ಬಾಕ್ಸ್ ಆಫೀಸ್‌ನಲ್ಲಿ ಶತಕೋಟಿ ಕಲೆಕ್ಷನ್ ಮಾಡಿ ಇಡೀ ಸೌತ್ ಇಂಡಸ್ಟ್ರಿಯನ್ನೇ ಶೇಕ್ ಮಾಡಿದ ಆ ಮಾಸ್ ಆಕ್ಷನ್ ಸಿನಿಮಾ ಯಾವುದು..? ಗೆಲುವಿನ ತೇಲಿನಲ್ಲಿ ತೇಲುತ್ತಿರುವ ಆ ಬಿಗ್ ಪ್ರೊಡ್ಯೂಸರ್, ಚಿತ್ರದ ಮೂವರು ಟಾಪ್ ಸ್ಟಾರ್ಸ್‌ಗೆ ಕೋಟಿ ಮೌಲ್ಯದ ರಾಯಲ್ ಗಿಫ್ಟ್ ಕೊಟ್ಟು ಅಚ್ಚರಿ ಮೂಡಿಸಿದ್ದು ಯಾಕೆ..?
DC ಡ್ಯಾಶಿಂಗ್ ಕಲೆಕ್ಷನ್.. ಅನ್ನದಾತನಿಂದ 3 ರಾಯಲ್ ಕಾರ್ಸ್ ಗಿಫ್ಟ್
ಲೋಕೇಶ್-ಅರುಣ್-ಅನಿರುದ್ಧ್ ಗೆ BMW ಕಾರ್ ಗಿಫ್ಟ್..!
ಕಾರ್ ಗಿಫ್ಟ್ ಸಂಪ್ರದಾಯ ಮುಂದುವರಿಸಿದ ಸನ್ ಪಿಕ್ಚರ್ಸ್
ನೂರು ಕೋಟಿ ಸಕ್ಸಸ್ ಬೆನ್ನಲ್ಲೇ DC ಸೀಕ್ವೆಲ್‌ಗೆ ಸೈಲೆಂಟ್ ತಯಾರಿ
ಕಾಲಿವುಡ್ ಚಿತ್ರರಂಗದಲ್ಲಿ ಈಗ ಎಲ್ಲೆಲ್ಲೂ DC ಚಿತ್ರದ್ದೇ ಹವಾ. ಆಗಸ್ಟ್ 7ರಂದು ಬೆಳ್ಳಿಪರದೆಗೆ ಅಪ್ಪಳಿಸಿದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಯಾರೂ ಊಹಿಸದ ರೇಂಜ್‌ಗೆ ಧೂಳೆಬ್ಬಿಸಿ ದಾಖಲೆ ಬರೆದಿದೆ. ಸಾಲು ಸಾಲು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೆಣಗಾಡುತ್ತಿರುವ ಈ ಸಮಯದಲ್ಲಿ, ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದು ನೂರು ಕೋಟಿಗೂ ಅಧಿಕ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ನಿರ್ದೇಶಕನಾಗಿ ಮಾಸ್ ಕಲ್ಟ್ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡಿದ್ದ ಲೋಕೇಶ್ ಕನಕರಾಜ್, ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿ ಕೊಟ್ಟು ನಟನೆಯಲ್ಲೂ ಕಮಾಲ್ ಮಾಡಿದ್ದಾರೆ. ಪ್ರಸಿದ್ಧ ದೇವದಾಸ್ ಕಾದಂಬರಿ ಹಾಗೂ ಹಾಲಿವುಡ್‌ನ ಐಕಾನಿಕ್ ಜೋಡಿ ಬೋನಿ ಅಂಡ್ ಕ್ಲೈಡ್ ಶೈಲಿಯಿಂದ ಪ್ರೇರಿತವಾದ ಈ ರೋಚಕ ಕಥಾಹಂದರವನ್ನು ನಿರ್ದೇಶಕ ಅರುಣ್ ಮಾಥೇಶ್ವರನ್ ಅಷ್ಟೇ ಮಾಸ್ ಆಗಿ ತೆರೆಗೆ ತಂದಿದ್ದಾರೆ. ಇವರಿಬ್ಬರ ಕ್ರೇಜಿ ಕಾಂಬಿನೇಷನ್ ಜೊತೆಗೆ ಅನಿರುದ್ಧ್ ರವಿಚಂದರ್ ಅವರ ಮೈ ನವಿರೇಳಿಸುವ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
