ಬಾಲಿವುಡ್ ಸಿಂಗಂ ಅಜಯ್ ದೇವಗನ್ ಮ್ಯಾಜಿಕ್‌ಗೆ ಚಿತ್ರಮಂದಿರಗಳ ಕಲೆಕ್ಷನ್ ಬೋರ್ಡ್ ಬ್ಯಾಂಗ್ ಆಗಿದೆ. ದೃಶ್ಯಂ-3 ರಿಲೀಸ್ ಆಗ್ತಿದ್ದಂತೆ ಥಿಯೇಟರ್‌ಗಳು ಕೋಟಿ ಕೋಟಿ ಲೂಟಿ ಮಾಡ್ತಿವೆ. ಮಲಯಾಳಂ ಒರಿಜಿನಲ್ ಸಿನಿಮಾದ ಕಲೆಕ್ಷನ್‌ನ ಮೀರಿಸೋ ರೇಂಜ್‌ಗೆ ದೇವಗನ್ ಬಾಕ್ಸ್ ಆಫೀಸ್ ಗನ್ ಆಗಿ ಹೊಸ ಇತಿಹಾಸ ಬರೆದಿದ್ದಾರೆ. ಕೇವಲ 5 ದಿನದಲ್ಲಿ ದೃಶ್ಯಂ ಕಮಾಯಿ ಮಾಡಿದ್ದೆಷ್ಟು ಅಂತೀರಾ..? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್…
- 350 Cr ದೃಶ್ಯಂ-3.. ಮೂಲ ಸಿನಿಮಾ ಮೀರಿಸಿದ ದೇವಗನ್..!!
- 500ಕೋಟಿಯತ್ತ ನಾಗಾಲೋಟ.. ಫ್ಯಾಮಿಲಿ ಆಡಿಯೆನ್ಸ್ ಥ್ರಿಲ್
- ಹಳೆಯ ಕಥೆಯಲ್ಲ.. ಹೊಸ ಸ್ಕ್ರಿಪ್ಟ್‌ನೊಂದಿಗೆ ದೃಶ್ಯಂ-3 ಅಬ್ಬರ
- ನೆಟ್‌ಫ್ಲಿಕ್ಸ್ ಪಾಲಾದ ಡಿಜಿಟಲ್ ರೈಟ್ಸ್.. ರಿಲೀಸ್ ಯಾವಾಗ..?
ಅಕ್ಟೋಬರ್ 2ರ ಗಾಂಧಿ ಜಯಂತಿಯ ಶುಭದಿನದಂದು ರಿಲೀಸ್ ಆದ ದೃಶ್ಯಂ 3 ದಿ ಕನ್‌ಕ್ಲೂಷನ್ ಸಿನಿಮಾ ಈಗ ಬಾಕ್ಸ್ ಆಫೀಸ್ ಅಖಾಡದಲ್ಲಿ ಸುನಾಮಿ ಎಬ್ಬಿಸಿದೆ. ಶೋ ಮೇಲೆ ಶೋ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 95.10 ಕೋಟಿ ಬಾಚಿಕೊಂಡು ಅಜಯ್ ದೇವಗನ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಓಪನಿಂಗ್ ಕಂಡ ಸಿನಿಮಾ ಎನಿಸಿಕೊಂಡಿದೆ. ಭಾರತದಲ್ಲೇ ಮೊದಲ ದಿನ 62 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ ದೇವಗನ್ ತಮ್ಮ ಸಾಮ್ರಾಜ್ಯವನ್ನು ಮರುಸ್ಥಾಪಿಸಿದ್ದಾರೆ. ಭಾರತದಲ್ಲಿ ಕೇವಲ 5 ದಿನಗಳಲ್ಲಿ 216.50 ಕೋಟಿ ನೆಟ್ ಕಲೆಕ್ಷನ್ ಮಾಡಿರೋ ಈ ಸಿನಿಮಾ, ಜಾಗತಿಕವಾಗಿ ಬರೋಬ್ಬರಿ 341.30 ಕೋಟಿ ಗ್ರಾಸ್ ಕಲೆಕ್ಷನ್ ಮಾಡೋ ಮೂಲಕ 500 ಕೋಟಿ ಕ್ಲಬ್‌ಗೆ ಬುಲೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ.
ಶಾಕಿಂಗ್ ಅಂದ್ರೆ , ಈ ಬಾರಿ ಹಿಂದಿ ಆವೃತ್ತಿಯು ಮೋಹನ್‌ಲಾಲ್ ಅಭಿನಯದ ಮೂಲ ಮಲಯಾಳಂ ಸಿನಿಮಾವನ್ನೇ ಓವರ್ ಟೇಕ್ ಮಾಡಿದೆ. ಮೋಹನ್‌ಲಾಲ್ ಅವರ ದೃಶ್ಯಂ 3 ಚಿತ್ರದ ಲೈಫ್ ಟೈಂ ಕಲೆಕ್ಷನ್ 237.70 ಕೋಟಿ ಆಗಿದ್ದರೆ, ಅಜಯ್ ದೇವಗನ್ ಅವರ ಹಿಂದಿ ಅವೃತ್ತಿಯು ಕೇವಲ 4 ದಿನಗಳಲ್ಲೇ ಬರೋಬ್ಬರಿ 303 ಕೋಟಿ ಬಾಚಿಕೊಂಡು ಒರಿಜಿನಲ್ ಸಿನಿಮಾವನ್ನೇ ಕಲೆಕ್ಷನ್‌ನಲ್ಲಿ ಮೀರಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ರಿಮೇಕ್ ಸಿನಿಮಾವೊಂದು ಮೂಲ ಆವೃತ್ತಿಗಿಂತ ಇಷ್ಟೊಂದು ಬೃಹತ್ ಮಟ್ಟದಲ್ಲಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿರುವುದು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ.
