ಬಾಹ್ಯಾಕಾಶದ ಅದ್ಭುತಗಳಲ್ಲಿ ಒಂದಾದ ಸೌರ ಮಾರುತವು ಇತ್ತೀಚೆಗೆ ಭೂಮಿಯ ಕಾಂತಕ್ಷೇತ್ರವನ್ನು ಅಪ್ಪಳಿಸಿದ್ದು, ವಿಶ್ವಾದ್ಯಂತ ವಿಜ್ಞಾನಿಗಳು ಮತ್ತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಸುಮಾರು ಎರಡು ದಶಕಗಳ ನಂತರ ಸಂಭವಿಸಿದ ಈ ಅತ್ಯಂತ ಶಕ್ತಿಶಾಲಿ ಸೌರ ಚಂಡಮಾರುತವು ಭೂಮಿಯ ವಾತಾವರಣದಲ್ಲಿ ಅದ್ಭುತವಾದ ಅರೋರಾ (Aurora) ಸೃಷ್ಟಿಸಿದೆ.
ಏನಿದು ಘಟನೆ ?
ಸೂರ್ಯನ ಮೇಲ್ಮೈಯಲ್ಲಿ ಸಂಭವಿಸಿದ ತೀವ್ರತರವಾದ ಚಟುವಟಿಕೆಯಿಂದಾಗಿ ಹೊರಹೊಮ್ಮಿದ ಈ ಸೌರ ಮಾರುತವು ಮಂಗಳವಾರ ರಾತ್ರಿ ಭೂಮಿಯನ್ನು ಪ್ರವೇಶಿಸಿತು. ಇದು 2003ರ ಅಕ್ಟೋಬರ್‌ನಲ್ಲಿ ಸಂಭವಿಸಿದ ಪ್ರಸಿದ್ಧ ಹ್ಯಾಲೋವೀನ್ ಸ್ಟಾರ್ಮ್ ನಂತರ ಕಂಡುಬಂದ ಅತಿದೊಡ್ಡ ಸೌರ ವಿದ್ಯಮಾನವಾಗಿದೆ.

ಬಣ್ಣದ ಲೋಕವಾದ ಆಕಾಶ:
ಈ ಸೌರ ಮಾರುತದ ಪ್ರಭಾವದಿಂದಾಗಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಕಾಶವು ಹಸಿರು, ಕೆಂಪು ಮತ್ತು ನೇರಳೆ ಬಣ್ಣದ ದೀಪಗಳಿಂದ ಕಂಗೊಳಿಸಿತು. ಅಮೆರಿಕದ ಅಲಾಸ್ಕಾ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಚಿಕಾಗೋ ಸೇರಿದಂತೆ ಸುಮಾರು 24 ರಾಜ್ಯಗಳಲ್ಲಿ ಈ ದೃಶ್ಯ ಕಂಡುಬಂದಿದೆ. ಕೇವಲ ಅಮೆರಿಕ ಮಾತ್ರವಲ್ಲದೆ, ಯುರೋಪ್‌ನ ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಬೆಲ್ಜಿಯಂ, ನಾರ್ವೆ, ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ಸ್ ರಾಷ್ಟ್ರಗಳಲ್ಲಿಯೂ ಜನರು ಈ ನೈಸರ್ಗಿಕ ವಿಸ್ಮಯವನ್ನ ಕಣ್ಣುಂಬಿಕೊಂಡಿದ್ದಾರೆ.
ಸೌರ ಮಾರುತಕ್ಕೆ ಕಾರಣವೇನು ?
ವಿಜ್ಞಾನಿಗಳ ಪ್ರಕಾರ, ಈ ವಿದ್ಯಮಾನಕ್ಕೆ ಮುಖ್ಯ ಕಾರಣ ಕರೋನಲ್ ಮಾಸ್ ಎಜೆಕ್ಷನ್ (CME). ಸೂರ್ಯನ ಮೇಲ್ಮೈಯಿಂದ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳು ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾದಾಗ ಅದನ್ನು ಕರೋನಲ್ ಮಾಸ್ ಎಜೆಕ್ಷನ್ ಎನ್ನಲಾಗುತ್ತದೆ. ಈ ಕಣಗಳು ಬಾಹ್ಯಾಕಾಶದಲ್ಲಿ ವೇಗವಾಗಿ ಚಲಿಸಿ ಭೂಮಿಯ ಕಾಂತಕ್ಷೇತ್ರವನ್ನು ಪ್ರವೇಶಿಸುತ್ತವೆ. ಭೂಮಿಯ ವಾತಾವರಣದಲ್ಲಿರುವ ಅನಿಲಗಳೊಂದಿಗೆ ಈ ಸೌರ ಕಣಗಳು ಘರ್ಷಿಸಿದಾಗ ರಾಸಾಯನಿಕ ಪ್ರತಿಕ್ರಿಯೆ ಉಂಟಾಗಿ, ಆಕಾಶದಲ್ಲಿ ವರ್ಣರಂಜಿತ ದೀಪಗಳು ಗೋಚರಿಸುತ್ತವೆ.
![]()
ಸೌರ ಮಾರುತದ ಪರಿಣಾಮಗಳೇನು ?
ಅರೋರಾಗಳು ಕಣ್ಣಿಗೆ ಹಬ್ಬವನ್ನು ನೀಡಿದರೂ, ಇವುಗಳಿಂದ ಕೆಲವು ಅಪಾಯಗಳೂ ಉಂಟು. ಸೌರ ಮಾರುತಗಳು ಭೂಮಿಯ ಕಾಂತಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಇದರಿಂದಾಗಿ ಅಧಿಕ ವೋಲ್ಟೇಜ್‌ನಿಂದಾಗಿ ವಿದ್ಯುತ್ ಗ್ರಿಡ್‌ಗಳು ಹಾನಿಗೊಳಗಾಗಬಹುದು. ಜಿಪಿಎಸ್ (GPS), ರೇಡಿಯೋ ಸಂವಹನ ಮತ್ತು ಸ್ಯಾಟಲೈಟ್ ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾಗಬಹುದು. ಮತ್ತು ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳ ಮೇಲೆ ವಿಕಿರಣದ ಪ್ರಭಾವ ಬೀರಬಹುದು.
ಈ ಸೌರ ಮಾರುತವು ವಿಜ್ಞಾನಿಗಳಿಗೆ ಸೂರ್ಯನ ವರ್ತನೆ ಬಗ್ಗೆ ಅಧ್ಯಯನ ಮಾಡಲು ಉತ್ತಮ ಅವಕಾಶ ನೀಡಿದೆ. ತಾಂತ್ರಿಕವಾಗಿ ಕೆಲವು ಸವಾಲುಗಳನ್ನು ತಂದೊಡ್ಡಿದರೂ, ಅರೋರಾಗಳ ಮೂಲಕ ಪ್ರಕೃತಿಯ ಅತೀಂದ್ರಿಯ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಅರೋರಾ ಫೋಟೋಗಳು ಈ ಅಪರೂಪದ ಬಾಹ್ಯಾಕಾಶ ಘಟನೆಗೆ ಸಾಕ್ಷಿಯಾಗಿವೆ.





