕಾ ಬಿಸಿನೆಸ್.
ಸೈನ್ಯವನ್ನ ಕಳಿಸದೆ, ಆಯುಧಗಳನ್ನು ಮಾತ್ರ ಕಳಿಸಿದ್ದ ಅಮೆರಿಕ..!
ಡೊನಾಲ್ಡ್ ಟ್ರಂಪ್ ಮಾಡಿದ ಅವಮಾನಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್ ಅಧ್ಯಕ್ಷ ಮತ್ತವರ ಟೀಂ, ಶ್ವೇತಭವನದಲ್ಲಿ ಊಟವನ್ನೂ ಮಾಡದೆ ಹೊರಟು ಹೋದ ಘಟನೆಯ ಹಿಂದೆ, ಒಂದು ಕಥೆಯೂ ಇದೆ. ಏನೆಂದರೆ ಉಕ್ರೇನ್ ಮತ್ತು ರಷ್ಯಾ ಯುದ್ಧಕ್ಕೆ ಅಮೆರಿಕ, ಸಹಾಯ ಹಸ್ತ ಚಾಚಿತ್ತು. ನ್ಯಾಟೋ ಸದಸ್ಯ ರಾಷ್ಟ್ರನಾಗಲು ಸಿದ್ಧವಿದ್ದ ಉಕ್ರೇನ್‌ಗೆ ಸುಮಾರು 30 ಲಕ್ಷ ಕೋಟಿ ರೂಪಾಯಿಯಷ್ಟು ಆಯುಧಗಳನ್ನ ಕೊಟ್ಟಿತ್ತು.
ಆದರೆ, ಸೈನ್ಯವನ್ನ ಮಾತ್ರ ಕಳಿಸಿರಲಿಲ್ಲ. ಸೈನ್ಯವನ್ನ ಕಳಿಸಿದ್ದರೆ, ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗಿಯಾದಂತೆ. ಆಗ ಸಹಾಯದ ಮಾತೇ ಬರೋದಿಲ್ಲ. ಸೈನ್ಯವನ್ನ ಕಳಿಸದೆ, ಆಯುಧಗಳನ್ನ ಮಾತ್ರ ಕೊಟ್ಟಿದ್ದರ ಹಿಂದಿನ ನಿಗೂಢ ರಹಸ್ಯ ಈಗ ಬಯಲಾಗಿದೆ. ಡೊನಾಲ್ಡ್ ಟ್ರಂಪ್, ಬೈಡನ್ ಕಾಲದಲ್ಲಿ ನೀಡಿದ್ದ 30 ಲಕ್ಷ ಆಯುಧಗಳ ಹಣವನ್ನ ಕೇಳ್ತಿದ್ಧಾರೆ. ಇದೊಂದು ಸಹಾಯ ಎಂದೇ ನಂಬಿಕೊಂಡಿದ್ದ ಉಕ್ರೇನ್ ಅಧ್ಯಕ್ಷರಿಗೂ ಇದು ಶಾಕ್. ಇಷ್ಟಕ್ಕೂ ಟ್ರಂಪ್ ಕೇಳ್ತಿರೋದು ಉಕ್ರೇನ್‌ನಲ್ಲಿರೋ ಖನಿಜಗಳ ನಿಕ್ಷೇಪಗಳಲ್ಲಿ ಗಣಿಗಾರಿಕೆ ಮಾಡೋದಕ್ಕೆ ಅನುಮತಿಯನ್ನ.
ಉಕ್ರೇನ್‌ನಲ್ಲಿ ಗಣಿಗಾರಕೆ ಮಾಡುವುದೇ ಅಮೆರಿಕದ ದೊಡ್ಡ ಪ್ಲಾನ್..!
ಅಂದ್ರೆ, ಉಕ್ರೇನ್ ನಿಕ್ಷೇಪಗಳಲ್ಲಿ ಅಮೆರಿಕ ಗಣಿಗಾರಿಕೆ ಮಾಡೋದು, ಖರ್ಚನ್ನೆಲ್ಲ ಕಳೆದು ಬಂದ ಲಾಭದಲ್ಲಿ ಅಮೆರಿಕಕ್ಕೆ 50, ಉಕ್ರೇನ್‌ಗೆ 50 ಅಂತಾ ಹಂಚಿಕೊಳ್ಳೋದು. ಅಮೆರಿಕ, ಕೊಟ್ಟಿರೋ 30 ಲಕ್ಷ ಕೋಟಿಯ ಹಣ ಬಡ್ಡಿ ಸಮೇತ ವಾಪಸ್ ಬರುವವರೆಗೆ ಅಮೆರಿಕ, ಉಕ್ರೇನಿನಲ್ಲಿ ಗಣಿಗಾರಿಕೆ ಮಾಡ್ತಾನೇ ಇರುತ್ತೆ. ಯುದ್ಧಕ್ಕೆ ಹೋದ ಉಕ್ರೇನ್, ತನ್ನ ದೇಶದ ಸ್ವಾಭಿಮಾನವನ್ನೇ ಅಡವಿಟ್ಟು ಬಂದಂತಾಗಿದೆ.
