ಕಾಂತಾರ ಬರೀ ದೈವಗಳ ದಂತಕಥೆ ಅಲ್ಲ.. ಬಾಕ್ಸ್ ಆಫೀಸ್‌ನಲ್ಲೂ ಹೊಸ ಇತಿಹಾಸ ಬರೆದಿದೆ. ಒಂದೇ ವಾರಕ್ಕೆ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ. ಅಂದಹಾಗೆ ಆಂಧ್ರ ಡಿಸಿಎಂ ಪವನ್ OG ರೆಕಾರ್ಡ್ಸ್ ಬ್ರೇಕ್ ಮಾಡಿರೋ ಕಾಂತಾರದ ಬ್ರಹ್ಮಕಲಶ ವೈಭವ ಅನಾವರಣಗೊಂಡಿದೆ.
ಯೆಸ್.. ದಿನದಿಂದ ದಿನಕ್ಕೆ ಕಾಂತಾರ ಕಹಳೆ ವಿಶ್ವದ ಮೂಲೆ ಮೂಲೆಯಲ್ಲಿ ಜೋರಾಗಿ ಮೊಳಗುತ್ತಲೇ ಇದೆ. ಇದ್ರಿಂದ ಇಡೀ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್ ಟೀಮ್‌ಗಳಲ್ಲಿ ಸಾರ್ಥಕದ ಹಾಗೂ ಸಾಮರ್ಥ್ಯದ ವಿಜಯ ಕಳೆ ಎದ್ದು ಕಾಣ್ತಿದೆ. ಇಡೀ ದೇಶವೇ ಕಾಂತಾರ ಚಿತ್ರದಲ್ಲಿನ ಪಾತ್ರಗಳು, ಕಥೆ, ದೈವಿಕ ಅಂಶಗಳು ಹಾಗೂ ಮೇಕಿಂಗ್ ಬಗ್ಗೆ ಕೊಂಡಾಡ್ತಿದೆ. ಸಪ್ತ ಸಾಗರದಾಚೆಗೂ ಗುಳಿಗನ ಮಹಿಮೆ ಸದ್ದು ಮಾಡ್ತಿದೆ.
ಒಂದೇ ವಾರಕ್ಕೆ 500ಕೋಟಿ.. ಕಾಂತಾರ ಮುಂದೆ OG ಠುಸ್
300 ಕೋಟಿಗೆ ಪವನ್ ಆಟ ಸುಸ್ತು.. ನಿಲ್ಲದ ಕಾಂತಾರ ಓಟ..!
ಆರೇ ದಿನಕ್ಕೆ 400ಕ್ಕೂ ಅಧಿಕ ಕೋಟಿ ಗಳಿಸಿದ್ದ ಕಾಂತಾರ ಚಾಪ್ಟರ್-1 ಇದೀಗ ಒಂದು ವಾರದಲ್ಲಿ ಬರೋಬ್ಬರಿ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಲಿವುಡ್ ಮಂದಿಯನ್ನ ಕೂಡ ನಿಬ್ಬೆರಗಾಗಿಸಿದೆ. ಇದು ಸಾರವಿರೋ ಕಥೆ, ಸತ್ವವಿರೋ ಪಾತ್ರಗಳು ಹಾಗೂ ಮಜಬೂತಾದ ಮೇಕಿಂಗ್‌ಗಿರೋ ಶಕ್ತಿಯ ಪ್ರತೀಕವಾಗಿದೆ. ಅಂಥದ್ದೊಂದು ಮ್ಯಾಜಿಕ್‌ಗೆ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು- ಚೆಲುವೆ ಗೌಡ ನಾಂದಿ ಹಾಡಿದ್ದಾರೆ.
ಕನ್ನಡಿಗರ ಜೊತೆ ದೇಶದ ಮೂಲೆ ಮೂಲೆಯಲ್ಲಿರೋ ಪರಭಾಷಿಗರು, ರಾಜಕಾರಣಿಗಳು, ಅಲ್ಲಿನ ಸ್ಟಾರ್‌ಗಳು, ತಂತ್ರಜ್ಞರೆಲ್ಲಾ ಕಾಂತಾರ ಅನ್ನೋ ದಂತಕಥೆಯಲ್ಲಿರೋ ಅಡಗಿರೋ ಗತ್ತು, ಗಮ್ಮತ್ತಿಗೆ ಫಿದಾ ಆಗಿದ್ದಾರೆ. ಅಂದಹಾಗೆ ಪವನ್ ಕಲ್ಯಾಣ್‌ರ ಓಜಿ ಸಿನಿಮಾ ಕಾಂತಾರಗೂ ಮೊದಲೇ ರಿಲೀಸ್ ಆಗಿತ್ತು. ಆದ್ರೆ ಅದೇ ನಮ್ಮ ಕಾಂತಾರಗೆ ಟಫ್ ಕಾಂಪಿಟೇಟರ್ ಎನ್ನಲಾಗಿತ್ತು. ಆದ್ರೀಗ 300 ಕೋಟಿ ಗಳಿಸುವಲ್ಲಿ ಸುಸ್ತಾಗಿದೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ರ ಓಜಿ. 500 ಕೋಟಿ ಕಲೆಕ್ಷನ್ ಮೂಲಕ ಓಜಿ ರೆಕಾರ್ಡ್‌ನ ಹಿಂದಿಕ್ಕಿದೆ ನಮ್ಮ ಕನ್ನಡದ ಮಾಸ್ಟರ್‌ಪೀಸ್ ಕಾಂತಾರ.
