ನೆಲಮಂಗಲ ಸೆ. 12: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 80ರ ದಶಕದ ಫೋಟೋ ಎಡಿಟಿಂಗ್ ಟ್ರೆಂಡ್ ಇದೀಗ ಸೈಬರ್ ಸುರಕ್ಷತೆಯ ದೃಷ್ಟಿಯಿಂದ ಆತಂಕಕ್ಕೆ ಕಾರಣವಾಗಿದೆ. ಹಳೆಯ ಕಾಲದ ಫೋಟೋಗಳಂತೆ ತಮ್ಮ ಚಿತ್ರಗಳನ್ನು ಪರಿವರ್ತಿಸಿಕೊಳ್ಳಲು ಜನರು ವಿವಿಧ ಆ್ಯಪ್‌ಗಳು, ವೆಬ್‌ಸೈಟ್‌ಗಳು ಹಾಗೂ ಆನ್‌ಲೈನ್ ಲಿಂಕ್‌ಗಳನ್ನು ಬಳಸುತ್ತಿದ್ದು, ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ಮಾದನಾಯಕನಹಳ್ಳಿ ಪೊಲೀಸರು ಸಾರ್ವಜನಿಕರಿಗೆ ಸೂಚಿಸಿದ್ದಾರೆ.
ಟ್ರೆಂಡಿಂಗ್ ಫೋಟೋ ಎಡಿಟಿಂಗ್ ಹೆಸರಿನಲ್ಲಿ ಸೈಬರ್ ವಂಚಕರು ಜನರನ್ನು ಸೆಳೆಯುವ ಸಾಧ್ಯತೆ ಇದೆ. ವಿಶೇಷವಾಗಿ ಅಪರಿಚಿತ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಕೆಲವು ಅಪ್ಲಿಕೇಶನ್‌ಗಳು ಫೋಟೋ ಎಡಿಟಿಂಗ್‌ಗಾಗಿ ಮೊಬೈಲ್‌ನ ಗ್ಯಾಲರಿ, ಕ್ಯಾಮೆರಾ ಅಥವಾ ಇತರ ಮಾಹಿತಿಗಳಿಗೆ ಅನುಮತಿ ಕೇಳಬಹುದು. ಅಗತ್ಯವಿಲ್ಲದಿದ್ದರೂ ಇಂತಹ ಅನುಮತಿಗಳನ್ನು ನೀಡಿದರೆ ವೈಯಕ್ತಿಕ ಫೋಟೋಗಳು ಹಾಗೂ ಇತರ ಖಾಸಗಿ ಮಾಹಿತಿಯ ದುರುಪಯೋಗವಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಅದರ ವಿಶ್ವಾಸಾರ್ಹತೆ ಹಾಗೂ ಅನುಮತಿಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಫೋಟೋ ಎಡಿಟಿಂಗ್ ಅಥವಾ ಹೊಸ ಮಾದರಿಯ ಚಿತ್ರ ಸೃಷ್ಟಿಸುವ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ವೈಯಕ್ತಿಕ ದಾಖಲೆಗಳ ವಿವರ, ಪಾಸ್‌ವರ್ಡ್, ಬ್ಯಾಂಕ್ ಖಾತೆ ಮಾಹಿತಿ, OTP ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕೇಳುವ ಸಾಧ್ಯತೆಯೂ ಇದೆ. ಇಂತಹ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅಪರಿಚಿತ ವ್ಯಕ್ತಿಗಳು ಅಥವಾ ಅನುಮಾನಾಸ್ಪದ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರೆಂಡಿಂಗ್ ವಿಷಯಗಳನ್ನು ಬಳಸಿಕೊಂಡು ಸೈಬರ್ ಖದೀಮರು ಜನರನ್ನು ಸುಲಭವಾಗಿ ಬಲೆಗೆ ಬೀಳಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗ್ರತೆ ವಹಿಸಬೇಕು. ಒಂದು ಕ್ಷಣದ ಟ್ರೆಂಡ್‌ಗಾಗಿ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ತಳ್ಳಬಾರದು. ಅಪರಿಚಿತ ಲಿಂಕ್‌ಗಳನ್ನು ತೆರೆಯದೆ, ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ.
‘ಟ್ರೆಂಡ್‌ಗಿಂತ ಸುರಕ್ಷತೆ ಮುಖ್ಯ’ ಎಂಬ ಸಂದೇಶದೊಂದಿಗೆ ಮಾದನಾಯಕನಹಳ್ಳಿ ಪೊಲೀಸರು ಜನಜಾಗೃತಿ ಮೂಡಿಸಿದ್ದಾರೆ. ಆನ್‌ಲೈನ್ ವಂಚನೆಗೆ ಒಳಗಾದರೆ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಸೈಬರ್ ಕ್ರೈಂ ಹೆಲ್ಪ್‌ಲೈನ್ 1930ಕ್ಕೆ ಕರೆ ಮಾಡಿ ದೂರು ನೀಡುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.





