ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ವೈವಾಹಿಕ ಜೀವನ ಮತ್ತು ಮದುವೆ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಪ್ರಸಾರವಾದ ‘ಕಾಫಿ ವಿತ್ ಕರಣ್ ಸೀಸನ್ 9’ ಕಾರ್ಯಕ್ರಮದಲ್ಲಿ ಅವರು ಜೊತೆಯಾಗಿ ಭಾಗವಹಿಸಿದ ನಂತರ ನೆಟ್ಟಿಗರು ಕಟುವಾಗಿ ಟೀಕಿಸಲು ಆರಂಭಿಸಿದ್ದಾರೆ. ಈ ಟೀಕೆಗಳಿಗೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಮದುವೆಯ ಪ್ರಸ್ತಾವನೆಯ ಬಗ್ಗೆ ಮಾತನಾಡುತ್ತಾ, “ನನ್ನನ್ನು ಮದುವೆಯಾಗಲು ರಶ್ಮಿಕಾ ದಿನವೂ ಕೇಳುತ್ತಿದ್ದಳು. ಸುಮಾರು 100 ಬಾರಿ ಕೇಳಿದ ನಂತರವೇ ನಾನು ಮದುವೆಗೆ ಒಪ್ಪಿಗೆ ನೀಡಿದೆ” ಎಂದು ಹೇಳಿದ್ದರು. ಈ ಮಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸಲಾಯಿತು. ವಿಜಯ್ ಅವರು ರಶ್ಮಿಕಾ ಅವರನ್ನು ಕೀಳಾಗಿ ಕಂಡಿದ್ದಾರೆ ಮತ್ತು ಅವರದ್ದು ಸ್ತ್ರೀದ್ವೇಷಿ ಮನೋಭಾವ ಎಂದು ಹಲವರು ಕಮೆಂಟ್ ಮಾಡಿದ್ದರು. ವಿಜಯ್ ಅವರನ್ನು “ರೆಡ್ ಫ್ಲ್ಯಾಗ್” ಎಂದು ಕರೆಯುವವರೂ ಇದ್ದರು.
ಈ ಹಿನ್ನೆಲೆ ರಶ್ಮಿಕಾ ಮಂದಣ್ಣ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡು ತಮ್ಮ ಮತ್ತು ವಿಜಯ್ ನಡುವಿನ ವೈಯಕ್ತಿಕ ವಿಚಾರಗಳ ಬಗ್ಗೆ ಅನಗತ್ಯವಾಗಿ ಮಾತನಾಡುತ್ತಿರುವವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಭಾವನಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ, ಆದರೆ ವಿಜಯ್ ಪ್ರತಿಯೊಂದನ್ನೂ ಪ್ರಾಯೋಗಿಕವಾಗಿ ಯೋಚಿಸುತ್ತಾರೆ. ಮದುವೆಯಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕಾಲಾವಕಾಶ ತೆಗೆದುಕೊಂಡು ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯವಾಗಿತ್ತು. ಅದರಲ್ಲಿ ಯಾವುದೇ ತಪ್ಪಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ನಮಗೆ ಮೊಣಕಾಲೂರಿ ರಿಂಗ್ ತೊಡಿಸುವ ಗ್ರಾಂಡ್ ಪ್ರಪೋಸಲ್ ಅಗತ್ಯವಿರಲಿಲ್ಲ. ನಮಗೆ ಮುಖ್ಯವಾಗಿದ್ದು ನಮ್ಮ ಭವಿಷ್ಯ ಮತ್ತು ಜೊತೆಯಾಗಿ ಕಟ್ಟಿಕೊಳ್ಳಬೇಕಾದ ಜೀವನ. ನಮ್ಮಿಬ್ಬರ ಸಂದರ್ಶನವನ್ನು ಜನರು ಅರ್ಥಮಾಡಿಕೊಳ್ಳುವ ಬದಲು ಅನಗತ್ಯವಾಗಿ ಟೀಕಿಸಲು ಶುರು ಮಾಡಿದ್ದಾರೆ. ನಮಗೆ ಸಲಹೆ ನೀಡಲು ಗ್ಯಾಂಗ್ ಕಟ್ಟಿಕೊಂಡು ಬಂದಂತೆ ವರ್ತಿಸುತ್ತಿದ್ದಾರೆ. ನಮ್ಮ ಕುಟುಂಬದ ವಿಚಾರಗಳನ್ನು ಎಳೆದು ತರುವುದು ಸಂಪೂರ್ಣವಾಗಿ ಗಡಿ ದಾಟಿದ ನಡವಳಿಕೆ” ಎಂದು ರಶ್ಮಿಕಾ ಕಿಡಿಕಾರಿದ್ದಾರೆ.
