ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಈಗ ಟ್ರಂಪ್ ಆಪ್ತರೂ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ. ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವರೊ ಭಾರತದ ಜಾತಿ ವ್ಯವಸ್ಥೆಯನ್ನು ಗುರಿಯಾಗಿಟ್ಟು ಭಾರತೀಯರಿಗೆ ಅವಮಾನಕರವಾಗುವಂತಹ ಹೇಳಿಕೆ ನೀಡಿದ್ದಾರೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಮೂಲಕ ಬ್ರಾಹ್ಮಣರು ಭಾರತೀಯ ಜನರ ವೆಚ್ಚದಲ್ಲಿ ಶ್ರೀಮಂತರಾಗುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಹತ್ವದ ಮಾತುಕತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನವರೊ ಅವರ ಹೇಳಿಕೆ ಅಮೆರಿಕದ ರಾಜಕೀಯ ತಂತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಲಾಗಿದೆ.
ನವರೊ ಅವರು ಈ ಹಿಂದೆಯೂ ರಷ್ಯಾ-ಉಕ್ರೇನ್ ಯುದ್ಧವನ್ನು “ಮೋದಿ ಯುದ್ಧ” ಎಂದು ಕರೆದು ವಿವಾದ ಸೃಷ್ಟಿಸಿದ್ದರು. ಈಗ ಮತ್ತೆ, “ರಷ್ಯಾ ಮತ್ತು ಚೀನಾದೊಂದಿಗೆ ಮೋದಿ ಯಾಕೆ ಹೆಚ್ಚು ಮಾತನಾಡುತ್ತಿದ್ದಾರೆ? ಭಾರತೀಯ ಜನರು ತಮ್ಮ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಬ್ರಾಹ್ಮಣರು ನಿಮ್ಮ ವೆಚ್ಚದಲ್ಲಿ ಲಾಭಗಳಿಸುತ್ತಿದ್ದಾರೆ,” ಎಂದು ಜಾತಿಯನ್ನು ಅಸ್ತ್ರವಾಗಿ ಬಳಸಿ ಭಾರತೀಯರನ್ನು ಪ್ರಚೋದಿಸುವ ಕೆಲಸ ಮಾಡಿದ್ದಾರೆ.
ಇದೇ ವೇಳೆ, ರಷ್ಯಾದಿಂದ ಇಂಧನ ಖರೀದಿಯನ್ನು ಮುಂದುವರೆಸಿರುವ ಭಾರತದ ವಿರುದ್ಧ ಟ್ರಂಪ್ ಸರ್ಕಾರ ಕಿಡಿಕಾರಿದೆ. ಭಾರತದ ವಿರುದ್ಧ ತೆರಿಗೆ ಸಂಗ್ರಹಣೆಯ ತಂತ್ರವನ್ನು ಬಳಸಿರುವ ಟ್ರಂಪ್ ಆಡಳಿತ, ಮೋದಿಯ ದೃಢನಿರ್ಧಾರದ ವಿರುದ್ಧ ಟೀಕೆಗಳ ಸುರಿಮಳೆಗೈದಿದೆ.
ಇದರ ಜೊತೆಗೆ, ಟ್ರಂಪ್ ಸರ್ಕಾರದ ಹೊಸ ವ್ಯಾಪಾರ ನಿಯಮ ಬದಲಾವಣೆಯಿಂದ ಅಮೆರಿಕದ ಗ್ರಾಹಕರಿಗೆ ಸಮಸ್ಯೆ ಎದುರಾಗಿದೆ. ‘ಡಿ ಮಿನಿಮಿಸ್’ ವಿನಾಯಿತಿ ರದ್ದತಿಯಿಂದ, $800ಕ್ಕಿಂತ ಕಡಿಮೆ ಮೌಲ್ಯದ ಸರಕುಗಳನ್ನು ಸುಂಕರಹಿತವಾಗಿ ಆಮದು ಮಾಡಿಕೊಳ್ಳುವ ಸೌಲಭ್ಯ ಕೊನೆಗೊಂಡಿದೆ. ಇದರಿಂದ ಯುಎಸ್‌ಗೆ ಸಣ್ಣ ಸರಕುಗಳ ಆರ್ಡರ್‌ಗಳು ರದ್ದಾಗುತ್ತಿವೆ. ಇ-ಕಾಮರ್ಸ್ ವೇದಿಕೆಗಳಾದ ಎಟ್ಸಿ ಮತ್ತು ಇಬೇ ಈ ರದ್ದತಿಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ನೀಡಿವೆ.
ಈ ನಿಯಮ ಬದಲಾವಣೆಯಿಂದ 30ಕ್ಕೂ ಹೆಚ್ಚು ದೇಶಗಳು ಯುಎಸ್‌ಗೆ ತಮ್ಮ ಅಂಚೆ ಸೇವೆಗಳನ್ನು ಸ್ಥಗಿತಗೊಳಿಸಿವೆ. ಈ ಬದಲಾವಣೆಯಿಂದ ಅಮೆರಿಕದ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ತೊಂದರೆಯಾಗಿದ್ದು, ಟ್ರಂಪ್ ಆಡಳಿತದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ.