ಸತತ ನಾಲ್ಕನೇ ವಾರವೂ ಪ್ರೇಮದ ಊರಲಿ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ತೀರಾ ಸಣ್ಣ ಬಜೆಟ್ ಸಿನಿಮಾವೊಂದು ಯಶಸ್ವೀ 100 ಕೋಟಿ ಕ್ಲಬ್ ಸೇರಿದ್ದು, ಪ್ರೇಕ್ಷಕರು ಇದನ್ನ ಅಪ್ಪು ಮಿಲನ ಸಿನಿಮಾಗೆ ಹೋಲಿಸ್ತಿದ್ದಾರೆ. ಇನ್ಫ್ಯಾಕ್ಟ್ ರಾಜರತ್ನ ಕೂಡ ಈ ಸಿನಿಮಾಗೆ ವಿಶ್ ಮಾಡಿರೋ ಇಂಟರೆಸ್ಟಿಂಗ್ ಖಬರ್ ಇಲ್ಲಿದೆ ನೋಡಿ.
- 100 ಕೋಟಿ ಪ್ರೇಮದೂರು.. ‘ಮಿಲನ’ಗೆ ಹೋಲಿಸ್ತಿರೋ ಪ್ರೇಕ್ಷಕ
- ಮದ್ವೆಗೆ ಮುನ್ನ ಹೇಗಿದ್ವಿ ಅನ್ನೋದಕ್ಕಿಂತ..ಮದ್ವೆ ಆದ್ಮೇಲೆ ಹೇಗಿರ್ತೀವಿ ಅನ್ನೋದು ಮುಖ್ಯ
- ಮಿಲನದಲ್ಲಿ ಹೀರೋಯಿನ್ ಕ್ಷಮೆ.. ಪ್ರೇಮದೂರಲ್ಲಿ ಹೀರೋ ಕ್ಷಮೆ
- ಕಟೌಟ್ ಇಲ್ಲ.. ಫ್ಯಾನ್ಸ್ ಸಂಘಗಳಿಲ್ಲ.. ಆದ್ರೆ ನೋಡಿದವ್ರೆಲ್ಲಾ ಫ್ಯಾನ್ಸ್
ಯೆಸ್.. ಪ್ರೇಮದ ಊರಲಿ ಸಿನಿಮಾ ತೆರೆಕಂಡು ಮೂರು ವಾರಗಳು ಕಳೆದಿದೆ. ನಾಲ್ಕನೇ ವಾರವೂ ಈ ಚಿತ್ರ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಥಿಯೇಟರ್ಗಳ ಮುಂದೆ ಯಾವುದೇ ಕಟೌಟ್ಸ್ ಇಲ್ಲ.. ಕಲಾವಿದರುಗಳಿಗೆ ಅಭಿಮಾನಿ ಸಂಘಗಳಿಲ್ಲ.. ಆದ್ರೆ ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಇವರಿಗೆ ಫ್ಯಾನ್ಸ್ ಆಗ್ತಿದ್ದಾರೆ. ಇದು ಒಂದೊಳ್ಳೆ ಸದಭಿರುಚಿ ಚಿತ್ರದ ಪ್ರಾಮಾಣಿಕ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ.
ನಿರ್ದೇಶಕ ಮನೋಜ್ ಕುಮಾರ್ ಹಾಗೂ ಸೈಟ್ ಮಾರಿ ಸಿನಿಮಾ ಮಾಡಿದ ನಿರ್ಮಾಪಕ ದೇವೇಂದ್ರ ಅವರ ಪ್ರಯತ್ನ ನಿಜಕ್ಕೂ ಅದ್ಭುತ. ಅದಕ್ಕೆ ಪೂರಕವಾಗಿ ಹೀರೋ ಶ್ರೀರಾಮ್, ಹೀರೋಯಿನ್ಸ್ ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಹಾಗೂ ರಂಗಾಯಣ ರಘು ಕೂಡ ಮನೋಜ್ಞ ಅಭಿನಯ ನೀಡಿದ್ದಾರೆ. ಹಳ್ಳಿ ಸೊಗಡಿನ ಈ ಎಮೋಷನಲ್ ಫೀಲ್ ಗುಡ್ ಮೂವಿ ಸಾಕಷ್ಟು ಕೌಟುಂಬಿಕ ಮೌಲ್ಯಗಳನ್ನ ಸಾರಿದ್ದು, ನೋಡಿದವರು ಪುನೀತ್ ರಾಜ್ಕುಮಾರ್-ಪಾರ್ವತಿ ಮೆನನ್ ನಟನೆಯ ಮಿಲನಗೆ ಹೋಲಿಸ್ತಿರೋದು ವಿಶೇಷ. ಅಲ್ಲದೆ ಅಪ್ಪು ಪ್ರೇಮದ ಊರಲಿ ಟೀಂಗೆ ಶುಭಾಶಯ ಕೋರಿರೋ ಎಐ ವಿಡಿಯೋ ಕೂಡ ವೈರಲ್ ಆಗ್ತಿದೆ.
