ರಮ್ಯ, ನಿರೂಪಕಿ
ಕಾಂಗೋದ ಈಕ್ವೆಟರ್ ಪ್ರಾಂತ್ಯದ ಜನರಲ್ಲಿ ಅಳುವ ರೋಗ ಪತ್ತೆಯಾಗಿದೆ. ರೋಗ ಪತ್ತೆಯಾದ ಜನರಲ್ಲಿ ಅಳುವುದು ಪ್ರಮುಖ ಲಕ್ಷಣವಾಗಿದೆ ಎಂದು ವರದಿಯಾಗಿದೆ. ಈಕ್ವೆಟರ್ ಪ್ರಾಂತ್ಯದ ಹಳ್ಳಿಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಆರೋಗ್ಯ ಅಧಿಕಾರಿಗಳು 419 ಪ್ರಕರಣಗಳು ಮತ್ತು 53 ಸಾವುಗಳನ್ನು ವರದಿ ಮಾಡಿದ್ದಾರೆ. ಮಾನವ ಪ್ರಸರಣ ಸೇರಿದಂತೆ ರೋಗಗಳು ಹೇಗೆ ಹರಡುತ್ತಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬೊಲೊಕೊದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಅಲ್ಲಿ ಬಾವಲಿ ತಿಂದ 48 ಗಂಟೆಗಳ ಒಳಗೆ ಮೂರು ಮಕ್ಕಳು ಸಾವನ್ನಪ್ಪಿದ್ದರು. ಬೊಮೊಟೆಯಲ್ಲಿ, 400 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರಿಗೆ ಮಲೇರಿಯಾ ಪತ್ತೆಯಾಗಿದೆ. ಕಿನ್ಶಾಸಾದಿಂದ 640 ಕಿಲೋಮೀಟರ್ ದೂರದಲ್ಲಿರುವ ಈಕ್ವೆಟರ್ ಪ್ರಾಂತ್ಯದ ಎರಡು ದೂರದ ಹಳ್ಳಿಗಳಲ್ಲಿ ರೋಗಗಳು ಕಾಣಿಸಿಕೊಂಡಿದೆ. ಈ ಹಳ್ಳಿಗಳ ನಡುವಿನ ಸಂಪರ್ಕದ ಬಗ್ಗೆ ಹೆಚ್ಚಿನ ಮಾಹಿತಿ ಸ್ಪಷ್ಟವಾಗಿಲ್ಲ. ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಬಿಕೊರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಸರ್ಕಾರಿ ಪ್ರತಿಕ್ರಿಯೆ ತಂಡದ ಸದಸ್ಯರಾದ ಡಾ. ಸೆರ್ಗೆ ನಾಗಲೆಬಾಟೊ ಈ ಬಗ್ಗೆ ಪ್ರತಿಕ್ರಿಯಿಸಿ, ಮೊದಲನೆಯದಾಗಿ ಬಹಳಷ್ಟು ಸಾವುಗಳು ಸಂಭವಿಸಿದ್ದು, ನಾವು ತನಿಖೆ ಮುಂದುವರಿಸುತ್ತಿದ್ದೇವೆ. ಎರಡನೇ ಹಂತದಲ್ಲಿ ಜನರಲ್ಲಿ ಮಲೇರಿಯಾದ ಲಕ್ಷಣಗಳು ಕಾಣಿಸಿವೆ ಎಂದು ಅವರು ತಿಳಿಸಿದ್ದಾರೆ. ಸುಮಾರು 80% ರೋಗಿಗಳು ಜ್ವರ, ಶೀತ, ಮೈಕೈ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಕಾಂಗೋದ ಆರೋಗ್ಯ ಸಚಿವಾಲಯ ತಿಳಿಸಿದೆ. ರೋಗಿಗಳು ಕುತ್ತಿಗೆ ಮತ್ತು ಕೀಲು ನೋವು, ಬೆವರು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿವೆ. 59 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರ ಬಾಯಾರಿಕೆ, ಮಕ್ಕಳಲ್ಲಿ ನಿರಂತರ ಅಳುವ ಲಕ್ಷಣಗಳು ಕಾಣಿಸಿಕೊಂಡಿವೆ.
