ಮೈಸೂರು: ಮೈಸೂರು ಅರಮನೆಯ ಮಾಲೀಕತ್ವ, ನಿರ್ವಹಣೆ ಹಾಗೂ ದಸರಾ ಮಹೋತ್ಸವದ ವೇಳೆ ಅಂಬಾರಿ ಬಳಕೆಗೆ ಸಂಬಂಧಿಸಿದಂತೆ ಎದ್ದಿರುವ ವಿವಾದದ ಕುರಿತು ಪ್ರಮೋದಾ ದೇವಿ ಒಡೆಯರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಮೈಸೂರು ಅರಮನೆ ಖಾಸಗಿ ಸ್ವತ್ತಾಗಿದ್ದು, ಅದನ್ನು ಸರ್ಕಾರ ನಿರ್ಮಿಸಿಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿ ವಾಸವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅರಮನೆಯ ಮಾಲೀಕತ್ವ ಮತ್ತು ನಿರ್ವಹಣೆ ವಿಚಾರದಲ್ಲಿ ತಮ್ಮ ಕುಟುಂಬದ ನಿಲುವನ್ನು ವಿವರಿಸಿದರು. ಅರಮನೆಯ ನಿರ್ವಹಣೆಗಾಗಿ ಸರ್ಕಾರ ಅರಮನೆ ಆಡಳಿತ ಮಂಡಳಿಯನ್ನು ರಚಿಸಿದೆ. ಈ ನಿರ್ಧಾರವನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ ಎಂದು ತಿಳಿಸಿದರು.
ಅಂಬಾರಿ, ಸಿಂಹಾಸನ ನಮ್ಮ ವಶದಲ್ಲೇ ಇರುತ್ತದೆ
ದಸರಾ ಮಹೋತ್ಸವದ ಚಿನ್ನದ ಅಂಬಾರಿ ಬಳಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೂ ಪ್ರಮೋದಾ ದೇವಿ ಉತ್ತರಿಸಿದರು. ಅಂಬಾರಿಯನ್ನು ಸರ್ಕಾರಕ್ಕೆ ಬಾಡಿಗೆಗೆ ನೀಡುತ್ತಿಲ್ಲ. ಅಂಬಾರಿಯನ್ನು ಇಟ್ಟುಕೊಂಡು ಟಿಕೆಟ್ ಮಾರಾಟ ಹಾಗೂ ಪ್ರಚಾರದ ಮೂಲಕ ಸರ್ಕಾರ ಆದಾಯ ಗಳಿಸುತ್ತಿದೆ. ಹೀಗಾಗಿ ಅದರ ವಾಣಿಜ್ಯ ಬಳಕೆಗೆ ಹಣ ನೀಡಲಾಗುತ್ತಿದೆ. ಅದನ್ನು ಬಾಡಿಗೆ ಎಂದು ಕರೆಯುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಅಂಬಾರಿ ಮತ್ತು ಸಿಂಹಾಸನ ಎರಡೂ ನಮ್ಮ ಕುಟುಂಬದ ವಶದಲ್ಲಿವೆ. ಹಿಂದೆಯೂ ನಮ್ಮ ವಶದಲ್ಲಿದ್ದವು, ಮುಂದೆಯೂ ನಮ್ಮ ವಶದಲ್ಲೇ ಇರುತ್ತವೆ ಎಂದು ಹೇಳಿದರು. ಅಂಬಾರಿ ಬಳಕೆಗೆ ಸರ್ಕಾರ ಎಷ್ಟು ಗೌರವಧನ ನೀಡಿದೆ ಎಂಬುದನ್ನು ತಾವು ಬಹಿರಂಗಪಡಿಸುವುದಿಲ್ಲ. ಸರ್ಕಾರಕ್ಕೆ ಆ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಅವಕಾಶವಿದೆ ಎಂದರು.
ಅಂಬಾರಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಹಣ ಕೇಳಲಾಗುತ್ತಿದೆ. ಸರ್ಕಾರಕ್ಕೆ ಆಸಕ್ತಿ ಇದ್ದರೆ ತನ್ನದೇ ಆದ ಮತ್ತೊಂದು ಅಂಬಾರಿಯನ್ನು ನಿರ್ಮಿಸಿಕೊಳ್ಳಬಹುದು. ಇದಕ್ಕೆ ನನ್ನ ಯಾವುದೇ ಅಭ್ಯಂತರವಿಲ್ಲ. ಈ ಹಿಂದೆಯೂ ಸರ್ಕಾರಕ್ಕೆ ಇದೇ ಸಲಹೆ ನೀಡಿದ್ದೆ. ಸರ್ಕಾರದ ಬಳಿ ಸಂಪನ್ಮೂಲಗಳಿದ್ದರೂ ಹೊಸ ಅಂಬಾರಿ ನಿರ್ಮಿಸಿಲ್ಲ ಎಂದು ತಿಳಿಸಿದರು.
ಅಂಬಾರಿ ಹೊರುವ ಆನೆ ಬಗ್ಗೆ ತಿಳಿಯುವುದು ನನ್ನ ಹಕ್ಕು
ದಸರಾ ಜಂಬೂಸವಾರಿ ವೇಳೆ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ವಿಚಾರವಾಗಿಯೂ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಂಬಾರಿಯ ಮಾಲೀಕರಾಗಿ ಅದನ್ನು ಹೊರುವ ಆನೆ ಯಾವುದು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ತಮಗಿದೆ ಎಂದರು.
