ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ದೇವ (Deva) ನಿಧನರಾಗಿದ್ದಾರೆ. ‘ತೆನಿಸೈ ತೆಂದ್ರಲ್’ ಎಂಬ ಬಿರುದಿನಿಂದ ಖ್ಯಾತಿ ಪಡೆದಿದ್ದ ದೇವ, ಹಲವು ದಶಕಗಳ ಕಾಲ ತಮ್ಮ ಸಂಗೀತದ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಮಡಿದ್ದರು. ರಜನಿಕಾಂತ್ ಅಭಿನಯದ ‘ಬಾಷಾ’, ‘ಅಣ್ಣಾಮಲೈ’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ಅವರು, ಸಾವಿರಾರು ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು.
ಮಾಹಿತಿಯ ಪ್ರಕಾರ, ದೇವ ಅವರನ್ನು ಅಕ್ಟೋಬರ್ 17ರಂದು ಬೆಳಗ್ಗೆ 8.30ರ ಸುಮಾರಿಗೆ ಚೆನ್ನೈನ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಹೃದಯಾಘಾತದಿಂದ ನಿಧನರಾದರು ಎಂದು ವರದಿಯಾಗಿದೆ. ಅವರ ನಿಧನದ ಸುದ್ದಿ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಲ್ಲಿ ದುಃಖ ಮೂಡಿಸಿದೆ.
ದೇವ ಅವರ ಪೂರ್ಣ ಹೆಸರು ದೇವನೇಸನ್ ಚೊಕ್ಕಲಿಂಗಂ
ದೇವ ಅವರ ಪೂರ್ಣ ಹೆಸರು ದೇವನೇಸನ್ ಚೊಕ್ಕಲಿಂಗಂ. 1950ರ ನವೆಂಬರ್ 20ರಂದು ಜನಿಸಿದ ಅವರು, ತಮ್ಮ ಸಂಗೀತ ಪ್ರತಿಭೆ ಮತ್ತು ವಿಭಿನ್ನ ಸಂಯೋಜನೆಗಳ ಮೂಲಕ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದರು. ‘ತೆನಿಸೈ ತೆಂದ್ರಲ್’ ಎಂಬ ಬಿರುದು ಅವರ ಸಂಗೀತದ ಜನಪ್ರಿಯತೆಯನ್ನು ಸಾರುತ್ತದೆ.
1980ರ ದಶಕದ ಕೊನೆಯ ಭಾಗದಲ್ಲಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡ ದೇವ, 1990ರ ದಶಕದಲ್ಲಿ ಯಶಸ್ವಿ ಸಂಗೀತ ನಿರ್ದೇಶಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದರು. ತಮಿಳು ಚಿತ್ರರಂಗದ ಜೊತೆಗೆ ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಿಗೂ ಸಂಗೀತ ಸಂಯೋಜಿಸುವ ಮೂಲಕ ತಮ್ಮ ಪ್ರತಿಭೆಯನ್ನು ಹಲವು ಭಾಷೆಗಳ ಪ್ರೇಕ್ಷಕರಿಗೆ ಪರಿಚಯಿಸಿದರು.
‘ಬಾಷಾ’, ‘ಅಣ್ಣಾಮಲೈ’ ಚಿತ್ರಗಳ ಮೂಲಕ ದೊಡ್ಡ ಹೆಸರು
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾಮಲೈ’ ಮತ್ತು ‘ಬಾಷಾ’ ಚಿತ್ರಗಳಿಗೆ ಸಂಗೀತ ನೀಡಿದ್ದು ದೇವ ಅವರ ವೃತ್ತಿಜೀವನದ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ. ಈ ಚಿತ್ರಗಳ ಹಾಡುಗಳು ಮತ್ತು ಹಿನ್ನೆಲೆ ಸಂಗೀತವು ಪ್ರೇಕ್ಷಕರ ಗಮನ ಸೆಳೆದಿದ್ದವು. ರಜನಿಕಾಂತ್ ಅವರ ಜನಪ್ರಿಯತೆಯ ಉತ್ತುಂಗದ ಕಾಲಘಟ್ಟದಲ್ಲಿ ದೇವ ಅವರ ಸಂಗೀತ ಸಂಯೋಜನೆಗಳು ಚಿತ್ರಗಳ ಮೆರುಗನ್ನು ಹೆಚ್ಚಿಸಿದ್ದವು. ಇದರ ಜೊತೆಗೆ ‘ಆಸೈ’, ‘ವಾಲಿ’ ಮತ್ತು ‘ಖುಷಿ’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಅವರು ಸಂಗೀತ ಸಂಯೋಜಿಸಿದ್ದರು.
ಕನ್ನಡ ಚಿತ್ರರಂಗಕ್ಕೂ ದೇವ ಅವರ ಕೊಡುಗೆ
ದೇವ ಅವರ ಸಂಗೀತ ಪಯಣ ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರರಂಗದಲ್ಲಿಯೂ ಅವರು ಕೆಲಸ ಮಾಡಿದ್ದು, ಕನ್ನಡ ಸಿನಿಪ್ರೇಮಿಗಳಿಗೆ ಪರಿಚಿತರಾಗಿದ್ದರು. ‘ಸಿಂಹಾದ್ರಿಯ ಸಿಂಹ’, ‘ಅಮೃತವರ್ಷಿಣಿ’, ‘ಕೋಟಿಗೊಬ್ಬ’ ಮತ್ತು ‘ಕದಂಬ’ ಸೇರಿದಂತೆ ಕನ್ನಡ ಸಿನಿಮಾಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಕನ್ನಡ ಚಿತ್ರರಂಗದೊಂದಿಗೂ ನಂಟು ಬೆಳೆಸಿಕೊಂಡಿದ್ದರು.
ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ
ತಮ್ಮದೇ ಆದ ಸಂಗೀತ ಶೈಲಿ, ಜನಪ್ರಿಯ ಹಾಡುಗಳು ಮತ್ತು ಬಹುಭಾಷಾ ಚಿತ್ರರಂಗದ ಕೊಡುಗೆಯ ಮೂಲಕ ದೇವ ಅವರು ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರ ನಿಧನದ ಸುದ್ದಿ ಸಂಗೀತ ಲೋಕಕ್ಕೆ ದುಃಖದ ಸಂಗತಿಯಾಗಿದ್ದು, ಅವರು ನೀಡಿದ ಹಾಡುಗಳು ಮತ್ತು ಸಂಗೀತ ಸಂಯೋಜನೆಗಳು ಅಭಿಮಾನಿಗಳ ನೆನಪಿನಲ್ಲಿ ಉಳಿಯಲಿವೆ.





