ಬೆಂಗಳೂರು, ಮೇ 26: ಬೆಂಗಳೂರು ನಗರದಲ್ಲಿ ಮತ್ತೊಂದು ಕಾಂಪೌಂಡ್ ಗೋಡೆ ಕುಸಿತದ ದುರಂತ ಸಂಭವಿಸಿದೆ. ಬೆಂಗಳೂರಿನ ಚಿಕ್ಕಬಾಣಸವಾಡಿಯಲ್ಲಿ ಕಾಂಪೌಂಡ್ ಗೋಡೆ ಕುಸಿದು 17 ವರ್ಷದ ಅಪ್ರಾಪ್ತ ಬಾಲಕ ಮೃತಪಟ್ಟಿದ್ದಾನೆ, ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಬೆಂಗಳೂರಿನಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಸಂಭವಿಸಿರುವ ಮೂರನೇ ಕಾಂಪೌಂಡ್ ಕುಸಿತ ಘಟನೆಯಾಗಿದೆ.
ನಗರದ ಚಿಕ್ಕಬಾಣಸವಾಡಿ ಪ್ರದೇಶದಲ್ಲಿ ನಿನ್ನೆ ಈ ದುರಂತ ಸಂಭವಿಸಿದೆ. ಮೃತ ಬಾಲಕನನ್ನು 17 ವರ್ಷದ ಭೀಮೇಶ್ ಎಂದು ಗುರುತಿಸಲಾಗಿದೆ. ಘಟನೆ ವೇಳೆ ಆತ ಕಾರ್ಮಿಕರ ಜೊತೆ ಕೆಲಸದ ಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಸ್ಥಳದಲ್ಲಿ ಮಣ್ಣು ತೆಗೆಯುವ ಕಾಮಗಾರಿ ನಡೆಯುತ್ತಿದ್ದು, ಅದರ ವೇಳೆ ಏಕಾಏಕಿ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಭೀಕರ ಅವಘಡ ಸಂಭವಿಸಿದೆ.
ಸುಮಾರು 4 ಅಡಿ ಎತ್ತರದ ಕಾಂಪೌಂಡ್ ಗೋಡೆಯ ಕೆಳಭಾಗದಲ್ಲಿ ಮಣ್ಣು ತೆಗೆಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಗೋಡೆಯ ಅಡಿಪಾಯ ದುರ್ಬಲಗೊಂಡು ಏಕಾಏಕಿ ಕುಸಿದಿದೆ. ಗೋಡೆ ಕುಸಿದ ತಕ್ಷಣ ಅಲ್ಲಿದ್ದ ಕಾರ್ಮಿಕರು ಹಾಗೂ ಭೀಮೇಶ್ ಅದರಡಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಕ್ಕೆ ಧಾವಿಸಿ ಗಾಯಾಳುಗಳನ್ನು ಹೊರತೆಗೆದಿದ್ದಾರೆ.
ಗಂಭೀರವಾಗಿ ಗಾಯಗೊಂಡ ಭೀಮೇಶ್‌ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಭಾರೀ ಮಳೆಗೆ ಮನೆ ಗೋಡೆ ಕುಸಿದು ಬಾಲಕಿ ಸಾ*ವು
ಯಾದಗಿರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮನೆ ಗೋಡೆ ಕುಸಿದು 8 ವರ್ಷದ ಬಾಲಕಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಈ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಈ ಮನಕಲಕುವ ಘಟನೆ ಸಂಭವಿಸಿದೆ.
ತುಮಕೂರು ಗ್ರಾಮದ ಸಿದ್ದಪ್ಪ ಎಂಬುವರಿಗೆ ಸೇರಿದ ಅಡುಗೆ ಮನೆಯ ಗೋಡೆ ನಿರಂತರ ಮಳೆಗೆ ಏಕಾಏಕಿ ಕುಸಿದಿದೆ. ಘಟನೆ ಸಂಭವಿಸಿದ ವೇಳೆ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಗೋಡೆ ಮಕ್ಕಳ ಮೇಲೆ ಬಿದ್ದ ಪರಿಣಾಮ ಅಕ್ಷತಾ (8) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಮಕ್ಕಳ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆಯ ನಂತರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಪಂ ಸಿಇಓ ಲವೀಶ್ ಒರಡಿಯಾ ಮತ್ತು ಎಸ್ಪಿ ಪೃಥ್ವಿಕ ಶಂಕರ್ ಸ್ಥಳಕ್ಕೆ ತೆರಳಿ ದುರಂತದ ಸಂಪೂರ್ಣ ಮಾಹಿತಿಯನ್ನು ಪಡೆದರು. ನಂತರ ಗಾಯಾಳುಗಳ ಆರೋಗ್ಯದ ಬಗ್ಗೆ ವಿಚಾರಿಸಿದರು.