ಆರಂಭದಲ್ಲಿ ಎಬೋಲಾದಂತಹ ರಕ್ತಸ್ರಾವದ ಜ್ವರದ ಸಾಧ್ಯತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಲಾಯಿತು. ಹಲವರ ರಕ್ತ ಪರೀಕ್ಷಿಸಿದ ನಂತರ ಎಬೋಲಾ ಮತ್ತು ಮಾರ್ಬರ್ಗ್ನಂತಹ ರೀತಿಯ ರೋಗಗಳನ್ನು ತಳ್ಳಿಹಾಕಲಾಗಿದೆ. ಮಲೇರಿಯಾ, ವೈರಲ್ ಹೆಮರಾಜಿಕ್ ಜ್ವರ, ಆಹಾರ ಅಥವಾ ಕಲುಷಿತ ನೀರು, ಟೈಫಾಯಿಡ್ ಜ್ವರ ಮತ್ತು ಮೆನಿಂಜೈಟಿಸ್ ಸೇರಿದಂತೆ ಇತರ ಸಂಭಾವ್ಯ ಕಾರಣಗಳನ್ನು WHO ಈಗ ತನಿಖೆ ಮಾಡುತ್ತಿದೆ.
ಕಾಂಗೋ ಸರ್ಕಾರವು ಫೆಬ್ರವರಿ 14 ರಂದು ಸಾಂಕ್ರಾಮಿಕ ರೋಗಗಳ ತನಿಖೆ ಮತ್ತು ಹರಡುವಿಕೆಯನ್ನು ನಿಯಂತ್ರಿಸಲು ಆರೋಗ್ಯ ತಜ್ಞರನ್ನು ರೋಗ ಪೀಡಿತ ಹಳ್ಳಿಗಳಿಗೆ ಕಳುಹಿಸಿತ್ತು. ದೂರದ ಸ್ಥಳಗಳು ಮತ್ತು ಮೂಲಸೌಕರ್ಯದ ಕೊರತೆ ಚಿಕಿತ್ಸೆಗೆ ಅಡ್ಡಿಯಾಗುತ್ತಿದೆ ಎನ್ನಲಾಗ್ತಿದೆ.
ಬಾವಲಿ ಸೇವನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಜ್ಞರು, ಇಂತಹ ಆಹಾರ ಸೇವನೆಯಿಂದ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಜನರು ಕಾಡು ಪ್ರಾಣಿಗಳನ್ನು ತಿನ್ನುವುದು, ಅರಣ್ಯದಿಂದ ಮನುಷ್ಯರಿಗೆ ಬರುವ ರೋಗಗಳ ಬಗ್ಗೆ ಬಹಳ ಹಿಂದಿನಿಂದಲೂ ಕಳವಳಗಳಿವೆ. ಕಳೆದ ದಶಕದಲ್ಲಿ ಆಫ್ರಿಕಾದಲ್ಲಿ ಇಂತಹ ಕಾಯಿಲೆಗಳು 60% ಕ್ಕಿಂತ ಹೆಚ್ಚಾಗಿದೆ ಎಂದು WHO 2022 ರಲ್ಲಿ ಹೇಳಿತ್ತು.
WHO ಈ ಕಾಯಿಲೆಗೆ ಕಾರಣವೇನು..? ಇದು ಯಾವ ಕಾಯಿಲೆ..? ಇದನ್ನ ತಡೆಗಟ್ಟುವುದು ಹೇಗೆ ಅನ್ನೋದರ ಬಗ್ಗೆ ತನಿಖೆಯನ್ನ ನಡೆಸುತ್ತಿದೆ.