ಇಡೀ ದೇಶದ ಯುವಕರನ್ನು ಮನರಂಜಿಸುವ ಜನಪ್ರಿಯ ಅಡ್ವೆಂಚರ್ ರಿಯಾಲಿಟಿ ಶೋ ‘ರೋಡೀಸ್’ ತನ್ನ 20ನೇ ಸೀಸನ್ ‘ರೋಡೀಸ್ XX – ಡಬಲ್ ಕ್ರಾಸ್’ ಮೂಲಕ ಮತ್ತೊಂದು ವಿಶೇಷ ಟಾಸ್ಕ್ ಆರಂಭವಾಗಿದೆ. ಈ ಬಾರಿ ಶೋ ತನ್ನ ಜರ್ನಿಯನ್ನು ಕರ್ನಾಟಕದಲ್ಲಿ ಆರಂಭಿಸಿ, ಇಲ್ಲಿ ಇರುವ ಐತಿಹಾಸಿಕ ಹಿನ್ನೆಲೆ, ವೈಭವ, ಮತ್ತು ವೀರರ ಸಾಹಸಗಾಥೆಗಳಿಂದ ಸ್ಪೂರ್ತಿ ಪಡೆದು ಟಾಸ್ಕ್‌ಗಳನ್ನು ರೂಪಿಸಿದೆ.
ಈ ಸೀಸನ್ ಹಂಪಿಯಲ್ಲಿ ಆರಂಭವಾಗಿ, ಮೈಸೂರಿನಲ್ಲಿ ತನ್ನ ವಿಶಿಷ್ಟ ಸಂಚಿಕೆಯನ್ನು ಮುಂದುವರೆಸಿದೆ. ವಿಶೇಷ ಅಂದ್ರೆ, ಪ್ರತಿಯೊಂದು ಟಾಸ್ಕ್ ಕೂಡ ಕರ್ನಾಟಕದ ಇತಿಹಾಸಕ್ಕೆ, ಸಂಸ್ಕೃತಿಗೆ ಹಾಗೂ ವೀರರಿಗೆ ನಮನವಾಗುವಂತೆ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಕಠಿಣ ಟಾಸ್ಕ್‌ಗಳನ್ನು ನೀಡಿ, ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾಡಲಾಗಿದೆ.
ಟಿಪ್ಪು ಸುಲ್ತಾನ್ ಸ್ಪೂರ್ತಿಯ ಟಾಸ್ಕ್
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ವಿಶೇಷ ಟಾಸ್ಕ್ ಎಲ್ಲರ ಗಮನ ಸೆಳೆಯಿತು. ‘ಮೈಸೂರಿನ ಹುಲಿ’ ಟಿಪ್ಪು ಸುಲ್ತಾನ್ ಅವರನ್ನು ಗೌರವಿಸಲು ಈ ಟಾಸ್ಕ್ ರೂಪಿಸಲಾಯಿತು. ಇತಿಹಾಸದಲ್ಲಿ ಟಿಪ್ಪು ಸುಲ್ತಾನ್‌ಗೆ ‘ದಿ ಫರ್ಸ್ಟ್ ಮಿಸೈಲ್ ಮ್ಯಾನ್ ಆಫ್ ದಿ ವರ್ಲ್ಡ್’ ಎಂಬ ಬಿರುದು ದೊರೆತಿದೆ. ಅವರ ತಂತ್ರಬುದ್ಧಿ ಮತ್ತು ಯುದ್ಧ ಕೌಶಲ್ಯವನ್ನು ಪ್ರತಿಬಿಂಬಿಸಲು, ಮಿಸೈಲ್‌ಗಳಿಗೆ ಸಂಬಂಧಿಸಿದಂತೆ ರೋಚಕ ಟಾಸ್ಕ್ ಆಯೋಜಿಸಲಾಯಿತು.
ಈ ಟಾಸ್ಕ್ ಸ್ಪರ್ಧಿಗಳು ಮಿಸೈಲ್‌ಗಳನ್ನು ಕತ್ತಿಗಳಿಂದ ಹೊಡೆದುರುಳಿಸಿ, ಅದರ ಒಳಗಿರುವ ಅಂಕಿಗಳನ್ನು ಸಂಗ್ರಹಿಸಬೇಕಾಗಿತ್ತು. ಈ ಅಂಕಿಗಳ ಸಹಾಯದಿಂದ ಬಂಧನದಲ್ಲಿರುವ ತಮ್ಮ ಗ್ಯಾಂಗ್ ಲೀಡರ್‌ರನ್ನು ಮುಕ್ತಗೊಳಿಸಬೇಕಾದ್ದು ಟಾಸ್ಕ್‌ನ ಉದ್ದೇಶ. ಈ ಟಾಸ್ಕ್‌ನಲ್ಲಿ ಎಲ್ವಿಶ್ ಯಾದವ್ ಅವರ ಗ್ಯಾಂಗ್ ಯಶಸ್ವಿಯಾಗಿ ಮುನ್ನಡೆಯಿತು ಮತ್ತು ಇಮ್ಯೂನಿಟಿ ಪಡೆದಿತು.
