ಹುಬ್ಬಳ್ಳಿ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯನ್ನು ಹುಬ್ಬಳ್ಳಿಯ ಸಂಸದ ಜಗದೀಶ್ ಶೆಟ್ಟರ್ ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯು ಪಾಕಿಸ್ತಾನದಿಂದ ಪ್ರೇರಿತ ಉಗ್ರರ ಕೃತ್ಯವಾಗಿದ್ದು, ಕಾಶ್ಮೀರದಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೈಗೊಂಡ ಕ್ರಮಗಳಿಂದ ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತಿಯುತ ವಾತಾವರಣ ನೆಲೆಗೊಂಡಿತ್ತು. ಇದರಿಂದಾಗಿ ದೇಶ-ವಿದೇಶದಿಂದ ಅನೇಕ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಲು ಆರಂಭಿಸಿದ್ದರು. ಆದರೆ, ಪಾಕಿಸ್ತಾನದ ಬೆಂಬಲದಿಂದ ಉಗ್ರರು ಈ ದಾಳಿಯನ್ನು ನಡೆಸಿ ಶಾಂತಿಯನ್ನು ಕದಡಿದ್ದಾರೆ,” ಎಂದು ಜಗದೀಶ್ ಶೆಟ್ಟರ್ ಅವರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಹಿಂದೂಗಳನ್ನೇ ಗುರಿಯಾಗಿಸಲಾಗಿದೆ. ಭಾರತವು ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯುತ್ತಿರುವುದನ್ನು ಸಹಿಸಲಾಗದ ಪಾಕಿಸ್ತಾನವು ಈ ಕುತಂತ್ರವನ್ನು ರೂಪಿಸಿದೆ. ಪಾಕಿಸ್ತಾನದ ಆರ್ಥಿಕ ಮತ್ತು ರಾಜಕೀಯ ಅವನತಿಯು ಆರಂಭವಾಗಿದೆ. ಈ ದಾಳಿಯ ಮೂಲಕ ಭಾರತದ ಶಾಂತಿಯನ್ನು ಭಂಗಗೊಳಿಸಲು ಯತ್ನಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಜನತೆ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುತ್ತಾರೆ. ಈ ದಾಳಿಯಲ್ಲಿ ಮೃತರಾದವರ ಕುಟುಂಬಗಳೊಂದಿಗೆ ಇಡೀ ದೇಶ ಮತ್ತು ಭಾರತ ಸರ್ಕಾರವಿದೆ. ಈಗಾಗಲೇ ಭಾರತೀಯ ಸೇನೆಯು ಇಬ್ಬರು ಉಗ್ರರನ್ನು ಹತ್ಯೆಗೊಳಿಸಿದೆ. ಪ್ರಧಾನಿ ಮೋದಿ ಶೀಘ್ರವೇ ಈ ದಾಳಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭದ್ರತಾ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಪ್ರವಾಸಿಗರೇ ಕಾಶ್ಮೀರದ ಭದ್ರತಾ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಆದರೂ ಈ ಘಟನೆ ಸಂಭವಿಸಿದೆ. ಕಳೆದ 70 ವರ್ಷಗಳಿಂದ ಕಾಶ್ಮೀರದಲ್ಲಿ ಶಾಂತಿಯು ಸವಾಲಾಗಿತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಯಾಗಿತ್ತು. ಈ ದಾಳಿಯು ಆ ಶಾಂತಿಗೆ ಧಕ್ಕೆ ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಉಗ್ರರನ್ನು ಮತ್ತು ಅವರನ್ನು ಪೋಷಿಸುವ ಪಾಕಿಸ್ತಾನದ ನೆಲೆಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು. ಭಾರತವು ಬಲಿಷ್ಠ ರಾಷ್ಟ್ರವಾಗಿ ಮುನ್ನಡೆಯುತ್ತಿದ್ದು, ಇಂತಹ ಕೃತ್ಯಗಳಿಗೆ ಯಾವುದೇ ಕಾರಣಕ್ಕೂ ಜಾಗವಿಲ್ಲ ಎಂದು ಜಗದೀಶ್ ಶೆಟ್ಟರ್ ಒತ್ತಿಹೇಳಿದ್ದಾರೆ.