ಮೈಸೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿಗಳ ಭಾರಿ ಶಬ್ಧಕ್ಕೆ ಆರು ವರ್ಷದ ಡಾಬರ್ಮ್ಯಾನ್ ತಳಿಯ ಶ್ವಾನವೊಂದು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ತಿ.ನರಸೀಪುರದಲ್ಲಿ ನಡೆದಿದೆ.
ತಿ.ನರಸೀಪುರದ ತ್ರಿವೇಣಿನಗರದಲ್ಲಿ ಈ ಘಟನೆ ಸಂಭವಿಸಿದೆ. ಬಿ.ಆರ್. ರಾಘವೇಂದ್ರಸ್ವಾಮಿ ಅವರಿಗೆ ಸೇರಿದ ಆರು ವರ್ಷದ ಡಾಬರ್ಮ್ಯಾನ್ ತಳಿಯ ಶ್ವಾನ ಬ್ಲಾಕಿ ಮೃತಪಟ್ಟಿದೆ. ಪಕ್ಕದ ಮನೆಯವರು ಸಿಡಿಸಿದ ಪಟಾಕಿಗಳ ಭಾರಿ ಶಬ್ಧದಿಂದ ಬೆಚ್ಚಿಬಿದ್ದ ನಾಯಿಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬ್ಲಾಕಿ ಕುಟುಂಬದ ಸದಸ್ಯರಂತೆಯೇ ಎಲ್ಲರೊಂದಿಗೆ ಬೆರೆತು ಜೀವನ ನಡೆಸುತ್ತಿತ್ತು. ಆದರೆ, ಪಟಾಕಿಗಳ ಕಿವಿಗಡಚಿಕ್ಕುವ ಶಬ್ಧದಿಂದಾಗಿ ಪ್ರೀತಿಯಿಂದ ಸಾಕಿದ್ದ ಶ್ವಾನವನ್ನು ಕಳೆದುಕೊಂಡ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಬಳಿಕ ಕುಟುಂಬದ ಸದಸ್ಯರು ಬ್ಲಾಕಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಾರ್ವಜನಿಕರಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಸಾಕುಪ್ರಾಣಿಗಳು ಹಾಗೂ ಬೀದಿನಾಯಿಗಳ ಬಗ್ಗೆ ಕಾಳಜಿ ವಹಿಸಬೇಕು. ಭಾರಿ ಶಬ್ಧ ಉಂಟುಮಾಡುವ ಪಟಾಕಿಗಳನ್ನು ಸಿಡಿಸುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಟಾಕಿಗಳ ಸದ್ದು ಮನುಷ್ಯರಿಗೆ ಸಂಭ್ರಮದ ಭಾಗವಾಗಿದ್ದರೂ, ಪ್ರಾಣಿಗಳಿಗೆ ತೀವ್ರ ಭಯ ಮತ್ತು ಆತಂಕವನ್ನು ಉಂಟುಮಾಡಬಹುದು. ಹೀಗಾಗಿ ಹಬ್ಬದ ಆಚರಣೆಯ ವೇಳೆ ಪ್ರಾಣಿಗಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸುವುದು ಅಗತ್ಯವಾಗಿದೆ.





