ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ. ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಅಪಘಾತದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಿಟ್ ನಂ. 12 ಬಳಿ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭರತ್ ಕಾಂತ್ ಯಾರು?
ಭರತ್ ಕಾಂತ್ ಅವರು ‘ಗ್ರಾಮಂ’, ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ‘ಗೀತಾಂಜಲಿ’ ಮತ್ತು ‘ಪಾರ್ವತಿ ಪರಮೇಶ್ವರಲು’ ಸೇರಿದಂತೆ ಜನಪ್ರಿಯ ವೆಬ್ ಸರಣಿಗಳಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.
ಆಶು ರೆಡ್ಡಿ ಭಾವುಕ ಪ್ರತಿಕ್ರಿಯೆ : ಭರತ್ ಅವರ ಆಪ್ತ ಗೆಳತಿ ಮತ್ತು ನಟಿ ಆಶು ರೆಡ್ಡಿ ಅವರು ಈ ಸುದ್ದಿಯಿಂದ ತೀವ್ರ ದಿಗ್ಭ್ರಾಂತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, “ನನ್ನ ಆತ್ಮೀಯ ಗೆಳೆಯ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್. ನಿನ್ನ ನಗು ಯಾವಾಗಲೂ ನೆನಪಿರುತ್ತದೆ” ಎಂದು ಭಾವುಕರಾಗಿ ಬರೆದಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಶಂಕಿಸಿದ್ದಾರೆ. ಮೃತರ ದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭರತ್ ಕಾಂತ್ ಅವರ ಅಕಾಲಿಕ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.





