ಬೆಂಗಳೂರು, ಮೇ 26: ಈಗಾಗಲೇ ದಿನಸಿ, ತರಕಾರಿ, ಅನಿಲ, ಪೆಟ್ರೋಲ್ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ರಾಜ್ಯದಲ್ಲಿ ಹೋಟೆಲ್‌ಗಳಲ್ಲಿ ದೊರೆಯುವ ತಿಂಡಿ ಹಾಗೂ ಊಟದ ದರಗಳನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸುವ ಬಗ್ಗೆ ರಾಜ್ಯ ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸಿದೆ. ಗ್ಯಾಸ್ ದರ ಏರಿಕೆ, ಇಂಧನ ಬೆಲೆ ಹೆಚ್ಚಳ ಮತ್ತು ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಹಿನ್ನೆಲೆ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಸಂಘ ಹೇಳಿದೆ.
ರಾಜ್ಯ ಸರ್ಕಾರ ಇತ್ತೀಚೆಗೆ ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಳ ಮಾಡಿರುವುದು ಹೋಟೆಲ್ ಉದ್ಯಮದ ಮೇಲೆ ಭಾರೀ ಹೊರೆ ತಂದಿದೆ ಎಂದು ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಷ್ಕೃತ ವೇತನ ಜಾರಿಗೆ ಬಂದರೆ ಪ್ರತಿ ಕಾರ್ಮಿಕನಿಗೂ ಸುಮಾರು 23 ಸಾವಿರ ರೂ. ವೇತನ ನೀಡಬೇಕಾಗುತ್ತದೆ. ಇದರ ಜೊತೆಗೆ ಪಿಎಫ್, ವಸತಿ, ಊಟ ಹಾಗೂ ಇತರ ಸೌಲಭ್ಯಗಳನ್ನು ಸೇರಿಸಿದರೆ ಒಬ್ಬ ಕಾರ್ಮಿಕನಿಗೆ ತಿಂಗಳಿಗೆ 30 ರಿಂದ 35 ಸಾವಿರ ರೂ.ವರೆಗೆ ವೆಚ್ಚವಾಗಲಿದೆ ಎಂದು ಮಾಲೀಕರು ಹೇಳಿದ್ದಾರೆ.
ಸಾಮಾನ್ಯವಾಗಿ ಒಂದು ಹೋಟೆಲ್‌ನಲ್ಲಿ ಐದು ರಿಂದ ಆರು ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ. ಈ ಪ್ರಮಾಣದ ವೇತನ ನೀಡಿದರೆ ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಶುಲ್ಕ, ತೆರಿಗೆ ಮತ್ತು ಇತರ ನಿರ್ವಹಣಾ ವೆಚ್ಚಗಳನ್ನು ಭರಿಸುವುದು ಅಸಾಧ್ಯವಾಗುತ್ತದೆ ಎಂದು ಹೋಟೆಲ್ ಮಾಲೀಕರ ಸಂಘ ಎಚ್ಚರಿಸಿದೆ.
ಇದೇ ಕಾರಣದಿಂದ ಹೋಟೆಲ್ ತಿಂಡಿ ಹಾಗೂ ಊಟದ ದರಗಳನ್ನು ಒಂದೂವರೆ ಪಟ್ಟು ಅಥವಾ ಎರಡು ಪಟ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಬಹುದು ಎಂದು ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ತಿಳಿಸಿದ್ದಾರೆ. ಪ್ರಸ್ತುತ 40 ರಿಂದ 45 ರೂ. ಇರುವ ಒಂದು ಪ್ಲೇಟ್ ಇಡ್ಲಿಯ ದರ 80 ರಿಂದ 90 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಮಸಾಲೆ ದೋಸೆಯ ಬೆಲೆ 150 ರೂ. ದಾಟಬಹುದು. ಸಸ್ಯಾಹಾರಿ ಊಟದ ದರ 250 ರಿಂದ 300 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಬಿರಿಯಾನಿ ಬೆಲೆ 500 ರೂ. ತಲುಪುವ ಆತಂಕ ವ್ಯಕ್ತವಾಗಿದೆ.
ಹೋಟೆಲ್ ಉದ್ಯಮ ಈಗಾಗಲೇ ಅಡುಗೆ ಅನಿಲದ ಬೆಲೆ ಏರಿಕೆ, ಡೀಸೆಲ್ ಹಾಗೂ ಪೆಟ್ರೋಲ್ ದರ ಏರಿಕೆಗಳಿಂದ ಸಂಕಷ್ಟದಲ್ಲಿದೆ. ದಿನೇ ದಿನೇ ಹೆಚ್ಚುತ್ತಿರುವ ವಾಣಿಜ್ಯ ಗ್ಯಾಸ್ ದರಗಳು ಸಣ್ಣ ಮತ್ತು ಮಧ್ಯಮ ಹೋಟೆಲ್‌ಗಳಿಗೆ ದೊಡ್ಡ ಹೊರೆ ತಂದಿವೆ. ಇದರ ನಡುವೆ ಕಾರ್ಮಿಕರ ವೇತನದಲ್ಲಿ ಏಕಾಏಕಿ ದೊಡ್ಡ ಪ್ರಮಾಣದ ಏರಿಕೆ ಮಾಡಿರುವುದು ಉದ್ಯಮವನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ಮಾಲೀಕರು ಹೇಳಿದ್ದಾರೆ.
ಇನ್ನೊಂದೆಡೆ, ಹೋಟೆಲ್ ದರ ಏರಿಕೆಯಿಂದ ಜನಸಾಮಾನ್ಯರ ಖರ್ಚು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.