2007ರಲ್ಲಿ ತೆರೆಕಂಡ ಅಪ್ಪು ನಟನೆಯ ಮಿಲನ ಸಿನಿಮಾ ಫ್ಯಾಮಿಲಿ ಆಡಿಯೆನ್ಸ್ ಹಾರ್ಟ್ ಫೇವರಿಟ್ ಮೂವಿಯಾಗಿ ಬರೋಬ್ಬರಿ 365 ದಿನ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಲ್ಲಿಯೂ ಸಹ ಇಷ್ಟವಿಲ್ಲದಿದ್ದರೂ ದಿಢೀರ್ ಅಂತ ಹೀರೋನ ಮದ್ವೆಯಾದ ಹೆಣ್ಣು ಅನುಭವಿಸೋ ನೋವಿನ ಕಥೆ ನೋಡುಗರ ಕಣ್ಣು ಒದ್ದೆಯಾಗಿಸಿತ್ತು. ಇತ್ತ ಪ್ರೇಮದ ಊರಲಿ ಸಿನಿಮಾ ಕೂಡ ಕ್ಲೈಮ್ಯಾಕ್ಸ್ನಲ್ಲಿ ಸಣ್ಣ ಮಿಸ್ ಅಂಡರ್ಸ್ಟ್ಯಾಂಡಿಂಗ್ನಿಂದ ನಾಯಕನಟಿ ಗಂಡನ ಮನೆ ಬಿಟ್ಟು ತವರು ಮನೆ ಸೇರಿ ಸಿಕ್ಕಾಪಟ್ಟೆ ನೋವುಂಡು, ಫಾರಿನ್ಗೆ ಹೋಗೋಕೆ ಡಿಸೈಡ್ ಮಾಡ್ತಾರೆ.
ಎರಡೂ ಸಿನಿಮಾಗಳ ಕಂಟೆಂಟ್ ಒಂದೇ. ಮದುವೆಗೆ ಮುನ್ನ ಹೇಗಿದ್ವಿ ಅನ್ನೋದಕ್ಕಿಂತ ಮದುವೆ ಆದ ಮೇಲೆ ಸತಿ-ಪತಿಯಾಗಿ ಹೇಗಿರ್ತೀವಿ ಅನ್ನೋದಾಗಿದೆ. ಮಿಲನ ಕ್ಲೈಮ್ಯಾಕ್ಸ್ನಲ್ಲಿ ಹೀಯೋಯಿನ್ ಹೀರೋಗೆ ಕ್ಷಮೆ ಕೇಳ್ತಾರೆ. ಆದ್ರೆ ಪ್ರೇಮದ ಊರಲಿನಲ್ಲಿ ನಾಯಕನೇ ನಾಯಕಿಗೆ ಕಾಲು ಹಿಡಿದು ಕ್ಷಮೆ ಯಾಚಿಸ್ತಾನೆ. ನೋಡುಗರ ಹೃದಯ ಹಿಂಡುವ ಈ ಎಮೋಷನಲ್ ಸಿನಿಮಾಗಳ ಸಾಮ್ಯತೆ ಬಗ್ಗೆ ಪ್ರೇಕ್ಷಕರೇ ಮಾತಾಡ್ತಿದ್ದು.. ನೋಡುಗರಿಗೆ ಅದು ಕನೆಕ್ಟ್ ಆಗ್ತಿರೋದು ಖುಷಿಯ ವಿಚಾರ.
ಇನ್ನೂ ಪ್ರೇಮದ ಊರಲಿ ಸಿನಿಮಾ 100 ಕೋಟಿ ಗಳಿಸೋ ಮೂಲಕ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಕೂಡ ಬರೆದಾಗಿದೆ. ಇಂದಿಗೂ ಫ್ಯಾಮಿಲಿ ಆಡಿಯೆನ್ಸ್ ಕುಟುಂಬ ಸಮೇತ ರಿಪೀಟೆಡ್ಲಿ ಸಿನಿಮಾನ ನೋಡೋಕೆ ಬರ್ತಿದ್ದು, ಎರಡೂವರೆ ಕೋಟಿ ಸಿನಿಮಾ ಹೀಗೆ ಹಂಡ್ರೆಡ್ ಕ್ರೋರ್ ಕ್ಲಬ್ ಸೇರಿ ಹಿಸ್ಟರಿ ಕ್ರಿಯೇಟ್ ಮಾಡಿದೆ. ಎಲ್ಲೆಡೆ ಜನ ಥಿಯೇಟರ್ನಲ್ಲೇ ಸಿನಿಮಾನ ಮುಗಿಬಿದ್ದು ನೋಡ್ತಿರೋದ್ರಿಂದ.. ಇನ್ನೂ ಓಟಿಟಿ ಅಥ್ವಾ ಟಿವಿ ರೈಟ್ಸ್ ಬಗ್ಗೆ ಚಿತ್ರತಂಡ ಯೋಚಿಸಿಲ್ಲ. ಹಾಗಾಗಿ ಬಾಕ್ಸ್ ಆಫೀಸ್ನಲ್ಲಿ ಇನ್ನೂ ಎಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





