ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಟಾಕಿ ಅವಘಡಗಳು ಆತಂಕ ಮೂಡಿಸಿವೆ. ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅನಾಹುತಗಳಿಂದ ಕಣ್ಣಿನ ಗಾಯಗಳಿಗೆ ಒಳಗಾದವರ ಸಂಖ್ಯೆ 150ರ ಗಡಿ ದಾಟಿದೆ. ನಗರದ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದ್ದು, ಹಲವು ಪ್ರಕರಣಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ. ಮತ್ತೊಂದೆಡೆ ಪಟಾಕಿ ಹೊಗೆಯಿಂದ ಬೆಂಗಳೂರಿನ ವಾಯುಮಾಲಿನ್ಯವೂ ಹೆಚ್ಚಾಗಿದ್ದು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಎದುರಾಗಿದೆ.
ಕಣ್ಣಿನ ಆಸ್ಪತ್ರೆಗಳಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಳ
ಬೆಂಗಳೂರಿನ ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ಪಟಾಕಿ ಅವಘಡಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಆಸ್ಪತ್ರೆವಾರು ಲಭ್ಯವಿರುವ ಮಾಹಿತಿ ಪ್ರಕಾರ ನಾರಾಯಣ ನೇತ್ರಾಲಯದಲ್ಲಿ 51, ಮಿಂಟೋ ಆಸ್ಪತ್ರೆಯಲ್ಲಿ 30, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 15 ಪ್ರಕರಣಗಳು ದಾಖಲಾಗಿವೆ.
ಇನ್ನು ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ 5, ಅಗ್ರವಾಲ್ ಕಣ್ಣಿನ ಆಸ್ಪತ್ರೆಯಲ್ಲಿ 4 ಹಾಗೂ ಬೆಂಗಳೂರು ನೇತ್ರಾಲಯದಲ್ಲಿ 6 ಪ್ರಕರಣಗಳು ವರದಿಯಾಗಿವೆ. ಇತರೆ ಆಸ್ಪತ್ರೆಗಳಲ್ಲೂ 20ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆದಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಪ್ರಕರಣಗಳ ಸಂಖ್ಯೆ 36ಕ್ಕೆ ಏರಿಕೆಯಾಗಿರುವ ಮಾಹಿತಿ ಲಭ್ಯವಾಗಿದೆ.
30 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯ
ಮಿಂಟೋ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತದಿಂದ ಗಾಯಗೊಂಡ ಇಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬೆಂಗಳೂರಿನ ಅಶೋಕ ನಗರ ನಿವಾಸಿಯಾಗಿರುವ 30 ವರ್ಷದ ಯುವಕನ ಕಣ್ಣಿಗೆ ಗಂಭೀರ ಗಾಯವಾಗಿದೆ. ಈತ ಪಟಾಕಿ ಸಿಡಿಸುವಾಗ ಅದರ ಪಕ್ಕದಲ್ಲಿ ನಿಂತಿದ್ದ, ಈ ಸಂದರ್ಭದಲ್ಲಿ ಪಟಾಕಿ ಸಿಡಿಸುವ ವೇಳೆ ಆತನ ಕಣ್ಣಿಗೆ ಗಾಯವಾಗಿದ್ದು, ಯುವಕನ ಕಣ್ಣಿನಲ್ಲಿ ಸ್ಕ್ಲೆರಲ್ ಟಿಯರ್ (Scleral Tear) ಉಂಟಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಗಾಯವನ್ನು ಸರಿಪಡಿಸಿದ್ದಾರೆ. ಆದರೆ ಯುವಕನ ದೃಷ್ಟಿ ಮರಳುವ ಸಾಧ್ಯತೆ ಕುರಿತು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಬೆಂಗಳೂರಿನ ಹೊಸಕೋಟೆಯಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ನಾಲ್ಕು ವರ್ಷದ ಬಾಲಕನಿಗೂ ಪಟಾಕಿಯಿಂದ ಕಣ್ಣಿಗೆ ಗಂಭೀರ ಗಾಯವಾಗಿದೆ. ಚಕ್ರಿ ಹಾಗೂ ಬಿಜಿಲಿ ಪಟಾಕಿಯಿಂದ ಬಾಲಕನಿಗೆ ಲಿಂಬಲ್ ಟಿಯರ್ ವಿತ್ ಐರಿಸ್ ಪ್ರೊಲ್ಯಾಪ್ಸ್ (Limbal Tear with Iris Prolapse) ಗಾಯವಾಗಿದೆ. ಬಾಲಕನಿಗೂ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗಿದೆ.