ಚಿತ್ರದ ಈ ಅಭೂತಪೂರ್ವ ಯಶಸ್ಸಿನಿಂದ ಬ್ಲಾಕ್‌ಬಸ್ಟರ್ ಖುಷಿಯಲ್ಲಿರುವ ಸನ್ ಪಿಕ್ಚರ್ಸ್ ಅಧಿನಾಯಕ ಕಲಾನಿಧಿ ಮಾರನ್, ತಮ್ಮ ಉದಾರತೆಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದಾರೆ. ಸಿನಿಮಾವನ್ನು ಗೆಲುವಿನ ದಂಡೆಗೆ ತಲುಪಿಸಿದ ಅಸಲಿ ರೂವಾರಿಗಳಾದ ನಟ ಲೋಕೇಶ್ ಕನಕರಾಜ್, ನಿರ್ದೇಶಕ ಅರುಣ್ ಮಾಥೇಶ್ವರನ್ ಹಾಗೂ ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಅವರನ್ನು ಖುದ್ದಾಗಿ ಭೇಟಿಯಾಗಿ ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ, ಈ ಮೂವರಿಗೂ ಬ್ರ್ಯಾಂಡ್ ನ್ಯೂ ಐಷಾರಾಮಿ BMW ಕಾರುಗಳನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಸೆನ್ಸೇಷನ್ ಸೃಷ್ಟಿಸಿದ್ದ ಜೈಲರ್ ಮತ್ತು ವಿಕ್ರಮ್ ಸಿನಿಮಾಗಳ ಗೆಲುವಿನ ವೇಳೆ ಐಷಾರಾಮಿ ಕಾರುಗಳನ್ನು ಗಿಫ್ಟ್ ನೀಡಿದ್ದ ಕಲಾನಿಧಿ ಮಾರನ್, ಈಗ DC ಬಂಪರ್ ಸಕ್ಸಸ್ ನಂತರವೂ ಅದೇ ರಾಯಲ್ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಸದ್ಯ ಸನ್ ಪಿಕ್ಚರ್ಸ್ ಹಂಚಿಕೊಂಡಿರುವ ಈ ದುಬಾರಿ ಬಿಎಂಡಬ್ಲ್ಯು ಕಾರುಗಳ ಕೀ ಹಸ್ತಾಂತರದ ಮಾಸ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ‘ತಂತ್ರಜ್ಞರಿಗೆ ಈ ರೇಂಜ್ ಗೌರವ ಸಿಗಬೇಕು’ ಅಂತ ಫ್ಯಾನ್ಸ್ ಕಮೆಂಟ್ ಬಾಕ್ಸ್‌ನಲ್ಲಿ ಹಬ್ಬ ಮಾಡುತ್ತಿದ್ದಾರೆ.
ವರದಿಗಳ ಪ್ರಕಾರ DC ಪ್ರಾಂಚೈಸಿಯ ಮುಂದಿನ ಭಾಗದ ಕೆಲಸಗಳು ಕೂಡ ಸೈಲೆಂಟ್ ಆಗಿ ಶುರುವಾಗಿದ್ದು, ಬಾಕ್ಸ್ ಆಫೀಸ್ ಧಮಾಕಾ ಇಲ್ಲಿಗೆ ಮುಗಿದಿಲ್ಲ ಎನ್ನುವ ಸುಳಿವು ಸಿಕ್ಕಿದೆ. ನೂರು ಕೋಟಿ ಕ್ಲಬ್ ಸೇರಿ ಸಿನಿರಂಗವನ್ನೇ ಬೆರಗುಗೊಳಿಸಿರುವ ಈ ಮಾಸ್ ಸಿನಿಮಾ, ಮುಂಬರುವ ದಿನಗಳಲ್ಲಿ OTT ಹಾಗೂ ಗ್ಲೋಬಲ್ ಮಾರ್ಕೆಟ್‌ನಲ್ಲಿ ಇನ್ಯಾವೆಲ್ಲಾ ಹೊಸ ದಾಖಲೆಗಳನ್ನು ಉಡಾಯಿಸಲಿದೆ ಎಂದು ಕಾದು ನೋಡಬೇಕಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





