ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಕುಡಿ ನಿರಂಜನ್ ಈಗ ಫುಲ್ ಸ್ಪಾರ್ಕ್ ಆಗಿ ಕಿಡಿ ಹಚ್ಚಲು ಎಂಟ್ರಿ ಕೊಡ್ತಿದ್ದಾರೆ. ದಶಕಗಳಿಂದ ಲವರ್ ಬಾಯ್ ಆಗಿದ್ದ ನೆನಪಿರಲಿ ಪ್ರೇಮ್.. ಮೊದಲ ಬಾರಿಗೆ ರಕ್ತ-ಸಿಕ್ತ ಖಳನಾಯಕನಾಗಿ ಅಬ್ಬರಿಸಿರೋ ಈ ಚಿತ್ರದ ಅಸಲಿ ಕಥೆಯೇನು..? ಉತ್ತರ ಕರ್ನಾಟಕದ ಗದಗಿನಲ್ಲಿ ನಡೆದ ಅದ್ಧೂರಿ ಟ್ರೈಲರ್ ಲಾಂಚ್ ಇವೆಂಟ್ ಹೇಗಿದೆ ಅಂತೀರಾ..? ಇಲ್ಲಿದೆ ನೋಡಿ…
- ಗದಗ್‌ನಲ್ಲಿ ಸ್ಪಾರ್ಕ್ ಟ್ರೈಲರ್ ಇವೆಂಟ್.. ಉಪ್ಪಿ ಡ್ಯಾನ್ಸ್
- ಆ್ಯಕ್ಷನ್ ಥ್ರಿಲ್ಲರ್ ಸ್ಪಾರ್ಕ್.. ಪ್ರೇಮ್ ವಿಲನಿಸಂ ಖದರ್..!
- ಬ್ಯಾಂಕ್ ದೋಖಾ, ಮೀಡಿಯಾ & ಖಾಕಿ.. ಬೆಳ್ಳಿತೆರೆಗೆ ಸ್ಪಾರ್ಕ್
- ಇನ್ವೆಸ್ಟಿಗೇಷನ್ ಜರ್ನಲಿಸಂ ಪವರ್.. ಮೀಡಿಯಾ ಕಮಾಲ್..!
ಉತ್ತರ ಕರ್ನಾಟಕದ ಗದಗ ಮಂದಿಗೆ ಸೆಪ್ಟೆಂಬರ್ 16ರಂದು ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ನಿರಂಜನ್ ಸುಧೀಂದ್ರ ನಟನೆಯ ಸ್ಪಾರ್ಕ್ ಚಿತ್ರದ ಅದ್ಧೂರಿ ಟ್ರೈಲರ್ ಲಾಂಚ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಎಂಟ್ರಿ ಕೊಟ್ಟಾಗ ಇಡೀ ಗದಗೇ ಜೈಕಾರಗಳ ಸದ್ದಿಗೆ ಮೈದಾನವೇ ತಲ್ಲಣಿಸಿತು. ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ಜನಸಾಗರವೇ ಹರಿದುಬಂದಿತ್ತು. ವೇದಿಕೆ ಏರಿದ ಉಪೇಂದ್ರ ಸ್ಪಾರ್ಕ್ ಟ್ರೈಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೊರಿದ್ರು ಜೊತೆಗೆ ಗದಗ ಮುದ್ರಣ ಕಾಶಿ ಎಂದು ಹೇಳಿದ ಉಪೇಂದ್ರ ಸ್ಥಳೀಯ ಮಕ್ಕಳೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿ ಇಡೀ ಈವೆಂಟ್‌ಗೆ ಒಂದು ಮಾಸ್ ಎನರ್ಜಿ ತುಂಬಿದರು.
