ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಬಹುಮುಖ ಪ್ರತಿಭೆ ವಿಜಯ್ ಸೇತುಪತಿ ಮೊದಲ ಬಾರಿಗೆ ಒಟ್ಟಿಗೆ ಸಿನಿಮಾ ಮಾಡುತ್ತಿರುವ ಸುದ್ದಿಯೇ ಸಿನೆಮಾ ಪ್ರೇಮಿಗಳಲ್ಲಿ ಸಂಚಲನ ಮೂಡಿಸಿತ್ತು. ವಿಜಯ್ ಸೇತುಪತಿ ಅವರ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಈ ಬಿಗ್ ಬಜೆಟ್ ಸಿನಿಮಾದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಪುರಿ ಜಗನ್ನಾಥ್ ಸಿನಿಮಾಗಳೆಂದರೆ ಅಲ್ಲಿ ವಿಭಿನ್ನ ಶೀರ್ಷಿಕೆಗಳಿರಲೇಬೇಕು. ಈ ಬಾರಿಯೂ ಅವರು ಅಭಿಮಾನಿಗಳನ್ನು ನಿರಾಸೆಗೊಳಿಸಿಲ್ಲ. ಈ ಹೊಸ ಚಿತ್ರಕ್ಕೆ ‘ಸ್ಲಂಡಾಗ್-33 ಟೆಂಪಲ್ ರೋಡ್’ (Slumdog-33 Temple Road) ಎಂಬ ವಿಶಿಷ್ಟ ಹೆಸರಿಡಲಾಗಿದೆ. ಶೀರ್ಷಿಕೆಯೇ ಸೂಚಿಸುವಂತೆ ಇದು ಯಾವುದೋ ಗಲ್ಲಿಯ ರೌಡಿಸಂ ಅಥವಾ ಮಾಸ್ ಕಥೆಯನ್ನು ಒಳಗೊಂಡಿರಲಿದೆ ಎಂಬ ಸುಳಿವು ಸಿಕ್ಕಿದೆ.
ಹುಟ್ಟುಹಬ್ಬದ ಉಡುಗೊರೆಯಾಗಿ ಬಂದಿರುವ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೋಸ್ಟರ್‌ನಲ್ಲಿ ವಿಜಯ್ ಸೇತುಪತಿ ಹಿಂದೆಂದೂ ಕಾಣದಷ್ಟು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹರಿದ ಬಟ್ಟೆ, ಕೈಯಲ್ಲಿ ರಕ್ತಸಿಕ್ತವಾಗಿರುವ ಕತ್ತಿ ಹಿಡಿದಿರುವ ಲುಕ್ ನೋಡಿದರೇ ಚಿತ್ರವು ಪಕ್ಕಾ ಆಕ್ಷನ್ ಎಂಟರ್‌ಟೈನರ್ ಆಗಿರಲಿದೆ ಎಂಬುದನ್ನು ಸಾಬೀತುಪಡಿಸಿದೆ.
ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ ಇಲ್ಲಿರುವ ತಾರಾಬಳಗ. ಕನ್ನಡದ ಖ್ಯಾತ ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಹಿರಿಯ ನಟಿ ಟಬು, ಹಾಸ್ಯ ನಟರಾದ ಬ್ರಹ್ಮನಂದಂ ಮತ್ತು ವಿಟಿವಿ ಗಣೇಶ್ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಮಲಯಾಳಂ ಬೆಡಗಿ ಸಂಯುಕ್ತ ಮೆನನ್ ವಿಜಯ್ ಸೇತುಪತಿಗೆ ನಾಯಕಿಯಾಗಿದ್ದಾರೆ.
‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ಸಿನಿಮಾಗಳಿಗೆ ಅದ್ಭುತ ಹಿನ್ನೆಲೆ ಸಂಗೀತ ನೀಡಿದ್ದ ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪುರಿ ಜಗನ್ನಾಥ್ ಅವರೇ ನಿರ್ಮಾಣ ಮಾಡಲಿದ್ದಾರೆ. ಇದು ಪ್ಯಾನ್-ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆಗೆ ಬರಲಿದೆ. ಪುರಿ ಜಗನ್ನಾಥ್ ಅವರ ಮಾಸ್ ನಿರೂಪಣೆ ಮತ್ತು ವಿಜಯ್ ಸೇತುಪತಿ ಅವರ ನೈಜ ನಟನೆ ಒಟ್ಟಾಗಿ ಸೇರಿದರೆ ‘ಸ್ಲಂಡಾಗ್-33 ಟೆಂಪಲ್ ರೋಡ್’ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ.





