ಜೆರುಸಲೆಮ್: ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಕ್ಯಾತೆ ತೆಗೆದಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾವಿತ ಒಪ್ಪಂದವನ್ನು ತಿರಸ್ಕರಿಸಿದ್ದು, ಇದು ಇಸ್ರೇಲ್‌ನ ರಾಷ್ಟ್ರೀಯ ಸುರಕ್ಷತೆಗೆ ಧಕ್ಕೆ ತರಬಲ್ಲದು ಎಂದು ಎಚ್ಚರಿಸಿದ್ದಾರೆ. “ಡೊನಾಲ್ಡ್ ಟ್ರಂಪ್ ಅವರ ಒಪ್ಪಂದ ನಮ್ಮನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಅಮೆರಿಕ-ಇರಾನ್ ಶಾಂತಿ ಒಪ್ಪಂದವನ್ನು ನಾವು ಒಪ್ಪೋದಿಲ್ಲ” ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯು ಅಮೆರಿಕ-ಇಸ್ರೇಲ್ ಸಂಬಂಧದಲ್ಲೇ ಒಂದು ಬಂಡಾಯದ ಸ್ವರವಾಗಿ ಕೇಳಿಬಂದಿದೆ. ನೆತನ್ಯಾಹು ಅವರು ಮತ್ತೆ ಯುದ್ಧದ ಮುನ್ಸೂಚನೆಯನ್ನೂ ನೀಡಿದ್ದಾರೆ. ಇರಾನ್ನೊಂದಿಗಿನ ಯಾವುದೇ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯನ್ನು ಹೆಚ್ಚಿಸಬಲ್ಲದು ಮತ್ತು ಇಸ್ರೇಲ್ ತನ್ನದೇ ಆದ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ. ಲೆಬನಾನ್ ವಿಚಾರದಲ್ಲಿ ಅಮೆರಿಕ ನೀಡಿರುವ ಷರತ್ತನ್ನು ಇಸ್ರೇಲ್ ತಿರಸ್ಕರಿಸಿದೆ. “ಲೆಬನಾನ್ ಮೇಲೆ ದಾಳಿ ನಡೆಸಬಾರದು ಎಂಬ ಷರತ್ತು ನಾವು ಒಪ್ಪೋದಿಲ್ಲ. ಹಿಜ್ಬುಲ್ಲಾ ಬೆದರಿಕೆ ನಮ್ಮ ಸೀಮೆಗೆ ಹತ್ತಿರವಾದಾಗ, ನಾವು ಸ್ವರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ನೆತನ್ಯಾಹು ಎಚ್ಚರಿಸಿದ್ದಾರೆ.
ಈ ನಿಲುವಿಗೆ ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮಾರ್ ಬೆನ್ ಗ್ವಿರ್ ಅವರೂ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ರಕ್ಷಣಾ ನಿಲುವಿಗೂ ಅಮೆರಿಕ-ಇರಾನ್ ಒಪ್ಪಂದಕ್ಕೂ ಯಾವುದೇ ಸಂಬಂಧವಿಲ್ಲ.. ಯಾವುದೇ ಬಾಹ್ಯ ಒತ್ತಡಕ್ಕೂ ನಾವು ಮಣಿಯುವುದಿಲ್ಲ” ಎಂದು ಬೆನ್ ಗ್ವಿರ್ ಸ್ಪಷ್ಟಪಡಿಸಿದರು. ಅವರು ಇರಾನ್ನ ಭದ್ರತಾ ಕಾರ್ಯಾಚರಣೆಗಳನ್ನು ಸಹ ಖಂಡಿಸಿದರು ಮತ್ತು ಅಮೆರಿಕದೊಂದಿಗಿನ ಮಾತುಕತೆಗಳು ಇಸ್ರೇಲ್‌ನ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಟ್ರಂಪ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಇರಾನ್ ವಿರುದ್ಧ ಕಠಿಣ ನಿಲುವು ತಳೆದಿದ್ದರು, ಆದರೆ ಇತ್ತೀಚೆಗೆ ಅವರು ಮಾತುಕತೆಗೆ ಮುಂದಾಗಿರುವುದು ಇಸ್ರೇಲ್‌ನಲ್ಲಿ ಆತಂಕ ಸೃಷ್ಟಿಸಿದೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರೆ ಮತ್ತು ಪ್ರಾದೇಶಿಕ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವುದನ್ನು ನಿಲ್ಲಿಸಿದರೆ ಮಾತ್ರ ಯಾವುದೇ ಒಪ್ಪಂದ ಇಸ್ರೇಲ್‌ಗೆ ಸ್ವೀಕಾರಾರ್ಹ ಎಂದು ನೆತನ್ಯಾಹು ಸೂಚಿಸಿದ್ದಾರೆ.





