ಭಾರತೀಯ ಚಿತ್ರರಂಗ ಮಾತ್ರವಲ್ಲ, ಹಾಲಿವುಡ್ ಮಂದಿಯೂ ಕಣ್ಣಿಟ್ಟು ಕಾಯ್ತಿರೋ ಆ ಒಂದು ಬಿಗ್ ಸಿನಿಮಾದ ಸೀಕ್ರೆಟ್ ನ್ಯೂಸ್ ಹೊರಬಿದ್ದಿದೆ.
ಏಳು ಸಮುದ್ರ ದಾಟಿದ ರಾಜಮೌಳಿ-ಮಹೇಶ್ ಬಾಬು..!
ವಾರಣಾಸಿಯಿಂದ ಅಂಟಾರ್ಟಿಕಾವರೆಗೆ ರಾಜಮೌಳಿ ಜಾದೂ
ಶೇ 80 ರಷ್ಟು ಶೂಟಿಂಗ್ ಕಂಪ್ಲೀಟ್..ದಸರಾಗೆ ಪ್ಯಾಕಪ್ ಪ್ಲಾನ್
ಐಮ್ಯಾಕ್ಸ್‌ನಲ್ಲಿ ಇತಿಹಾಸ ಬರೆಯಲು ಹೊರಟ ವಾರಣಾಸಿ..!
ಎಸ್.ಎಸ್. ರಾಜಮೌಳಿ ಅಂದಮೇಲೆ ಅಲ್ಲಿ ಕೇವಲ ಸಿನಿಮಾವಿರುವುದಿಲ್ಲ, ಅದೊಂದು ಇಂಡಿಯನ್ ಸಿನೆಮಾದ ಇಂಟರ್ನ್ಯಾಷನಲ್ ಅಬ್ಬರ.’ಆರ್‌ಆರ್‌ಆರ್’ ನಂತರ ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡಲು ಸಜ್ಜಾಗಿರೋ ರಾಜಮೌಳಿ ಅವರ ವಾರಣಾಸಿ ಸಿನಿಮಾ ಈಗ ವಿಶ್ವ ಚಿತ್ರರಂಗದ ಹಾಟ್ ಟಾಪಿಕ್.ಪ್ರಿನ್ಸ್ ಮಹೇಶ್ ಬಾಬು, ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರೋ ಈ ಹೈ-ವೋಲ್ಟೇಜ್ ಆಕ್ಷನ್-ಅಡ್ವೇಂಚರ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಹೊಸ ಸುನಾಮಿ ಸೃಷ್ಟಿಸೋಕೆ ಕೌಂಟ್‌ಡೌನ್ ಶುರು ಮಾಡಿದೆ.
ಈ ಸಿನಿಮಾದ ಕ್ಯಾನ್ವಾಸ್ ಎಷ್ಟು ವಿಶಾಲವಾಗಿದೆ ಎಂದರೆ, ಕಥೆ ಕೇವಲ ಒಂದು ದೇಶಕ್ಕಷ್ಟೇ ಸೀಮಿತವಾಗಿಲ್ಲ. ಭಾರತದ ಪವಿತ್ರ ನಗರ ವಾರಣಾಸಿಯಿಂದ ಶುರುವಾಗೋ ಈ ರೋಮಾಂಚನಕಾರಿ ಪಯಣ, ಮಂಜಿನ ಸಾಮ್ರಾಜ್ಯ ಅಂಟಾರ್ಟಿಕಾ, ಆಫ್ರಿಕಾದ ದಟ್ಟ ಅರಣ್ಯಗಳು ಹಾಗೂ ಕಾಲದಲ್ಲಿ ಹಿಂದೆ ಸರಿದು ಪ್ರಾಚೀನ ರೋಮ್ ನಗರದವರೆಗೂ ಸಾಗಲಿದೆ. ಅಂತಿಮವಾಗಿ ಮತ್ತೆ ವಾರಣಾಸಿಗೇ ಬಂದು ತಲುಪುವ ಈ ಕಥೆಯ ಭವ್ಯತೆಯನ್ನು ರಾಜಮೌಳಿ ಯುರೋಪಿಯನ್ ಮ್ಯಾಗಜೀನ್ ತ್ಸೌನಾಮಿ ಸಂದರ್ಶನದಲ್ಲಿ ಅಧಿಕೃತವಾಗಿ ಬಿಚ್ಚಿಟ್ಟಿದ್ದಾರೆ.