ಒನಕೆ ಓಬವ್ವ, ಅಲಮೇಲಮ್ಮನ ಶಾಪದಿಂದ ಪ್ರೇರಿತ ಟಾಸ್ಕ್‌ಗಳು
ಟಿಪ್ಪು ಸುಲ್ತಾನ್‌ನ ಟಾಸ್ಕ್‌ಗೂ ಮೊದಲು, ಕರ್ನಾಟಕದ ಮತ್ತೊಬ್ಬ ಶೂರ ಸಾಹಸಿಯಾದ ಒನಕೆ ಓಬವ್ವನ ಸಾಹಸಗಾಥೆ ಆಧಾರಿತ ಟಾಸ್ಕ್ ನಡೆಸಲಾಯಿತು. ಚಿತ್ರದುರ್ಗದ ಬದಿಯ ಗಡಿಯ ಸೈನಿಕರನ್ನು ಒಂಟಿಯಾಗಿ ಎದುರಿಸಿದ ಓಬವ್ವನ ಧೈರ್ಯವನ್ನು ತೋರಿಸುವ ರೀತಿಯಲ್ಲಿ ಈ ಟಾಸ್ಕ್ ರೂಪಿಸಲಾಗಿತ್ತು. ಸ್ಪರ್ಧಿಗಳಿಗೆ ಒನಕೆಗಳನ್ನು ಬಳಸಿಕೊಂಡು ತಮ್ಮ ಶಕ್ತಿಯನ್ನು ತೋರಿಸಬೇಕಾದ ಸಂದರ್ಭ ಈ ಟಾಸ್ಕ್‌ನಲ್ಲಿ ಕಂಡುಬಂದಿತು.
ಅಲ್ಲದೆ, ಮೈಸೂರಿನ ಐತಿಹಾಸಿಕ ಘಟನೆಗಳಲ್ಲಿ ಪ್ರಮುಖವಾದ ಅಲಮೇಲಮ್ಮನ ಶಾಪವನ್ನು ಆಧಾರಮಾಡಿಕೊಂಡು ಇನ್ನೊಂದು ವಿಶೇಷ ಟಾಸ್ಕ್ ರೂಪಿಸಲಾಯಿತು. ಕರ್ನಾಟಕದ ವೈಭವ ಹಾಗೂ ಕಥೆಗಳನ್ನು ಯುವಜನತೆಯ ಮುಂದೆ ಹೊಸ ರೂಪದಲ್ಲಿ ತರುವ ಪ್ರಯತ್ನವನ್ನು ಪ್ರೇಕ್ಷಕರು ಹೆಚ್ಚು ಮೆಚ್ಚಿದರು.
ಹಂಪಿಯಲ್ಲಿ ವಿಶೇಷ ಟಾಸ್ಕ್
‘ರೋಡೀಸ್ XX’ ಶೋನ ಜರ್ನಿ ಐತಿಹಾಸಿಕ ಹಂಪಿಯಲ್ಲಿ ಆರಂಭವಾಗಿ, ವಾಲಿ-ಸುಗ್ರೀವರ ಯುದ್ಧದಿಂದ ಪ್ರೇರಿತ ಕುಸ್ತಿ ಮತ್ತು ಬಿಲ್ವಿದ್ಯೆ ಆಧಾರಿತ ಟಾಸ್ಕ್‌ನಿಂದ ಆರಂಭವಾಯಿತು. ಹಂಪಿಯ ವೈಭವದಂತೆ ಸ್ಪರ್ಧಿಗಳಿಗೂ ಶಕ್ತಿಯ ಪರಿಕ್ಷೆ ನೀಡಲಾಯಿತು.
ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ನಡೆದ ವಿಶೇಷ ಟಾಸ್ಕ್
ಇತ್ತೀಚೆಗೆ ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ಇನ್ನೊಂದು ಮನರಂಜನೆಯ ಟಾಸ್ಕ್ ನಡೆಸಲಾಯಿತು. ಮುಂದೆ, ಮೈಸೂರಿನ ಪ್ರಸಿದ್ಧ ಅರಮನೆ ಎದುರು ಏರ್ಪಡಿಸಿರುವ ವಿಶೇಷ ಎಂಟರ್‌ಟೇನ್‌ಮೆಂಟ್ ಟಾಸ್ಕ್ ಕೂಡ ಪ್ರಸಾರವಾಗಲಿದೆ. ಮೈಸೂರಿಗರು ತಮ್ಮ ನಗರದ ಇತಿಹಾಸದಿಂದ ಪ್ರೇರಿತ ಈ ಟಾಸ್ಕ್‌ಗಳನ್ನು ಸವಾಲಾಗಿ ಸ್ವೀಕರಿಸುತ್ತಾರೋ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಈ ಶೋನಲ್ಲಿ ನಟಿ ನೇಹಾ ಧೂಪಿಯಾ, ರಿಯಾ ಚಕ್ರವರ್ತಿ, ಎಲ್ವಿಶ್ ಯಾದವ್ ಮತ್ತು ಪ್ರಿನ್ಸ್ ನರುಲಾ ಗ್ಯಾಂಗ್ ಲೀಡರ್‌ಗಳಾಗಿ ಕಾಣಿಸುತ್ತಿದ್ದಾರೆ. ಶೋ ಹೋಸ್ಟ್ ಆಗಿ ರಣ್‌ವಿಜಯ್ ಸಿಂಗ್ ರೋಚಕ ರೀತಿಯಲ್ಲಿ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದಾರೆ.