ಏಕೆಂದರೆ ಉಕ್ರೇನಿನಲ್ಲಿ ಭವಿಷ್ಯದ ನಿಧಿ ಎಂದೇ ಕರೆಸಿಕೊಳ್ತಿರೋ ಲೀಥಿಯಂ ನಿಕ್ಷೇಪ ಇದೆ. ಜಗತ್ತಿನ ಲೀಥಿಯಂ ನಿಕ್ಷೇಪದ ಶೇ.3ರಷ್ಟು ನಿಕ್ಷೇಪ, ಉಕ್ರೇನ್ ಒಂದರಲ್ಲೇ ಇದೆ. ಕಬ್ಬಿಣ, ಮ್ಯಾಂಗನೀಸ್, ಟಿಟಾನಿಯಂ ಸ್ಪಾಂಜ್, ಗ್ರಾನೈಟ್, ಕಲ್ಲಿದ್ದಲು ನಿಕ್ಷೇಪಗಳಿವೆ. ಚಿನ್ನದ ಖನಿಜವೂ ಇದೆ. ಅಣು ವಿದ್ಯುತ್ತಿಗೆ ಬೇಕಾಗಿರುವ ಯುರೇನಿಯಿಂ ಕೂಡಾ ಇದೆ. ಅಮೆರಿಕ ಕಣ್ಣಿಟ್ಟಿರೋದೂ ಕೂಡಾ ಇವುಗಳ ಮೇಲೆಯೇ.
ಇನ್ನು ಈ ಹೋರಾಟದಲ್ಲಿ ಅಮೆರಿಕವೇ ಒಂದು ಕಡೆಯಾದರೆ, ಯೂರೋಪ್ ರಾಷ್ಟ್ರಗಳೆಲ್ಲ ಉಕ್ರೇನ್ ಜೊತೆಯಲ್ಲಿವೆ. ಕಾರಣ ಇಷ್ಟೇ, ಉಕ್ರೇನ್ ಇಡೀ ಯೂರೋಪ್ ರಾಷ್ಟ್ರಗಳಿಗೆ ಗೋಧಿ, ಸನ್ ಫ್ಲವರ್ ಆಯಿಲ್ ಮತ್ತುಇಂಧನ ಸರಬರಾಜು ಮಾಡುವ ರಾಷ್ಟ್ರ. ಕೈಗಾರಿಕೆಗಳಲ್ಲೂ ಅಷ್ಟೇ, ಅದರಲ್ಲೂ ಯೂರಿಯಾ ಗೊಬ್ಬರ ತಯಾರಿಕೆಯಲ್ಲಿ ಉಕ್ರೇನ್ ನಂ.1. ಯುದ್ಧ ಶುರುವಾದ ವರ್ಷ ಭಾರತದಲ್ಲಿ ರಸಗೊಬ್ಬರ ಬೆಲೆ, ಅಡುಗೆ ಎಣ್ಣೆಗಳ ಬೆಲೆ ಏರಿತ್ತಲ್ಲ, ಅದಕ್ಕೆ ಕಾರಣ ರಷ್ಯಾ ಮತ್ತು ಉಕ್ರೇನ್ ಯುದ್ಧ.
ಯೂರೋಪ್ ರಾಷ್ಟ್ರಗಳೆಲ್ಲ ಈಗಲೂ ಉಕ್ರೇನ್ ಜೊತೆ ನಿಂತಿರೋದು ಇದೇ ಕಾರಣಕ್ಕೆ. ಆ ದೇಶಗಳಿಗೆ ಉಕ್ರೇನ್ ಆಹಾರ ಸಂಪನ್ಮೂಲ ರಾಷ್ಟ್ರವಾದರೆ, ಅಮೆರಿಕಕ್ಕೆ ಉಕ್ರೇನ್ ಖನಿಜ ಸಂಪನ್ಮೂಲ ರಾಷ್ಟ್ರವಾಗಿ ಕಾಣಿಸುತ್ತಿದೆ.