ಈ ಬಾರಿ ದೃಶ್ಯಂ 3 ಪ್ರೇಕ್ಷಕರಿಗೆ ಕೇವಲ ಸಸ್ಪೆನ್ಸ್ ಅಷ್ಟೇ ಅಲ್ಲ, ಬಿಗ್ ಸರ್‌ಪ್ರೈಸ್ ನೀಡಿದೆ. ಹಿಂದಿನ ಭಾಗಗಳಂತೆ ಇದು ಮಲಯಾಳಂನ ಯಥಾವತ್ ರಿಮೇಕ್ ಅಲ್ಲವೇ ಅಲ್ಲ. ನಿರ್ದೇಶಕ ಅಭಿಷೇಕ್ ಪಾಠಕ್ ಈ ಬಾರಿ ಸಂಪೂರ್ಣವಾಗಿ ಹೊಸ ಹಾಗೂ ಸ್ವತಂತ್ರ ಚಿತ್ರಕಥೆಯನ್ನು ಹೆಣೆದಿದ್ದಾರೆ. ವಿಜಯ್ ಸಾಲಗಾಂಕರ್ ಹಾಗೂ ಪೊಲೀಸರ ನಡುವಿನ ಜಾಣತನದ ಆಟಕ್ಕೆ ಇಲ್ಲಿ ಅತ್ಯಂತ ರೋಚಕ ಮತ್ತು ವಿಭಿನ್ನ ಅಂತ್ಯ ನೀಡಲಾಗಿದೆ. ಈ ಮಾಸ್ ಸಸ್ಪೆನ್ಸ್ ಥ್ರಿಲ್ಲರ್ ಹೆಣಿಗೆಯೇ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣ ತಾರಾಗಣ. ವಿಜಯ್ ಸಾಲಗಾಂಕರ್ ಪಾತ್ರದಲ್ಲಿ ಅಜಯ್ ದೇವಗನ್ ತಮ್ಮ ತೀಕ್ಷ್ಣ ಅಭಿನಯದಿಂದ ಕಳೆಕಟ್ಟಿದ್ದರೆ, ಅವರಿಗೆ ಪ್ರಬಲ ಪೋಲಿಸ್ ಅಧಿಕಾರಿಯಾಗಿ ಟಬು ಹಾಗೂ ಪತ್ನಿಯಾಗಿ ಶ್ರಿಯಾ ಶರಣ್ ಸಾಥ್ ನೀಡಿದ್ದಾರೆ. ಇನ್ನು ಈ ಭಾಗದ ಮೇನ್ ಹೈಲೈಟ್ ಅಂದ್ರೆ ಅತ್ಯಂತ ಖಡಕ್ ಖಳನಾಯಕನಾಗಿ ಎಂಟ್ರಿ ಕೊಟ್ಟಿರೋ ಜೈದೀಪ್ ಅಹ್ಲಾವತ್. ಜೈದೀಪ್ ಹಾಗೂ ದೇವಗನ್ ನಡುವಿನ ಮೈಜುಮ್ ಎನ್ನಿಸುವ ಮೈಂಡ್ ಗೇಮ್ ದೃಶ್ಯಗಳು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಸಿಟಿ-ಚಪ್ಪಾಳೆಗಳ ಮಳೆಯನ್ನೇ ಹರಿಸುತ್ತಿವೆ.
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಸಸ್ಪೆನ್ಸ್ ಕಾವಿನ ನಡುವೆಯೇ ಒಟಿಟಿ ಪ್ರಿಯರಿಗೂ ಸಿಹಿ ಸುದ್ದಿ ಸಿಕ್ಕಿದೆ. ದೃಶ್ಯಂ 3 ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಾಲಾಗಿದ್ದು, ಭಾರಿ ಮೊತ್ತಕ್ಕೆ ಅಧಿಕೃತವಾಗಿ ತನ್ನದಾಗಿಸಿಕೊಂಡಿದೆ. ಥಿಯೇಟರ್‌ಗಳ ಎಕ್ಸ್‌ಕ್ಲೂಸಿವ್ ಪ್ರದರ್ಶನದ ನಿಯಮಾವಳಿಗಳ ಪ್ರಕಾರ, ಬರುವ ನವೆಂಬರ್ 13 ರಿಂದ 27 ರ ಒಳಗೆ ಈ ಬ್ಲಾಕ್‌ಬಸ್ಟರ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಒಟಿಟಿಯಲ್ಲೂ ಕಲೆಕ್ಷನ್ ಧಮಾಕ ಮುಂದುವರಿಯುವುದು ಖಚಿತವಾಗಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