ಅಷ್ಟಕ್ಕೂ ಗಾಂಧಿನಗರದ ಎಸಿ ಹಾಲ್ ಬಿಟ್ಟು ಸ್ಪಾರ್ಕ್ ತಂಡ ಟ್ರೈಲರ್ ಲಾಂಚ್‌ಗೆ ಗದಗ್ ಅನ್ನು ಆಯ್ಕೆ ಮಾಡಿದ್ದೇಕೆ ಗೊತ್ತಾ? ಉತ್ತರ ಕರ್ನಾಟಕ ಅಂದರೆ ಮಾಸ್ ಸಿನಿಮಾಗಳ ತವರೂರು. ಅಲ್ಲಿನ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ ಮತ್ತು ಸಿನಿಮಾ ಮೇಲಿನ ಪ್ರೀತಿ ನೂರಕ್ಕೆ ನೂರು ರಿಯಲ್. ಆ ‘ರಾ’ ಎನರ್ಜಿ ತಮ್ಮ ಚಿತ್ರದ ಪ್ರಮೋಷನ್‌ಗೆ ಸಿಗಬೇಕು ಎಂಬ ಪಕ್ಕಾ ಲೆಕ್ಕಾಚಾರದೊಂದಿಗೆ ಚಿತ್ರತಂಡ ಗದಗಿನಲ್ಲಿ ಟ್ರೈಲರ್ ರಿಲೀಸ್ ಮಾಡಿ, ಮೊದಲ ಹೆಜ್ಜೆಯಲ್ಲೇ ಗೆದ್ದಿದೆ. ಇನ್ನು ಮಹಾಂತೇಶ್ ಹಂದ್ರಲ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್‌ನಲ್ಲಿ, ನಿರಂಜನ್ ಸುಧೀಂದ್ರ ಹಗರಣಗಳ ಬೆನ್ನೆಲಬನ್ನು ಮುರಿಯುವ ಅಭಿರಾಮ್ ಎಂಬ ಕೆಚ್ಚೆದೆಯ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಪ್ರೇಕ್ಷಕರಿಗೆ ಕಾದಿರುವ ಅಸಲಿ ಸರ್ಪ್ರೈಸ್ ಅಂದರೆ ಲವ್ಲಿ ಸ್ಟಾರ್ ಪ್ರೇಮ್. ಇದೇ ಮೊದಲ ಬಾರಿಗೆ ಪ್ರೇಮ್ ಸಂಪೂರ್ಣ ನೆಗೆಟಿವ್ ಶೇಡ್‌ನಲ್ಲಿ ಖಡಕ್ ವಿಲನ್ ಆಗಿ ಮುಖಾಮುಖಿಯಾಗುತ್ತಿದ್ದು, ಇವರಿಬ್ಬರ ನಡುವಿನ ಶಕ್ತಿಪ್ರದರ್ಶನವೇ ಚಿತ್ರದ ಪ್ರಮುಖ ಆಕರ್ಷಣೆ.
ಡಾ. ಗರಿಮಾ ಅವಿನಾಶ್ ವಸಿಷ್ಠ ನಿರ್ಮಾಣದ ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಸಂಗೀತ ನೀಡಿದ್ದು, ಶರಣ್ ಧ್ವನಿಯ ಶಕಲಕ ಬೂಮ್ ಬೂಮ್ ಹಾಡು ಈಗಾಗಲೇ ಇನ್‌ಸ್ಟಾಗ್ರಾಮ್ ರೀಲ್ಸ್ ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ರಚನಾ ಇಂದರ್ ನಾಯಕಿಯಾಗಿ, ಭಾವನಾ ಲಾಯರ್ ಆಗಿ ಹಾಗೂ ಸಾಧು ಕೋಕಿಲ-ಧರ್ಮಣ್ಣ ಕಾಮಿಡಿ ಮೆರುಗು ನೀಡಿದ್ದಾರೆ. ಉಪೇಂದ್ರ ಅವರ ಬೆಂಬಲ, ಪ್ರೇಮ್ ಅವರ ವಿಲನಿಸಂ ಹಾಗೂ ನಿರಂಜನ್ ಅವರ ಭರ್ಜರಿ ಆ್ಯಕ್ಷನ್ ನೋಡಲು ಅಭಿಮಾನಿಗಳು ಸೆಪ್ಟೆಂಬರ್ 25ರವರೆಗೆ ಕಾಯಲೇಬೇಕು.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