ಇದು ಶಿಷ್ಟಾಚಾರದ ವಿಚಾರವಲ್ಲ ಎಂಬುದು ತಮಗೂ ಗೊತ್ತಿದೆ. ಆದರೆ ಹಲವು ವಿಚಾರಗಳು ಪರಸ್ಪರ ನಂಬಿಕೆ, ಸಹಕಾರ ಮತ್ತು ತಿಳುವಳಿಕೆಯಿಂದ ನಡೆಯುತ್ತವೆ. ಅಂಬಾರಿ ಹೊರುವ ಆನೆಯನ್ನು ಮೊದಲೇ ನಿರ್ಧರಿಸಿ ಮಾಹಿತಿ ನೀಡಬಹುದಿತ್ತು. ಕೇವಲ ಐದು ದಿನಗಳ ಮೊದಲು ತಿಳಿಸಿದರೆ ಅಂಬಾರಿಯನ್ನು ನೀಡುವ ಬಗ್ಗೆ ತಮಗೆ ಹೇಗೆ ಭರವಸೆ ಮೂಡುತ್ತದೆ ಎಂದು ಪ್ರಶ್ನಿಸಿದರು.
ದಸರಾ ಆಯೋಜನೆಯಲ್ಲಿನ ಸಮಸ್ಯೆಗಳ ಬಗ್ಗೆ ಅಸಮಾಧಾನ
ದಸರಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯ ಹೆಸರಿನಲ್ಲಿ ಕೆಲವು ಸಮಸ್ಯೆಗಳು ಎದುರಾಗಿವೆ ಎಂದು ಪ್ರಮೋದಾ ದೇವಿ ಹೇಳಿದರು. ಜಟ್ಟಿ ಕಾಳಗದಲ್ಲಿ ಭಾಗವಹಿಸುವವರನ್ನು ಒಳಗೆ ಬಿಡದಿರುವುದು ತೊಂದರೆಯಾಗಿದೆ. ಆಯುಧ ಪೂಜೆ ಮತ್ತು ವಿಜಯಯಾತ್ರೆ ಸಂದರ್ಭದಲ್ಲಿಯೂ ಪ್ರತಿ ವರ್ಷ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವರಾತ್ರಿ ಆಚರಣೆಯನ್ನು ಏಳು ದಿನಗಳ ಕಾಲ ನಡೆಸುವಂತೆ ತಾವು ಸರ್ಕಾರಕ್ಕೆ ನಿರ್ದೇಶನ ನೀಡಿಲ್ಲ. ಏಳು ದಿನಗಳ ಕಾರ್ಯಕ್ರಮವನ್ನು ಅರ್ಧದಷ್ಟು ಮುಗಿಸಿ, ನಂತರ ಉಳಿದ ಕಾರ್ಯಕ್ರಮಗಳನ್ನು ನಡೆಸುವಂತೆ ಸಲಹೆ ನೀಡಿದ್ದೆ ಅಷ್ಟೇ. ಈ ಕುರಿತು ಸರ್ಕಾರಕ್ಕೆ ಯಾವುದೇ ಪತ್ರ ಬರೆದಿಲ್ಲ. ಮಾಧ್ಯಮಗಳಿಗೆ ಪತ್ರ ಬರೆದು ಸಾರ್ವಜನಿಕರ ಸಹಕಾರ ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸಿಎಂ ಹೇಳಿಕೆಗೆ ಧನ್ಯವಾದ, ವಿವಾದ ಮುಂದುವರಿಸುವುದಿಲ್ಲ
ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಮುಖ್ಯಮಂತ್ರಿ ಅವರ ಹೇಳಿಕೆಗೆ ಧನ್ಯವಾದ ತಿಳಿಸಿದ ಪ್ರಮೋದಾ ದೇವಿ, ಈ ವಿಚಾರವನ್ನು ಅನಗತ್ಯವಾಗಿ ದೊಡ್ಡದು ಮಾಡುವ ಉದ್ದೇಶವಿಲ್ಲ ಎಂದರು. ಮುಂದಿನ ದಸರಾವರೆಗೂ ಈ ಸಮಸ್ಯೆ ಮತ್ತು ಗೊಂದಲ ಮುಂದುವರಿಯಲು ಬಿಡುವುದಿಲ್ಲ ಎಂದು ಹೇಳಿದರು.
ದಸರಾ ಪ್ರಾಧಿಕಾರ ರಚನೆಯಾದರೆ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದು ತಾವು ಹೇಳಿಲ್ಲ. ಈ ವಿಚಾರವನ್ನು ಇನ್ನು ಮುಂದೆ ಮುಂದುವರಿಸುವುದು ಬೇಡ ಎಂದು ತಿಳಿಸಿದರು.
ಅಂಬಾರಿಯ ತೂಕದ ಬಗ್ಗೆ ನನಗೆ ಸಂಬಂಧವಿಲ್ಲ
ಚಿನ್ನದ ಅಂಬಾರಿಯ ಒಟ್ಟು ತೂಕ ಎಷ್ಟು? ಅದರಲ್ಲಿ ಎಷ್ಟು ಚಿನ್ನವಿದೆ? ಎಂಬ ಪ್ರಶ್ನೆಗಳಿಗೂ ಅವರು ಪ್ರತಿಕ್ರಿಯಿಸಿದರು. ಅಂಬಾರಿಯ ತೂಕವನ್ನು ತಾವು ಎಂದಿಗೂ ಹಾಕಿಲ್ಲ. ಮುಂದೆಯೂ ಹಾಕುವುದಿಲ್ಲ. ಈ ವಿಚಾರದಲ್ಲಿ ಯಾರಿಗೆ ಏನು ಅನಿಸುತ್ತದೆಯೋ ಅದನ್ನು ಅವರು ಮಾತನಾಡಲಿ ಅಥವಾ ಬರೆದುಕೊಳ್ಳಲಿ. ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಮೋದಾ ದೇವಿ ಒಡೆಯರ್ ಸ್ಪಷ್ಟಪಡಿಸಿದರು.