ಈಗ ಉಕ್ರೇನ್ ಜೊತೆ ಅಮೆರಿಕ ಪಕ್ಕಾ ವ್ಯಾಪಾರ ಮಾಡ್ತಾ ಇದೆ. ನಾವು ನಿಮ್ಮ ದೇಶಕ್ಕೆ 350 ಮಿಲಿಯನ್ ಡಾಲರ್ ನೆರವು ಕೊಟ್ಟಿದ್ಧೇವೆ. ನೀವು ನಿಮ್ಮ ದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಿ ಅಂತಿದೆ ಅಮೆರಿಕ. ಉಕ್ರೇನ್‌ಗೆ ಬೇರೆ ದಾರಿಯೇ ಇಲ್ಲ. ಉಕ್ರೇನ್ ಈಗ ಅಮೆರಿಕದ ಜೊತೆ ಸೇರಿ ಯುದ್ಧ ಮಾಡಿ, ದಶಕಗಳು ಕಳೆದರೂ ಸಾಲ ತೀರಿಸಲು ಆಗದ ಸ್ಥಿತಿಗೆ ಬಂದು ನಿಂತಿದೆ. ಉಕ್ರೇನ್ ಸಾಲದ ಪ್ರಮಾಣ ಹತ್ತಿರ ಹತ್ತಿರ 300 ಮಿಲಿಯನ್ ಡಾಲರ್‌ಗೆ ಏರಿದೆ.
ಈಗ ಉಕ್ರೇನ್, ತನ್ನ ದೇಶದಲ್ಲಿ ಅಮೆರಿಕದ ಗಣಿಗಾರಿಕೆಗೆ ಓಕೆ ಅಂತಿದೆ. ಆದರೆ ಅಮೆರಿಕದ ವಾದ ಏನಂದ್ರೆ, ಉಕ್ರೇನ್ ವಶಪಡಿಸಿಕೊಂಡಿರೋ ರಷ್ಯಾದ ಭೂಮಿಯನ್ನ ವಾಪಸ್ ಕೊಡಬೇಕು, ಹಾಗೇನೇ ರಷ್ಯಾ ವಶಪಡಿಸಿಕೊಂಡಿರೋ ಉಕ್ರೇನ್‌ನ ಭೂಮಿಯನ್ನೂ ಅವರಿಗೇ ಕೊಟ್ಟು ಬಿಡಬೇಕು ಅನ್ನೋದು. ಇದಕ್ಕೆ ಉಕ್ರೇನ್ ರೆಡಿ ಇಲ್ಲ.
ಸಿಂಪಲ್ಲಾಗ್ ಇದು ಎಂಥ ವ್ಯವಹಾರ ಅನ್ನೋದನ್ನ ಹೇಳ್ಬೇಕಂದ್ರೆ, ನೀವು ನಿಮ್ಮ ಫ್ರೆಂಡಿಗೆ ಕಷ್ಟದಲ್ಲಿದ್ದಾಗ ಐದ್ ಸಾವಿರ.. ಹತ್ ಸಾವಿರ ಅಂತೆಲ್ಲ ಕೊಟ್ಟಿರ್ತೀರಿ. ನೀನ್ ನನ್ ಫ್ರೆಂಡು ಕಣೋ ಅಂದಿರ್ತೀರಿ. ಆದರೆ ಅದಕ್ಕೆಲ್ಲ ಲೆಕ್ಕ ಇಟ್ಕೊಂಡಿರ್ತೀರಿ. ಆ ಫ್ರೆಂಡ್ ತಿಪ್ಪರಲಾಗ ಹಾಕಿದ್ರೂ, ಸಾಲ ವಾಪಸ್ ಕೊಡೋಕೆ ಚಾನ್ಸ್ ಇಲ್ಲ ಅಂದಾಗ.. ನೀನು ಈಗ ನೀನಿರೋ ಮನೆಯನ್ನ ನಂಗೆ ಕೊಟ್ಬಿಡು. ನೀನು ಮನೆ ಬಿಟ್ ಹೋಗು ಅಂತೀರಿ. ಅಮೆರಿಕ ಮಾಡಿರೋದು ಇಂಥ ವ್ಯಾಪಾರವನ್ನೇ.