“ನಾವಿಬ್ಬರೂ ಸ್ವಪ್ರಯತ್ನದಿಂದ ಬೆಳೆದು ಬಂದಿರುವ ಸ್ವತಂತ್ರ ವ್ಯಕ್ತಿಗಳು. ನಾವಿಬ್ಬರೂ ಪರಸ್ಪರ ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಪ್ರೀತಿ ನಿಮ್ಮ ಕಲ್ಪನೆಗೆ ಹೊಂದಿಕೆಯಾಗದಿದ್ದರೆ ಅದಕ್ಕೆ ನಾವೇನೂ ಮಾಡಲು ಸಾಧ್ಯವಿಲ್ಲ” ಎಂದು ಅವರು ನೆಟ್ಟಿಗರಿಗೆ ಸ್ಪಷ್ಟಪಡಿಸಿದ್ದಾರೆ.
ರಶ್ಮಿಕಾ ಅವರು ತಮ್ಮ ಪೋಸ್ಟ್ನಲ್ಲಿ, “ನಮ್ಮ ಬಗ್ಗೆ ನಡೆಯುತ್ತಿರುವ ಚರ್ಚೆ ನೋಡಿ ಬೇಸರವಾಗಿದೆ. ನಮ್ಮ ಮೇಲೆ ಜನರ ಕಮೆಂಟ್ ಅಟ್ಯಾಕ್ ನಿಜಕ್ಕೂ ನಡುಗಿಸಿತು. ನಮ್ಮಿಬ್ಬರ ಮದುವೆ ನಿರ್ಧಾರ ಕೇವಲ ಒಂದು ವರ್ಷದ ಲೆಕ್ಕಾಚಾರವಾಗಿರಲಿಲ್ಲ. ಸರಿಯಾಗಿ ಯೋಚಿಸಿ ಇಬ್ಬರೂ ಮದುವೆ ನಿರ್ಧಾರ ಮಾಡಿದ್ದೆವು. ನಮ್ಮ ಸ್ವಭಾವ ಬೇರೆ ಬೇರೆಯಾಗಿದ್ದರೂ ಒಬ್ಬರಿಗೊಬ್ಬರು ಬೇಕಾಗಿದ್ದೇವೆ. ಮದುವೆ ಎಂದರೆ ಪ್ರಪೋಸಲ್, ಮೊಣಕಾಲೂರಿ ಉಂಗುರ ತೊಡಿಸುವುದಷ್ಟೇ ಅಲ್ಲ. ಒಟ್ಟಿಗೆ ಜೀವನ ಮತ್ತು ಭವಿಷ್ಯ ಕಟ್ಟುವುದೇ ನಿಜವಾದ ಮದುವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, “ವಿಜಯ್ ನನ್ನ ಜೀವನ ಪರ್ಯಂತದ ಸಂಗಾತಿ. ನನ್ನ ಮಕ್ಕಳ ತಂದೆ, ಜೀವನಪೂರ್ತಿ ನನ್ನ ಜೊತೆಯಾಗಿರುವ ವ್ಯಕ್ತಿ. ಪ್ರೀತಿಯನ್ನು ನಂಬುವವರ ಪರವಾಗಿ ಈ ಪೋಸ್ಟ್ ಹಂಚಿಕೊಂಡಿದ್ದೇನೆ” ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಮತ್ತು ವಿಜಯ್ ಅವರ ಮದುವೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.





