ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಮಹಿಳೆಯರ, ವಿಶೇಷವಾಗಿ ನಟಿಯರ ಚಿತ್ರಗಳನ್ನು ಅಶ್ಲೀಲವಾಗಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಘಟನೆಗಳು ಹೆಚ್ಚುತ್ತಿವೆ. ಇದೀಗ ಜನಪ್ರಿಯ ತೆಲುಗು ನಟಿ ಮತ್ತು ನಿರೂಪಕಿ ಅನುಸೂಯ ಭಾರಧ್ವಾಜ್ ಅವರ ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಇಬ್ಬರು ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜನಾರ್ದನ್ (29) ಮತ್ತು ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಬ್ಬರು ಆರೋಪಿಗಳು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿಕೊಂಡು ನಟಿ ಅನುಸೂಯ ಅವರ ಫೋಟೋಗಳನ್ನು ತಿರುಚಿ ಅಶ್ಲೀಲ ವಿಡಿಯೋಗಳನ್ನು ಸೃಷ್ಟಿಸಿದ್ದರು. ನಂತರ ಆ ವಿಡಿಯೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ನಟಿಯ ಮಾನಹಾನಿ ಮಾಡುವ ಕೆಲಸ ಮಾಡುತ್ತಿದ್ದರು.
ಈ ಘಟನೆ ಕುರಿತು ನಟಿ ಅನುಸೂಯ ಭಾರಧ್ವಜ ಕಳೆದ ವರ್ಷ ಡಿಸೆಂಬರ್ 23ರಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ತಮ್ಮ ವಿರುದ್ಧ ಕೆಲವು ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಮಾನಹಾನಿಕರ, ನಿಂದನಾತ್ಮಕ ಹಾಗೂ ಅಶ್ಲೀಲ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ಇಂತಹ ಪೋಸ್ಟ್ಗಳು ತಮ್ಮ ಗೌರವ ಮತ್ತು ಖ್ಯಾತಿಗೆ ಧಕ್ಕೆ ತರುತ್ತಿವೆ ಎಂದು ಹೇಳಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.
ದೂರು ಸ್ವೀಕರಿಸಿದ ಬಳಿಕ ಸೈಬರಾಬಾದ್ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ತನಿಖೆಯ ವೇಳೆ ಹೈದರಾಬಾದ್ನಲ್ಲಿ ವಾಸವಿದ್ದ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಮೂಲದ ಜನಾರ್ದನ್ ಎಂಬಾತ ಮುಖ್ಯ ಆರೋಪಿಯಾಗಿರುವುದು ಪತ್ತೆಯಾಯಿತು. ಈತ ‘@mmtt_official’ ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ನಡೆಸುತ್ತಿದ್ದನು. ಆ ಖಾತೆಯ ಮೂಲಕ ನಟಿ ಅನುಸೂಯ ಸೇರಿದಂತೆ ಇನ್ನೂ ಕೆಲ ನಟಿಯರನ್ನು ಗುರಿಯಾಗಿಸಿಕೊಂಡು ಎಐ ಬಳಸಿ ಸೃಷ್ಟಿಸಿದ ಅಶ್ಲೀಲ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಎರಡನೇ ಆರೋಪಿಯಾದ ಅರುಣ್ ಕುಮಾರ್, ಸಿಕಂದರಾಬಾದ್ನ ಪಶ್ಚಿಮ ಮಾರೇಡ್ಪಲ್ಲಿ ಪ್ರದೇಶದ ನಿವಾಸಿಯಾಗಿದ್ದು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದನು. ಈತ ಯೂಟ್ಯೂಬ್ ರೀಲ್ಸ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಅನುಸೂಯ ವಿರುದ್ಧ ಅಸಭ್ಯ ಹಾಗೂ ಅವಮಾನಕಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದನು. ಈ ಮೂಲಕ ಆನ್ಲೈನ್ನಲ್ಲಿ ನಟಿಗೆ ಕಿರುಕುಳ ನೀಡುತ್ತಿದ್ದನೆಂದು ಪೊಲೀಸರು ಹೇಳಿದ್ದಾರೆ. ಪೊಲೀಸರು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ..