ಗರ್ಭಿಣಿ ಸೇರಿದಂತೆ ಆರು ಮಂದಿಗೆ ಗಾಯ
ಇತ್ತ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಪಟಾಕಿ ಅವಘಡದಿಂದ ಗಾಯಗೊಂಡ ಆರು ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳಲ್ಲಿ ನಾಲ್ವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರಿದ್ದಾರೆ. 11, 14 ಮತ್ತು 9 ವರ್ಷದ ಬಾಲಕರು ಹಾಗೂ 9 ವರ್ಷದ ಬಾಲಕಿಗೆ ಗಾಯಗಳಾಗಿವೆ. 21 ಮತ್ತು 27 ವರ್ಷದ ಮಹಿಳೆಯರೂ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಈ ಆರು ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರಲ್ಲಿ 21 ವರ್ಷದ ಗರ್ಭಿಣಿಯೊಬ್ಬರಿಗೆ ಗಂಭೀರ ಗಾಯವಾಗಿದೆ. ಮಹಿಳೆ ತೊಡೆಯ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಕಿಡಿ ತಗುಲಿ ಬಾಕ್ಸ್ನಲ್ಲಿದ್ದ ಪಟಾಕಿಗಳೆಲ್ಲ ಏಕಕಾಲದಲ್ಲಿ ಸಿಡಿದಿವೆ. ಪರಿಣಾಮ ಮಹಿಳೆಗೆ ತೀವ್ರ ಗಾಯಗಳಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಪಟಾಕಿ ಸಿಡಿತದಿಂದ ಮೂವರು ಮಕ್ಕಳ ಮುಖದ ಚರ್ಮ ಸುಟ್ಟುಹೋಗಿದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗದ ಮುಖ್ಯಸ್ಥ ಡಾ. ಎನ್.ಎ. ಯೋಗೇಶ್ವರಪ್ಪ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹೆಚ್ಚಿದ ವಾಯುಮಾಲಿನ್ಯ
ಪಟಾಕಿ ಅವಘಡಗಳ ಜೊತೆಗೆ ದೀಪಾವಳಿ ಪಟಾಕಿ ಹೊಗೆ ಬೆಂಗಳೂರಿನ ವಾಯುಮಾಲಿನ್ಯವನ್ನೂ ಹೆಚ್ಚಿಸಿದೆ. ನಗರದ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿದ್ದು, ವಾಯುಮಾಲಿನ್ಯದ ಪ್ರಮಾಣದಲ್ಲಿ ಸುಮಾರು ಶೇ.30ರಷ್ಟು ಏರಿಕೆಯಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕ (AQI) 179ಕ್ಕೆ ತಲುಪಿದೆ. ಸೋಮವಾರ ಇದೇ ಪ್ರಮಾಣ 186ರಷ್ಟಿತ್ತು.
ಪ್ರದೇಶವಾರು ವಾಯು ಗುಣಮಟ್ಟ ಸೂಚ್ಯಂಕ ಗಮನಿಸಿದರೆ ಕೋರಮಂಗಲದಲ್ಲಿ 186, ಸರ್ಜಾಪುರದಲ್ಲಿ 181, ಲಾಲ್ಬಾಗ್ ವೆಸ್ಟ್ ಗೇಟ್ನಲ್ಲಿ 179, ರಿಚರ್ಡ್ ಟೌನ್ನಲ್ಲಿ 170, ಸಿಲ್ಕ್ ಬೋರ್ಡ್ನಲ್ಲಿ 160 ಹಾಗೂ ವರ್ತೂರಿನಲ್ಲಿ 145 ದಾಖಲಾಗಿದೆ. ಬಾಣಸವಾಡಿಯಲ್ಲಿ 111, ಹೆಬ್ಬಾಳದಲ್ಲಿ 106, ಪೀಣ್ಯದಲ್ಲಿ 115, ಆರ್.ಆರ್. ನಗರದಲ್ಲಿ 117, ನಿಮ್ಹಾನ್ಸ್ ಡೈರಿ ಸರ್ಕಲ್ನಲ್ಲಿ 114, ಜಯನಗರ 5ನೇ ಹಂತದಲ್ಲಿ 114, ಮಲ್ಲಸಂದ್ರದಲ್ಲಿ 117 ಹಾಗೂ ಬಿಟಿಎಂ ಲೇಔಟ್ನಲ್ಲಿ 114ರಷ್ಟು ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ.
ಒಟ್ಟಿನಲ್ಲಿ ದೀಪಾವಳಿ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಹಾಗೂ ವಾಯುಮಾಲಿನ್ಯ ಬೆಂಗಳೂರಿಗರಲ್ಲಿ ಆತಂಕ ಮೂಡಿಸಿವೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದ ಸಮಸ್ಯೆ ಇರುವವರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.





