ಬೆಂಗಳೂರು ಸೆ.18: ಹಣಕ್ಕಾಗಿ 13 ವರ್ಷದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಬೆಂಗಳೂರು ಯಲಹಂಕದ ವಿನಾಯಕ ನಗರದಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಪಕ್ಕದ ಮನೆಯ ನಿವಾಸಿ ಭಾಸ್ಕರ್ ರೆಡ್ಡಿ ಎಂಬಾತನೇ ಬಾಲಕನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಸಂಜೆ ಗಣಪತಿ ವಿಸರ್ಜನೆಗೆ ಪಟಾಕಿ ತರಬೇಕೆಂದು ಹೇಳಿ ಭಾಸ್ಕರ್ ರೆಡ್ಡಿ ಬಾಲಕ ಪ್ರಜ್ವಲ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದ ಎನ್ನಲಾಗಿದೆ. ಆದರೆ ಬಳಿಕ ಬಾಲಕನನ್ನು ಕಾರಿನಲ್ಲೇ ಇರಿಸಿಕೊಂಡು, ಆತನ ಪೋಷಕರಿಗೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಪೋಷಕರಿಗೆ ಬೆದರಿಕೆ ಹಾಕಲು ಬಾಲಕನಿಂದಲೇ ವಿಡಿಯೋ ಮಾಡಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಮದ್ಯದ ಅಮಲಿನಲ್ಲಿದ್ದ ಭಾಸ್ಕರ್ ರೆಡ್ಡಿ, ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಹಾಲೋಬ್ರಿಕ್ಸ್‌ನಿಂದ ಹೊಡೆದು ಬಾಲಕನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಬಳಿಕ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದ ವೇಳೆ ಆರೋಪಿ ಗಾಬರಿಗೊಂಡು ಕಾರನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ. ನಂತರ ಬಳ್ಳಾರಿ ಸರ್ವೀಸ್ ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಸರಣಿ ಅಪಘಾತ ಉಂಟಾಗಿದೆ. ಈ ವೇಳೆ ಸ್ಥಳೀಯರು ಕಾರನ್ನು ತಡೆದು ಆರೋಪಿಯನ್ನು ಹಿಡಿದಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಚಿಕ್ಕಜಾಲ ಪೊಲೀಸರು ಕಾರನ್ನು ಪರಿಶೀಲಿಸಿದ್ದಾರೆ. ಕಾರಿನ ಡಿಕ್ಕಿ ತೆರೆದಾಗ ಅದರೊಳಗೆ ಬಾಲಕನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.
ವಿಚಾರಣೆ ವೇಳೆ ಭಾಸ್ಕರ್ ರೆಡ್ಡಿ ಪೊಲೀಸರನ್ನು ದಾರಿ ತಪ್ಪಿಸಲು ಅಪಘಾತದ ಕಥೆ ಕಟ್ಟಿದ್ದ ಎನ್ನಲಾಗಿದೆ. ದಾರಿಯಲ್ಲಿ ಬಾಲಕ ಕಾರಿಗೆ ಅಡ್ಡ ಬಂದು ಮೃತಪಟ್ಟಿದ್ದಾನೆ. ತನ್ನ ಸ್ನೇಹಿತನ ಸಲಹೆಯಂತೆ ಮೃತದೇಹವನ್ನು ತೆಗೆದುಕೊಂಡು ಆಂಧ್ರಪ್ರದೇಶದ ಕಡೆಗೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಆದರೆ ಪ್ರಾಥಮಿಕ ತನಿಖೆ ವೇಳೆ ಆರೋಪಿಯ ಹೇಳಿಕೆಯಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಬಾಲಕನನ್ನು ಹಲ್ಲೆ ನಡೆಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಭಾಸ್ಕರ್ ರೆಡ್ಡಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳೀಯರು ಮತ್ತು ಪೊಲೀಸರ ಸಮಯಪ್ರಜ್ಞೆಯಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕನ ಅಪಹರಣ ಹಾಗೂ ಕೊಲೆಯ ಹಿಂದಿನ ಉದ್ದೇಶ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.