ಬ್ರಹ್ಮಕಲಶ ದೃಶ್ಯ ವೈಭವ.. ಗ್ಯಾರಂಟಿಯಲ್ಲಿ ವಿದೇಶಿ ಸಿಂಗರ್..!
ಕನ್ನಡಕ್ಕೆ ಬಂದ ಕೆನಡಾ ಗಾಯಕ.. ಅಬ್ಬಿ ಎಕ್ಸ್‌ಕ್ಲೂಸಿವ್ ಟಾಕ್
ಇದು ಕಾಂತಾರ ಚಿತ್ರದ ಬ್ರಹ್ಮ ಕಲಶ ಗೀತೆ. ಸಿನಿಮಾ ರಿಲೀಸ್ ಆದ ಒಂದೇ ವಾರಕ್ಕೆ ಈ ಹಾಡನ್ನ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದೆ ಹೊಂಬಾಳೆ ಫಿಲಂಸ್. ಅಂದಹಾಗೆ ಈ ಹಿಂದಿನ ಕಾಂತಾರ ಚಿತ್ರಕ್ಕೆ ವರಾಹ ರೂಪಂ ಸಾಂಗ್ ಹೇಗೋ.. ಈ ಬಾರಿಯ ಕಾಂತಾರ-1ಗೆ ಈ ಬ್ರಹ್ಮ ಕಲಶ ಹಾಗೆ. ಸಿನಿಮಾದ ಜೀವಾಳವೇ ಈ ಹಾಡು. ದೈವದ ಮೇಲಿನ ಈ ಭಕ್ತಿ ಪ್ರಧಾನ ಗೀತೆ ಎಂಥವರನ್ನ ಕೂಡ ಭಾವಪರವಶಗೊಳಿಸಲಿದೆ. ಅಷ್ಟೊಂದು ಪವರ್‌ಫುಲ್ ಆಗಿದೆ ಈ ಗೀತೆ.
ಕಾಂತಾರದಲ್ಲಿರೋ ದೇವರನ್ನ ಬಾಂಗ್ರಾ ಸಂಸ್ಥಾನಕ್ಕೆ ತಂದು ಶಿವನನ್ನ ಶಾಂತಿಗೊಳಿಸೋ ಅಂತಹ ಸಂದರ್ಭದಲ್ಲಿನ ಗೀತೆ ಇದಾಗಿದ್ದು, ಇಲ್ಲಿ ದೈವಿಕ ಅಂಶಗಳಿಗಾಗಿ ಸಂಘರ್ಷಕರಿಬ್ಬರೂ ಒಟ್ಟುಗೂಡುವ ಕಥಾನಕ ಕಾಣಸಿಗಲಿದೆ. ಶಶಿರಾಜ್ ಸಾಹಿತ್ಯದ ಈ ಹಾಡನ್ನ ಕೆನಡಾ ಮೂಲದ ಖ್ಯಾತ ಇಂಟರ್‌ನ್ಯಾಷನಲ್ ಸಿಂಗರ್ ಅಬ್ಬಿ ವಿ ಹಾಡಿದ್ದು, ಕನ್ನಡ ಬಾರದಿದ್ದರೂ ಸಹ ಕೇಳುಗರ ಕಿವಿಯನ್ನ ಇಂಪಾಗಿಸ್ತಾರೆ. ಆ ಭಾವದಿಂದ ಮನಸ್ಸು ಕೂಡ ತಂಪಾಗಿಸುತ್ತಾರೆ.
16 ನಿಮಿಷದಲ್ಲಿ 72 ರಾಗ.. ಅದರಿಂದಲೇ ಕಾಂತಾರ ಆಫರ್
ನಿರೀಕ್ಷೆಗೂ ಮೀರಿದ ಸಂಭಾವನೆ.. ಕಾಂತಾರ-2ನಲ್ಲೂ ಅಬ್ಬಿ..!
ಕೆನಡಾದ ಟೊರಾಂಟೋದಲ್ಲಿರೋ ಅಬ್ಬಿ ವಿ ಅವ್ರಿಗೆ ಇದೇ ಚೊಚ್ಚಲ ಕನ್ನಡ ಸಿನಿಮಾ. 16 ನಿಮಿಷದಲ್ಲಿ 72 ರಾಗಗಳನ್ನ ಹಾಡಿದ ವಿಡಿಯೋ ಮೂಲಕ ಅಜನೀಶ್ ಲೋಕನಾಥ್ ಕಣ್ಣಿಗೆ ಬಿದ್ದಿರೋ ಅಬ್ಬಿ, ನಿಜಕ್ಕೂ ಅತ್ಯದ್ಭುತ ಗಾಯಕ. ಕಾಂತಾರ-2 ಚಿತ್ರದಲ್ಲಿ ಕೂಡ ಹಾಡ್ತೀನಿ ಅಂದಿರೋ ಅಬ್ಬಿ ವಿ, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ ಬಗ್ಗೆ ಕೊಂಡಾಡಿದ್ದಾರೆ.
ಒಟ್ಟಾರೆ ಇಂತಹ ಅತ್ಯದ್ಭುತ ಟ್ಯಾಲೆಂಟ್‌ಗಳ ಸಮಾಗಮದಿಂದ ಆಗಿರೋ ಚಿತ್ರ ಈ ದಂತಕಥೆಗಳ ಕಾಂತಾರ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ದಾಖಲೆಗಳನ್ನ ಬರೆಯುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.