ಟಾಲಿವುಡ್ನ ಪವರ್ ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ಇಬ್ಬರೂ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.
ಜನಸೇನೆಯ ಅಧಿಕೃತ ವಾಟ್ಸ್ಆ್ಯಪ್ ಮೂಲಕ ಈ ಜಂಟಿ ಹೇಳಿಕೆ ಬಿಡುಗಡೆಯಾಗಿದೆ. ತಮ್ಮ ಜೀವನದ ಮಹತ್ವದ ಸಮಯವನ್ನು ಒಟ್ಟಿಗೆ ಕಳೆದ ಬಳಿಕ, ಪರಸ್ಪರ ತಿಳಿವಳಿಕೆ ಮತ್ತು ಗೌರವದೊಂದಿಗೆ ಪ್ರತ್ಯೇಕವಾಗಲು ನಿರ್ಧರಿಸಿರುವುದಾಗಿ ದಂಪತಿ ತಿಳಿಸಿದ್ದಾರೆ.
ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಮುಂದುವರಿಯುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಇಬ್ಬರೂ ತಮ್ಮ ಕರ್ತವ್ಯ ನಿರ್ವಹಿಸಲಿದ್ದಾರೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ತಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಯ ಸಂದರ್ಭದಲ್ಲಿ ಅಭಿಮಾನಿಗಳು ಮತ್ತು ಹಿತೈಷಿಗಳು ಗೌಪ್ಯತೆಯನ್ನು ಗೌರವಿಸಬೇಕು. ಸಹಾನುಭೂತಿ ಹಾಗೂ ತಿಳಿವಳಿಕೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ. ಈವರೆಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಪವನ್ ಕಲ್ಯಾಣ್ 2013ರ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಅನ್ನಾ ಕೊನಿಡೆಲಾ ಎಂದೇ ಗುರುತಿಸಿಕೊಂಡಿದ್ದರು. ಈ ದಂಪತಿಗೆ ಪೊಲೆನಾ ಅಂಜನಾ ಪವನೋವಾ ಎಂಬ ಪುತ್ರಿ ಹಾಗೂ ಮಾರ್ಕ್ ಶಂಕರ್ ಪವನೋವಿಚ್ ಎಂಬ ಪುತ್ರನಿದ್ದಾರೆ. ಪವನ್ ಅಭಿನಯದ ‘ತೀನ್ ಮಾರ್’ ಸಿನಿಮಾದಲ್ಲೂ ಅನ್ನಾ ನಟಿಸಿದ್ದರು.
ಪವನ್ ಕಲ್ಯಾಣ್ಗೆ ಇದು ಮೂರನೇ ದಾಂಪತ್ಯ
ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದಲ್ಲಿ ಈ ಹಿಂದೆಯೂ ಎರಡು ವಿವಾಹಗಳು ನಡೆದಿದ್ದವು. 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದ ಪವನ್, 2008ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದರು. ಬಳಿಕ ನಟಿ ರೇಣು ದೇಸಾಯಿ ಅವರನ್ನು 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಅಖಿರಾ ನಂದನ್ ಮತ್ತು ಆಧ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2012ರಲ್ಲಿ ಇಬ್ಬರೂ ಪ್ರತ್ಯೇಕವಾಗಿದ್ದರು.
ಇದಾದ ಬಳಿಕ ಅನ್ನಾ ಲೆಜ್ನೆವಾ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದರು. ಇದೀಗ 13 ವರ್ಷಗಳ ದಾಂಪತ್ಯದ ಬಳಿಕ ಪ್ರತ್ಯೇಕವಾಗುವ ನಿರ್ಧಾರ ಕೈಗೊಂಡಿರುವ ಸುದ್ದಿ ಮುನ್ನೆಲೆಗೆ ಬಂದಿದೆ.





