ಪರಭಾಷಾ ಲೇಡಿ ಸೂಪರ್ಸ್ಟಾರ್ಗಳ ಜೊತೆ ಮಿಂಚಿದ ಕೂರ್ಗ್ ಚೆಲುವೆಗೆ ಕನ್ನಡದಲ್ಲೇ ಯಾರೂ ಕ್ಯಾರೆ ಅಂದಿಲ್ಲ. ನಾನು ಕನ್ನಡದವಳು ಅಂತ ಗೊತ್ತಿದ್ದೂ 10 ವರ್ಷ ನನಗೆ ಯಾಕೆ ಚಾನ್ಸ್ ಕೊಡಲಿಲ್ಲ..? ಹೀಗಂತ ಖುದ್ದು ಸ್ಯಾಂಡಲ್ವುಡ್ಗೆ ಪ್ರಶ್ನೆ ಮಾಡಿದ್ದಾರೆ ನಟಿ ವರ್ಷ ಬೊಳ್ಳಮ್ಮ. ಚಿನ್ನಾರಿ ಮುತ್ತ- ಶಿವಣ್ಣನ ಮಹಾನ್ ಚಿತ್ರದಲ್ಲಿ ನಟಿಸಿರೋ ಈಕೆಯ ಈ ರೀಸೆಂಟ್ ಸ್ಟೇಟ್ಮೆಂಟ್ ಚರ್ಚೆಗೆ ಗ್ರಾಸವಾಗಿದೆ. ಇದರ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…
- ಆಫರ್ಗಾಗಿ 10 ವರ್ಷ ವೆಯ್ಟಿಂಗ್.. ಕನ್ನಡತಿನೇ ಮರೆತುಬಿಟ್ರಾ?
- ಲೀಡರ್ ಬಳಿಕ ಮತ್ತೆ ಒಂದಾದ್ರು ಶಿವಣ್ಣ- ವಿಜಯ ರಾಘವೇಂದ್ರ
- ಒಡಹುಟ್ಟಿದವಳು.. ಅಣ್ಣ-ತಂಗಿ ಬಾಂಧವ್ಯಕ್ಕೆ ಸಂಗೀತದ ಸ್ಪರ್ಶ..!
- ರೈತನ ಬದುಕು.. ಅಣ್ಣ-ತಂಗಿ ಅನುಬಂಧ.. ಮಹಾನ್ ಕಥೆಯಿದು
ಸ್ಯಾಂಡಲ್ವುಡ್ನಲ್ಲಿ ವಿಭಿನ್ನ ಹಾಗೂ ಸದಭಿರುಚಿಯ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ನಿರ್ದೇಶಕ ಪಿ.ಸಿ. ಶೇಖರ್ ಗರಡಿಯಲ್ಲಿ ಮೂಡಿಬರುತ್ತಿರುವ ಮಹಾನ್ ಸಿನಿಮಾದ ಒಡಹುಟ್ಟಿದವಳು ಅನ್ನೋ ಭಾವನಾತ್ಮಕ ಹಾಡು ರಿಲೀಸ್ ಆಗಿ ಧೂಳೆಬ್ಬಿಸುತ್ತಿದೆ. ಅರ್ಜುನ್ ಜನ್ಯ ಮ್ಯೂಸಿಕ್ನಲ್ಲಿ ಸಿದ್ ಶ್ರೀರಾಮ್ ಹಾಗೂ ಲಹರಿ ಹಾಡಿರೋ ಈ ಸಿಬ್ಲಿಂಗ್ ಆಂಥಂ ಸದ್ಯ ಗಾಂಧಿನಗರದ ಹಾಟ್ ಟಾಪಿಕ್. ಪ್ರಕಾಶ್ ಬೂದೂರು ನಿರ್ಮಾಣದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ವಿಜಯ ರಾಘವೇಂದ್ರ ರೈತನಾಗಿ ಕಾಣಿಸಿಕೊಂಡ್ರೆ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಸ್ಪೆಷಲ್ ರೋಲ್ನಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಇಡೀ ಸಿನಿಪ್ರಿಯರ ಗಮನ ಈ ಸಿನಿಮಾ ಕಡೆಗೆ ತಿರುಗಿರುವ ಬೆನ್ನಲ್ಲೇ, ಕಾರ್ಯಕ್ರಮದಲ್ಲಿದ್ದ ಕೊಡಗಿನ ಸುಂದರಿ ವರ್ಷ ಬೊಳ್ಳಮ್ಮ ಆಡಿದ ಒಂದು ಮಾತು ಸದ್ಯ ಸ್ಯಾಂಡಲ್ವುಡ್ ಅಂಗಳದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ತಮಿಳು-ತೆಲುಗು ಚಿತ್ರರಂಗದಲ್ಲಿ 96, ಬಿಗಿಲ್ ನಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದ ಕೊಡಗಿನ ಬೆಡಗಿ ವರ್ಷ ಬೊಳ್ಳಮ್ಮ, ಮೂಲತಃ ಕನ್ನಡದವರಾಗಿದ್ದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಬರೋಬ್ಬರಿ 10 ವರ್ಷ ಬೇಕಾಯ್ತು. “ನಾನು ಪಕ್ಕಾ ಕನ್ನಡತಿ ಅನ್ನೋದೇ ಇಲ್ಲಿನ ಜನರಿಗೆ ಗೊತ್ತಿರಲಿಲ್ಲ ಅನಿಸುತ್ತೆ, ನನಗೆ ಕನ್ನಡದಲ್ಲಿ ಆಫರ್ ಸಿಗೋಕೆ 10 ವರ್ಷ ತಗೋತು. ಆಫರ್ ಬಂದ್ರೂ ಬರೀ 5-10 ನಿಮಿಷ ಬಂದು ಹೋಗೋ ಪಾತ್ರಗಳನ್ನೇ ಕೊಡ್ತಿದ್ರು. ಆದ್ರೆ ಮಹಾನ್ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಅವರ ತಂಗಿಯಾಗಿ, ಸಿನಿಮಾ ಪೂರ್ತಿ ನೆಲೆಸಿರೋ ಫುಲ್ ಫ್ಲೆಡ್ಜ್ ಪಾತ್ರ ಸಿಕ್ಕಿದೆ ಎಂದು ವೇದಿಕೆಯಲ್ಲೇ ವರ್ಷ ಬೊಳ್ಳಮ್ಮ ತಮ್ಮ ಅಸಮಾಧಾನ ಹಾಗೂ ಖುಷಿಯನ್ನು ಹಂಚಿಕೊಂಡಿದ್ದಾರೆ.
ಲೀಡರ್ ಸಿನಿಮಾದ ಬಳಿಕ ಶಿವಣ್ಣ ಹಾಗೂ ವಿಜಯ ರಾಘವೇಂದ್ರ ಮತ್ತೆ ಒಂದಾಗಿ ನಟಿಸುತ್ತಿರುವ ಸಿನಿಮಾ ಮಹಾನ್. ವಿಜಯ್ ರಾಘವೇಂದ್ರ ಅವರ 22 ವರ್ಷಗಳ ಸಿನಿ ಪಯಣದಲ್ಲೇ ಮೈಲಿಗಲ್ಲಾಗಲಿದೆಯಂತೆ. ರೈತನ ನೈಜ ಕಥೆ ಹಾಗೂ ಅಣ್ಣ-ತಂಗಿಯ ಬಾಂಧವ್ಯದ ಸುತ್ತ ಹೆಣೆದಿರುವ ಈ ಕಥೆಯಲ್ಲಿ ಖಳನಟ ಶರತ್ ಲೋಹಿತಾಶ್ವ ಸಾಧುವಿನಂತಿರುವ ಖೇಡಿಯಾಗಿ ಖದರ್ ತೋರಿಸಿದ್ದರೆ, ನಟ ಮಿತ್ರ ವಿಭಿನ್ನ ಗೆಟಪ್ನಲ್ಲಿ ಧಮಾಕ ಎಬ್ಬಿಸಲು ಸಜ್ಜಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಒಡಹುಟ್ಟಿದವಳು ಹಾಡು ವಿಜಯ ರಾಘವೇಂದ್ರ ಅವರ ತಂಗಿ ವೀಣಾ ಅವರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಪ್ರತಿಯೊಬ್ಬ ಕನ್ನಡಿಗನ ಮನಸಿಗೆ ಈ ಸೋದರ-ಸೋದರಿಯ ಬಾಂಧವ್ಯದ ಹಾಡು ನೇರವಾಗಿ ತಲುಪುತ್ತಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





