ಸಾಮಾಜಿಕ ಜಾಲತಾಣಗಳು ಇಂದಿನ ಆಧುನಿಕ ಯುಗದ ಅತ್ಯಂತ ಬಲಿಷ್ಠ ಅಸ್ತ್ರ. ಸರಿಯಾಗಿ ಬಳಕೆಯಾದರೆ ಇದು ವ್ಯಕ್ತಿಗೆ ಅವಕಾಶಗಳ ಬಾಗಿಲು ತೆರೆದು ಕೊಡುತ್ತದೆ. ಆದರೆ ಅತಿಯಾದ ಅಥವಾ ದುರುಪಯೋಗ ಮನುಷ್ಯನ ಬದುಕನ್ನೇ ಸಂಕಷ್ಟಕ್ಕೆ ತಳ್ಳಬಲ್ಲದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಮನುಷ್ಯನ ಜೀವನವನ್ನು ನಿಯಂತ್ರಿಸುತ್ತಿರುವ ಮಟ್ಟಿಗೆ ಪ್ರಭಾವ ಬೀರುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಒಳ್ಳೆಯ ಮನಸ್ಸುಗಳು ಇದ್ದರೂ, ಅವಾಚ್ಯ ಪದಗಳು, ದ್ವೇಷ, ಅಸೂಯೆ, ನಿಂದನೆ, ಮಾನಸಿಕ ಕಿರುಕುಳ ನೀಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ವಿಶೇಷವಾಗಿ ಮಹಿಳೆಯರು, ಯುವತಿಯರು ಹಾಗೂ ಚಿತ್ರರಂಗದ ನಟಿಯರು ಈ ಆನ್‌ಲೈನ್ ಕಿರುಕುಳಕ್ಕೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇದರಲ್ಲಿ ಕೆಲವರು ಲೈಂಗಿಕ ಶೋಷಣೆಯ ಉದ್ದೇಶದಿಂದಲೇ ಮೆಸೇಜ್‌ಗಳನ್ನು ಕಳುಹಿಸುವುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಈ ಸಾಲಿನಲ್ಲಿ ಈಗ ಬಾಲಿವುಡ್‌ನ ಸ್ವಯಂಘೋಷಿತ ವಿಮರ್ಶಕ “ಕೆಆರ್‌ಕೆ” ಅಲಿಯಾಸ್ ಕಮಲ್ ರಶೀದ್ ಖಾನ್ ಹೆಸರು ಕೂಡ ಕೇಳಿಬರುತ್ತಿದೆ. 22 ವರ್ಷದ ಯುವತಿ ಒಬ್ಬರು, ಕೆಆರ್‌ಕೆ ತಮ್ಮನ್ನು ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಭೇಟಿಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಮಲ್ ರಶೀದ್ ಖಾನ್ ಅವರು ವಿವಾದಗಳಿಂದಲೇ ಗುರುತಿಸಿಕೊಂಡಿದ್ದಾರೆ. ‘ದೇಶದ್ರೋಹಿ’ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದೇ ಅವರ ಪ್ರಮುಖ ಸಿನಿಮಾ ಸಾಧನೆ. ನಂತರದ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅವರಿಗೆ ಕೆಲಸವೂ ಸಿಗಲಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟ–ನಟಿಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವ ವ್ಯಕ್ತಿ ಅವರು. ಬಾಲಿವುಡ್‌ನ ಅನೇಕ ಮಂದಿ ಅವರನ್ನು ಬಹಿರಂಗವಾಗಿಯೇ ದೂರ ಇಟ್ಟಿದ್ದಾರೆ ಎಂಬ ಮಾತು ಕೂಡ ಇದೆ.
ಆದರೆ ಇದೀಗ 22 ವರ್ಷದ ಯುವತಿ ಸಿಮ್ರನ್ (ಸಿಮ್ಮೊಲಿಕ್) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಆರ್‌ಕೆ ಕಳುಹಿಸಿದ ಮೆಸೇಜ್‌ಗಳ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಕೇವಲ 3,200ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಪರಿಚಿತ ಯುವತಿಯನ್ನು, 50ಕ್ಕೂ ಹೆಚ್ಚು ವಯಸ್ಸಿನ ವ್ಯಕ್ತಿಯೊಬ್ಬರು “ಕೆಲಸದ” ನೆಪದಲ್ಲಿ ಭೇಟಿಗೆ ಕರೆಯುತ್ತಿರುವುದು ಅನುಮಾನ ಹುಟ್ಟಿಸುತ್ತದೆ ಎಂದು ಸಿಮ್ರನ್ ಪ್ರಶ್ನಿಸಿದ್ದಾರೆ.
“ಮೆಸೇಜ್ ಮಾಡುವುದು ತಪ್ಪಲ್ಲ. ಆದರೆ ಕೆಲಸ ಏನು ಎಂದು ಸ್ಪಷ್ಟವಾಗಿ ಹೇಳದೆ ಬಂದು ಭೇಟಿಯಾಗಿ ಎನ್ನುವುದರ ಅರ್ಥವೇನು?” ಎಂದು ಸಿಮ್ರನ್ ತಮ್ಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಸಾಮಾನ್ಯವಾಗಿ ದೊಡ್ಡ ಸೆಲೆಬ್ರಿಟಿಗಳಿಗೆ ಮ್ಯಾನೇಜರ್ ಅಥವಾ ಏಜೆನ್ಸಿ ಇರುತ್ತದೆ. ನಿಜಕ್ಕೂ ಕೆಲಸದ ಆಫರ್ ಇದ್ದಿದ್ದರೆ ಅದರ ಸಂಪೂರ್ಣ ವಿವರಗಳನ್ನು ಮೆಸೇಜ್ ಅಥವಾ ಇಮೇಲ್ ಮೂಲಕ ಕಳುಹಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.
ಇನ್ನೂ ಮಾತನಾಡಿದ ಸಿಮ್ರನ್, “ನಾವೆಲ್ಲರೂ ಇದೇ ಜನರೇಷನ್‌ನವರು. ‘ಭೇಟಿಯಾಗೋಣ’ ಎನ್ನುವುದರ ಹಿಂದಿನ ಉದ್ದೇಶ ಏನು ಎಂಬುದು ನಮಗೆ ಚೆನ್ನಾಗಿ ಗೊತ್ತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಆನ್‌ಲೈನ್‌ನಲ್ಲಿ ನಡೆಯುವ ಅಸಭ್ಯ ವರ್ತನೆಯ ವಿರುದ್ಧ ಧ್ವನಿ ಎತ್ತಿದ್ದಾರೆ.
ಸಿಮ್ರನ್ ಹಂಚಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕೇವಲ 21 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 2,000ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿದ್ದು, ಅದರಲ್ಲಿ ಇನ್ನಿಬ್ಬರು ಮಹಿಳೆಯರು ಕೂಡ “ನಮಗೂ ಕೆಆರ್‌ಕೆ ಇದೇ ರೀತಿಯ ಮೆಸೇಜ್ ಕಳುಹಿಸಿದ್ದರು” ಎಂದು ಆರೋಪಿಸಿದ್ದಾರೆ. “ಇಂತಹ ಅಂಕಲ್‌ಗಳು ಹೇಗೆ ಇರುತ್ತಾರೆ ಅನ್ನೋದು ನಮಗೆ ಗೊತ್ತು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವಿಷಯದ ಬಗ್ಗೆ ಕೆಆರ್‌ಕೆ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.





