ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಗದ ಅತಂತ್ರ ಪರಿಸ್ಥಿತಿಯಲ್ಲಿ ನಟ-ರಾಜಕಾರಣಿ ಕಮಲ್ ಹಾಸನ್ ಅವರು ದಳಪತಿ ವಿಜಯ್ ಅವರ ಪರವಾಗಿ ಧ್ವನಿ ಎತ್ತಿದ್ದಾರೆ. “ಜನರ ತೀರ್ಪಿಗೆ ಗೌರವ ಸಿಗಲೇಬೇಕು” ಎಂದು ಒತ್ತಾಯಿಸಿರುವ ಕಮಲ್ ಹಾಸನ್ ಅವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ನೀಡಬೇಕು ಎಂದು ಕಮಲ್ ಹಾಸನ್ ಆಗ್ರಹಿಸಿದ್ದಾರೆ.
ಟ್ವಿಟ್ಟರ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಕಮಲ್ ಹಾಸನ್, “ತಮಿಳಗ ವೆಟ್ರಿ ಕಳಗಂ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅತಿ ದೊಡ್ಡ ಪಕ್ಷವಾಗಿರುವ ವಿಜಯ್ ಅವರನ್ನು ಸರ್ಕಾರ ರಚಿಸಲು ಕರೆಯದಿರುವುದು ಜನತೆಯ ತೀರ್ಪಿಗೆ ಮಾಡುವ ಅವಮಾನ” ಎಂದು ಕಿಡಿಕಾರಿದ್ದಾರೆ.
“ತಮಿಳುನಾಡಿನ ಇತಿಹಾಸದಲ್ಲೇ ಇಂತಹ ತೀರ್ಪು ಹಿಂದೆಂದೂ ಬಂದಿರಲಿಲ್ಲ. ನನ್ನ ಸಹೋದರ ಎಂ.ಕೆ. ಸ್ಟಾಲಿನ್ ಅವರು ಜನರ ತೀರ್ಪನ್ನು ಗೌರವಿಸುತ್ತೇವೆ ಎಂದು ಘೋಷಿಸಿದ್ದಾರೆ. ಅವರ ರಾಜಕೀಯ ಮುತ್ಸದ್ದಿತನವನ್ನು ನಾನು ಗೌರವಿಸುತ್ತೇನೆ” ಎಂದು ಕಮಲ್ ಹೇಳಿದ್ದಾರೆ.
தமிழ்நாடு சட்டமன்றத் தேர்தலில் தனித்து ஆட்சியமைக்கும் அதிகாரத்தை மக்கள் எந்தக் கட்சிக்கும் வழங்கவில்லை. இந்த முடிவு தமிழ்நாட்டு வரலாற்றில் முன்னெப்போதும் நிகழாதது.
என் சகோதரர் திரு. @mkstalin அவர்கள் ‘மக்கள் தீர்ப்பை மதிக்கிறோம்; பொறுப்பான எதிர்க்கட்சியாகச் செயல்படுவோம்’ என்று…
— Kamal Haasan (@ikamalhaasan) May 7, 2026
ಇನ್ನು ಮುಂದುವರೆದು, “ಬಹುಮತ ಎಂಬುದು ವಿಧಾನಸಭೆಯಲ್ಲಿ ಸಾಬೀತಾಗಬೇಕೇ ಹೊರತು ರಾಜ್‌ಭವನದಲ್ಲಿ ಅಲ್ಲ. ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ” ಎಂದು ಸಾಂವಿಧಾನಿಕ ಉಲ್ಲೇಖಿಸಿದ್ದಾರೆ. “ನಾನು ಒಬ್ಬ ಭಾರತೀಯ ಪ್ರಜೆಯಾಗಿ ಸಾಂವಿಧಾನಿಕ ಆಶಯದ ಧ್ವನಿಯಾಗಿ ಮಾತನಾಡುತ್ತಿದ್ದೇನೆ. ತಮಿಳುನಾಡು ಜನರ ತೀರ್ಪಿಗೆ ಸರಿಯಾದ ಗೌರವ ಸಿಗಲೇಬೇಕು” ಎಂದು ಅವರು ಆಶಿಸಿದ್ದಾರೆ.
ಪಕ್ಷ ಸ್ಥಾಪಿಸಿದ ಕೇವಲ ಎರಡು ವರ್ಷಗಳಲ್ಲಿ 108 ಸ್ಥಾನಗಳನ್ನು ಗೆದ್ದು ದೊಡ್ಡ ಸಾಧನೆ ಮಾಡಿರುವ ವಿಜಯ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದು, ಒಟ್ಟು 112 ಶಾಸಕರ ಬೆಂಬಲ ಇದೆ. ಆದರೆ ಬಹುಮತಕ್ಕೆ (118) ಇನ್ನೂ 6 ಸ್ಥಾನಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
ಕಮಲ್ ಹಾಸನ್ ಅವರ ಈ ಬೆಂಬಲವು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ದಳಪತಿ ವಿಜಯ್ ಅವರಿಗೆ ಪ್ರಮುಖ ವ್ಯಕ್ತಿಗಳ ಬೆಂಬಲ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ.





