ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯ ಸೌಂಡ್ ಮಾಡುತ್ತಿರುವ ಸಿನಿಮಾಗಳಲ್ಲಿ ‘ಚೌಕಿದಾರ್’ ಕೂಡ ಒಂದು. ರಥಾವರ ಖ್ಯಾತಿಯ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದಲ್ಲಿ ಮೂಡಿಬಂದಿರುವ ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆಯಿದೆ. ಈಗ ಈ ಕುರಿತು ಒಂದು ಬಿಗ್ ಅಪ್‌ಡೇಟ್ ಸಿಕ್ಕಿದ್ದು, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಜವರಿ 30ಕ್ಕೆ ಚೌಕಿದಾರ್
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಚೌಕಿದಾರ್ ಸಿನಿಮಾ ಜನವರಿ 30ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಧ್ರುವ ಸರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಇಡೀ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ಚಿತ್ರತಂಡಕ್ಕೆ ಆನೆ ಬಲ ತಂದಿದೆ.
ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ಮಿಂಚಿದ್ದರೆ, ರಾಜಕುಮಾರ್ ಮೊಮ್ಮಗಳು ಧನ್ಯ ರಾಮ್‌ಕುಮಾರ್ ನಾಯಕಿಯಾಗಿ ಸಾಥ್ ನೀಡಿದ್ದಾರೆ. ವಿಶೇಷವೆಂದರೆ, ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿರಿಯ ನಟ ಸಾಯಿ ಕುಮಾರ್ ಅವರು ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೊಂದಿಗೆ ಸುಧಾರಾಣಿ, ‘ಚೈತ್ರದ ಪ್ರೇಮಾಂಜಲಿ’ ಖ್ಯಾತಿಯ ಶ್ವೇತಾ, ಧರ್ಮ ಹಾಗೂ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ನಟ ಕೂಡ ತಾರಾಬಳಗದಲ್ಲಿದ್ದಾರೆ.
ತಾಂತ್ರಿಕ ತಂಡ
ಚಿತ್ರಕ್ಕೆ ಸಚಿನ್ ಬಸ್ರೂರ್ ಅವರ ಸಂಗೀತ ಹಾಗೂ ಸಿದ್ದು ಕಂಚನಹಳ್ಳಿ ಅವರ ಛಾಯಾಗ್ರಹಣವಿದ್ದು, ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಎನ್ನಲಾಗಿದೆ. ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಮತ್ತು ವಿದ್ಯಾದೇವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಸೆನ್ಸಾರ್ ಮಂಡಳಿಯು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘U/A’ ಸರ್ಟಿಫಿಕೇಟ್ ನೀಡಿದೆ.
ಭಾವನಾತ್ಮಕ ಕಥಾಹಂದರ
ಚೌಕಿದಾರ್ ಸಿನಿಮಾ ಕೇವಲ ಆಕ್ಷನ್ ಮಾತ್ರವಲ್ಲದೆ, ಅಪ್ಪ-ಮಗನ ಬಾಂಧವ್ಯ ಹಾಗೂ ಒಂದು ಸುಂದರ ಫ್ಯಾಮಿಲಿ ಡ್ರಾಮಾವನ್ನು ಒಳಗೊಂಡಿದೆ. ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ‘ರಥಾವರ’ ಬಳಿಕ ಮತ್ತೊಂದು ವಿಭಿನ್ನ ಪ್ರಯೋಗವನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಜೈ ಸುಬ್ರಹ್ಮಣ್ಯ ಅವರ ಸಾಹಸ ದೃಶ್ಯಗಳು ಚಿತ್ರಕ್ಕೆ ರೋಚಕತೆ ನೀಡಲಿವೆ. ಇನ್ನೂ ಇದೇ ತಿಂಗಳ 30 ರಂದು ಚಿತ್ರ ತೆರೆಗೆ ಬರಲಿದ್ದು ಸಿನಿ ಪ್ರೇಕ್ಷಕರು ಚಿತ್ರವನ್ನ ವೀಕ್ಷಿಸಲು ಕಾತುರದಿಂದ ಕಾದಿದ್ದಾರೆ.





