ಪ್ರಾನ್ಸ್ ; ಜಗತ್ತಿನ ಅತ್ಯುತ್ತಮ ಹಾಗೂ ಸುಂದರ ದೇಶಗಳಲ್ಲಿ ಒಂದಾಗಿರುವ ಫ್ರಾನ್ಸ್ಗೆ ಒಮ್ಮೆಯಾದರೂ ಭೇಟಿ ನೀಡಬೇಕು ಎಂಬುದು ಪ್ರತಿಯೊಬ್ಬ ಪ್ರವಾಸಿಯ ಕನಸು. ಆದರೆ, ಪ್ರೀತಿ ಮತ್ತು ಸೌಂದರ್ಯದ ನಗರಿ ಎಂದೇ ಕರೆಯಲ್ಪಡುವ ಅಂತಹ ದೇಶವಿದೀಗ ಅಕ್ಷರಶಃ ಬೂದಿ ಮುಚ್ಚಿದ ಕೆಂಡವಾಗಿದೆ.
ಹೌದು, ಫ್ರಾನ್ಸ್ನಲ್ಲಿ ಜಾರಿಯಲ್ಲಿರುವ ಶಿಕ್ಷಣ ವ್ಯವಸ್ಥೆಯನ್ನು ವಿರೋಧಿಸಿ ಜನರು ಬೀದಿಗಿಳಿದಿದ್ದು, ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಮಂದಿ ಒಮ್ಮೆಲೆ ಭಾರಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಶಿಕ್ಷಣ ವ್ಯವಸ್ಥೆಯ ವಿರುದ್ಧ ಶುರುವಾದ ಕಿಚ್ಚು
ಮೂಲಗಳ ಪ್ರಕಾರ, ಫ್ರಾನ್ಸ್ನಲ್ಲಿ ಶಿಕ್ಷಣ ವ್ಯವಸ್ಥೆ ಮತ್ತು ಸುಧಾರಣೆಗಳು ಸರಿ ಇಲ್ಲ ಎಂದು ಆರಂಭವಾದ ಸಣ್ಣ ಮಟ್ಟಿನ ಅಸಮಾಧಾನ, ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದು ಇಡೀ ಫ್ರಾನ್ಸ್ ಅನ್ನು ಅಶಾಂತಿಯ ಕಡಲಲ್ಲಿ ತೇಲುವಂತೆ ಮಾಡಿದೆ.
ಜೆನ್-ಝೀ ಮತ್ತು ಜೆನ್-ಅಲ್ಫಾ ರಂಗಕ್ಕೆ
ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಹಿಂದೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದ ‘ಜೆನ್-ಝೀ’ (Gen Z) ಯುವಪಡೆ, ಇದೀಗ ಫ್ರಾನ್ಸ್ನಲ್ಲೂ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಈ ಯುವ ಸಂಘಟನೆಗಳ ಒಗ್ಗಟ್ಟು ಪ್ರತಿಭಟನೆಯನ್ನು ಅತ್ಯಂತ ಉಗ್ರ ಸ್ವರೂಪಕ್ಕೆ ತಿರುಗಿಸಿದೆ. ವಿಶೇಷವೆಂದರೆ, ಕೇವಲ ಫ್ರಾನ್ಸ್ ಮಾತ್ರವಲ್ಲದೆ ಅರ್ಜೆಂಟೀನಾ, ಇಟಲಿ, ಪೋರ್ಚುಗಲ್ ಹಾಗೂ ಅಲ್ಬೇನಿಯಾ ದೇಶಗಳಲ್ಲೂ ಯುವಜನರು ಇದೇ ರೀತಿಯ ತೀವ್ರ ಪ್ರತಿಭಟನೆಗಳಿಗೆ ಮುಂದಾಗಿದ್ದಾರೆ.
ಸೇನಾ ಬಳಕೆ ಮತ್ತು 2000ಕ್ಕೂ ಹೆಚ್ಚು ಜನರ ಬಂಧನ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಕಂಗಾಲಾಗಿರುವ ಫ್ರಾನ್ಸ್ ಸರ್ಕಾರ, ಪ್ರತಿಭಟನೆಯನ್ನು ಹತ್ತಿಕ್ಕಲು ಸೇನೆಯ ಮೊರೆ ಹೋಗಿದೆ ಎನ್ನಲಾಗಿದೆ. ಸರ್ಕಾರದ ಕಠಿಣ ನಿಲುವಿನಿಂದಾಗಿ ಜನರು ಮನೆಯಿಂದ ಹೊರಬರಲು ಕೂಡ ಭಯಪಡುವಂತಹ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಸ್ಥಳೀಯ ಪೊಲೀಸರು 2000ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಏನು ಬೇಕಾದರೂ ಮಾಡಲು ಸರ್ಕಾರ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಿದೆ.
ಒಟ್ಟಿನಲ್ಲಿ, ಫ್ರಾನ್ಸ್ ಹಾಗೂ ಇಟಲಿ ಸೇರಿದಂತೆ ಹಲವು ದೇಶಗಳಲ್ಲಿ ಭುಗಿಲೆದ್ದಿರುವ ಈ ಯುವ ಕ್ರಾಂತಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ





