ಬೆಂಗಳೂರು: ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರಲು ಚಿತ್ರರಂಗದ ದೈತ್ಯ ತಾರೆಯರು ಒಂದಾಗುತ್ತಿದ್ದಾರೆ. ರಾಯರ ದರ್ಶನ ಹೆಸರಿನ ಈ ಮಹತ್ವಾಕಾಂಕ್ಷೆಯ ಆಲ್ಬಂ ಸಾಂಗ್ ಸದ್ಯ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಶ್ರೀ ಲಕ್ಷ್ಮೀ ಗಣೇಶ ಪ್ರೊಡಕ್ಷನ್ ಮತ್ತು ದಿ ನ್ಯೂ ಇಂಡಿಯನ್ ಟೈಮ್ಸ್ ಜಂಟಿಯಾಗಿ ಈ ಭಕ್ತಿ ಪ್ರಧಾನ ದೃಶ್ಯ ವೈಭವವನ್ನು ಅರ್ಪಿಸುತ್ತಿವೆ.
ಈ ಆಲ್ಬಂನ ಅತಿ ದೊಡ್ಡ ವಿಶೇಷತೆ ಎಂದರೆ ಇದರಲ್ಲಿ ದಕ್ಷಿಣ ಭಾರತದ ಖ್ಯಾತ ನಟರಾದ ಸೂಪರ್ ಸ್ಟಾರ್ ರಜನಿಕಾಂತ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನವರಸ ನಾಯಕ ಜಗ್ಗೇಶ್ ಮತ್ತು ನೆನಪಿರಲಿ ಪ್ರೇಮ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಖ್ಯಾತ ತಾರೆಯರು ರಾಯರ ದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ರಾಯರ ಭಕ್ತರಾಗಿರುವ ಈ ಎಲ್ಲಾ ನಟರು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಭಕ್ತರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಇದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.
ಗುರು ಸಾರ್ವಭೌಮರ ಕುರಿತು ಈವರೆಗೆ ಯಾರೂ ಹೇಳದ ಮತ್ತು ತೋರಿಸದ ಅವರ ಜೀವನದ ಕೆಲವು ಅಪರೂಪದ ಸಂಗತಿಗಳನ್ನು ಈ ಆಲ್ಬಂನಲ್ಲಿ ದೃಶ್ಯೀಕರಿಸಲಾಗುತ್ತಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಈ ಪ್ರಾಜೆಕ್ಟ್ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮೂಡಿಬರುತ್ತಿದೆ. ಕೇವಲ ಒಂದು ಹಾಡಾಗಿ ಉಳಿಯದೆ, ರಾಯರ ಚರಿತ್ರೆಯನ್ನು ಸಾರುವ ಒಂದು ಮಹಾನ್ ಕೃತಿಯಾಗಿ ಇದು ಹೊರಹೊಮ್ಮುತ್ತಿದೆ.
ಈಗಾಗಲೇ ಈ ಆಲ್ಬಂನ ಮೊದಲ ಹಂತದ ಚಿತ್ರೀಕರಣವು ಫೆಬ್ರವರಿ 2 ರಿಂದ ಫೆಬ್ರವರಿ 7ರವರೆಗೆ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ತಾಂತ್ರಿಕವಾಗಿ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿರುವ ಈ ಆಲ್ಬಂಗೆ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಅವರ ಸಂಗೀತವಿದೆ. ರಘು ಭಟ್ ಈ ಆಲ್ಬಂಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸುಗುಣ ರಘು ಭಟ್ ನಿರ್ಮಾಣ ಮಾಡಲಿದ್ದಾರೆ. ನಾಗೇಶ್ ವಿ. ಆಚಾರ್ಯ ಅವರ ಛಾಯಾಗ್ರಹಣದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನ ಎರಡನೇ ಹಂತದ ಚಿತ್ರೀಕರಣವು ಫೆಬ್ರವರಿ 24 ರಿಂದ ಆರಂಭವಾಗಲಿದೆ.
ನಾಗಾರ್ಜುನ ಶರ್ಮ ಅವರ ಸಾಹಿತ್ಯ ಮತ್ತು ಶ್ರೀನಿಧಿ ಎಂ.ಕೆ. ಅವರ ಪ್ರಾಜೆಕ್ಟ್ ಹೆಡ್ ನಿರ್ವಹಣೆಯಲ್ಲಿ “ರಾಯರ ದರ್ಶನ” ಮೂಡಿಬರುತ್ತಿದ್ದು, ಶೀಘ್ರದಲ್ಲೇ ಇದು ಭಕ್ತರ ಕಣ್ಮನ ಸೆಳೆಯಲು ಸಜ್ಜಾಗಿದೆ. ರಾಯರ ಮಹಿಮೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮನಮುಟ್ಟುವಂತೆ ತೋರಿಸುವ ಈ ಪ್ರಯತ್ನಕ್ಕೆ ಚಿತ್ರರಂಗದ ಗಣ್ಯರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ.