ಚಿತ್ರದ ಬಿಗ್ ಅಪ್ಡೇಟ್ ಏನೆಂದರೆ, ಈಗಾಗಲೇ ಸಿನಿಮಾದ ಶೇಕಡಾ 80 ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ಪ್ರಮುಖ ಮತ್ತು ಬೃಹತ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಮುಗಿದಿದೆ. 2022 ರಿಂದ ಅಂದರೆ ಬರೋಬ್ಬರಿ ನಾಲ್ಕುವರೆ ವರ್ಷಗಳಿಂದ ಈ ಮೆಗಾ ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿರುವ ಜಾತಕ ಪಕ್ಷಿ ರಾಜಮೌಳಿ, ಉಳಿದ ಶೇಕಡಾ 20 ರಷ್ಟು ಭಾಗವನ್ನು ಹೈದರಾಬಾದ್‌ನಲ್ಲಿ ಪೂರ್ಣಗೊಳಿಸಲಿದ್ದಾರೆ. ಬರುವ ದಸರಾ ಹಬ್ಬದ ವೇಳೆಗೆ ಸಂಪೂರ್ಣ ಪ್ರೊಡಕ್ಷನ್ ಕೆಲಸಗಳಿಗೆ ಎಂಡ್ ಕಾರ್ಡ್ ಹಾಕುವುದು ಚಿತ್ರತಂಡದ ಬಿಗ್ ಮಾಸ್ಟರ್ ಪ್ಲ್ಯಾನ್.
ಹೊಸ ಇತಿಹಾಸ ಬರೆಯಲಿರುವ ವಾರಣಾಸಿ ಸಂಪೂರ್ಣವಾಗಿ ಐಮ್ಯಾಕ್ಸ್ ತಂತ್ರಜ್ಞಾನದಲ್ಲಿ ಚಿತ್ರೀಕರಣಗೊಂಡ ಮೊದಲ ಇಂಗ್ಲಿಷ್ ಅಲ್ಲದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ‘ಇಂಡಿಯಾನ ಜೋನ್ಸ್’ ಮತ್ತು ‘ಜೇಮ್ಸ್ ಬಾಂಡ್’ ಶೈಲಿಯ ಮಾಸ್ಟರ್‌ಪೀಸ್ ಎಂದು ಬಣ್ಣಿಸಿವೆ. ಅಷ್ಟೇ ಅಲ್ಲದೆ, ಮಹೇಶ್ ಬಾಬು ಅವರು ಸಾಮಾನ್ಯ ಮನುಷ್ಯ ರುದ್ರ ಹಾಗೂ ಭಗವಾನ್ ರಾಮನಾಗಿ ದ್ವಿಪಾತ್ರಗಳಲ್ಲಿ ಮಿಂಚುತ್ತಿದ್ದು, ತಂದೆ-ಮಗನ ಎಮೋಷನಲ್ ಬಾಂಧವ್ಯ ಈ ಕಥೆಯ ಅಸಲಿ ಜೀವಾಳವಾಗಿದೆ.
ಪ್ರೇಕ್ಷಕರಿಗೆ ಕಥೆಯನ್ನು ಸಸ್ಪೆನ್ಸ್ ಆಗಿ ಇಡುತ್ತಲೇ, ಬೆಳ್ಳಿಪರದೆಯ ಮೇಲೆ ಎಂತಹ ದೃಶ್ಯ ವೈಭವ ಕಾಯುತ್ತಿದೆ ಎಂಬುದನ್ನು ತೋರಿಸಲು ರಾಜಮೌಳಿ ಶೀಘ್ರದಲ್ಲೇ ವಿಶುವಲ್ ವೀಡಿಯೊ ಒಂದನ್ನು ತರಲಿದ್ದಾರೆ. ಹಾಲಿವುಡ್ ರೇಂಜ್‌ನಲ್ಲಿ ಮೂಡಿಬರುತ್ತಿರುವ ಈ ದೃಶ್ಯಕಾವ್ಯ, ಭಾರತೀಯ ಸಾಂಸ್ಕೃತಿಕ ಬೇರುಗಳು ಮತ್ತು ಆಧುನಿಕ ಅಡ್ವೇಂಚರ್‌ನ ಪರ್ಫೆಕ್ಟ್ ಮಿಕ್ಸ್ ಆಗಿದೆ. ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಭಾರತದ ಬಾವುಟ ಹಾರಿಸಲು ಸಜ್ಜಾಗಿರುವ ‘ವಾರಣಾಸಿ’ ಚಿತ್ರಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





