ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ತಿರುವು ಎನ್ನಲಾಗುತ್ತಿರುವ ಆರೋಪಿ ಪ್ರದೋಶ್ ಅವರ ಮಾಫಿ ಸಾಕ್ಷಿ ಹೇಳಿಕೆಯನ್ನು ತಡೆಯಲು ನಡೆದ ಮತ್ತೊಂದು ಕಾನೂನು ಹೋರಾಟವೂ ವಿಫಲವಾಗಿದೆ. ಪ್ರದೋಶ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಪ್ರದೋಶ್ ಮಾಫಿ ಸಾಕ್ಷಿಯಾಗಿ ಪರಿವರ್ತನೆ
ರೇಣುಕಾ ಸ್ವಾಮಿ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಪರಿವರ್ತನೆಗೊಂಡಿದ್ದು, ಇತ್ತೀಚೆಗಷ್ಟೇ ನ್ಯಾಯಾಲಯದ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಪ್ರದೋಶ್ ಅವರು ಪ್ರಕರಣದ 14ನೇ ಆರೋಪಿಯಾಗಿದ್ದು, ಅಪ್ರೂವರ್ ಆಗಿ ಬದಲಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿಚಾರಣಾ ನ್ಯಾಯಾಲಯದ ಎದುರು ಪ್ರಕರಣದ ಕುರಿತಾಗಿ ತಮಗೆ ತಿಳಿದಿದ್ದ ಎಲ್ಲ ಮಾಹಿತಿಯನ್ನು ಹೇಳಿಕೆ ರೂಪದಲ್ಲಿ ದಾಖಲಿಸಿದ್ದಾರೆ.
ದರ್ಶನ್ ಸೇರಿದಂತೆ ಇತರೆ ಆರೋಪಿಗಳು ರೇಣುಕಾ ಸ್ವಾಮಿ ಮೇಲೆ ನಡೆಸಿದ ಅಮಾನುಷ ಹಲ್ಲೆ ಮತ್ತು ಸಾಕ್ಷ್ಯ ನಾಶಕ್ಕೆ ಮಾಡಿದ ಪ್ರಯತ್ನಗಳ ಇಂಚಿಂಚೂ ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದ ವಿಷಯ ದರ್ಶನ್‌ಗೆ ಮೊದಲೇ ಗೊತ್ತಿತ್ತು ಎಂಬ ಅಂಶವನ್ನು ಸಹ ಅವರು ಹೇಳಿರುವುದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿದೆ.
ವಿಜಯಲಕ್ಷ್ಮಿ ಅರ್ಜಿ ವಜಾ
ಈ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪರ ವಕೀಲರು ನಾನಾ ಪ್ರಯತ್ನಗಳನ್ನು ಮಾಡಿದ್ದು, ಎಲ್ಲವೂ ಬಹುತೇಕ ವಿಫಲವಾಗಿವೆ. ಸಾಕ್ಷಿ ಹೇಳಿಕೆ ದಾಖಲಾದ ಬಳಿಕವೂ ಸಹ ಪ್ರಯತ್ನ ನಿಂತಿಲ್ಲ. ಇತ್ತೀಚೆಗಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪ್ರದೋಶ್ ಸಾಕ್ಷಿಯನ್ನು ಪರಿಗಣಿಸದಂತೆ ಆದೇಶ ನೀಡಬೇಕೆಂದು ಒತ್ತಾಯಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಆದರೆ ಅವರ ಅರ್ಜಿ ವಜಾಗೊಂಡಿದೆ.
ಪ್ರದೋಶ್ ಸಾಕ್ಷಿ ಹೇಳಿಕೆಯನ್ನು ಪರಿಗಣಿಸಬಾರದೆಂದು ವಿಜಯಲಕ್ಷ್ಮಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ವಿಜಯಲಕ್ಷ್ಮಿ ಅವರ ಪರ ವಾದ ಮಂಡಿಸಿದ ವಕೀಲ ನಾಗಮುತ್ತು, ಹಿಂದಿನ ಕೆಲವು ಆದೇಶಗಳನ್ನು ಉಲ್ಲೇಖಿಸುತ್ತಾ ಸಾಕ್ಷಿ ಹೇಳಿಕೆಯನ್ನು ಪರಿಗಣಿಸಬಾರದು ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಇದಕ್ಕೆಲ್ಲ ಸೊಪ್ಪು ಹಾಕದೆ ಅರ್ಜಿಯನ್ನು ವಜಾ ಮಾಡಿತು. ಅರ್ಜಿಯನ್ನು ವಜಾ ಮಾಡಿದ ಆದೇಶ ನೀಡಿದ ಬಳಿಕವೂ ನಾಗಮುತ್ತು ವಾದ ಮುಂದುವರೆಸಿದ್ದರು, ಆದರೆ ನ್ಯಾಯಮೂರ್ತಿಗಳು ವಾದವನ್ನು ಆಲಿಸಲಿಲ್ಲ.
ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ
ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, “ಮೇಲ್ನೋಟಕ್ಕೆ ಮಧ್ಯ ಪ್ರವೇಶಿಸುವ ಅಂಶಗಳಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ಆ ಮೂಲಕ ಪ್ರದೋಶ್ ಸಾಕ್ಷ್ಯವನ್ನು ತಡೆಯುವ ಅಥವಾ ಪ್ರದೋಶ್ ನೀಡಿರುವ ಸಾಕ್ಷಿ ಹೇಳಿಕೆಯನ್ನು ಅಮಾನ್ಯಗೊಳಿಸುವ ದರ್ಶನ್ ಪರ ವಕೀಲರ ಕೊನೆಯ ಪ್ರಯತ್ನ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಪ್ರದೋಶ್ ಹೇಳಿಕೆಗೆ ಆಗಬಹುದಿದ್ದ ಅಡಚಣೆಗಳು ನಿವಾರಣೆಯಾದಂತಾಗಿದೆ.
ನ್ಯಾಯಾಲಯದ ಆದೇಶದ ಪ್ರಕಾರ, ಮಾಫಿ ಸಾಕ್ಷಿ ಪ್ರಶ್ನಿಸುವ ಅಧಿಕಾರ ಆರೋಪಿಗಳಿಗಿಲ್ಲ. ಆದರೆ ಕ್ರಾಸ್ ಎಕ್ಸಾಮಿನೇಷನ್ (ಅಡ್ಡ ವಿಚಾರಣೆ) ನಡೆಸುವ ಅಧಿಕಾರ ಆರೋಪಿಗಳಿಗೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಮೂಲಕ ಪ್ರದೋಶ್ ಅವರ ಹೇಳಿಕೆಯನ್ನು ಪ್ರಶ್ನಿಸಲು ದರ್ಶನ್ ಪರ ವಕೀಲರಿಗೆ ಅವಕಾಶವಿದ್ದರೂ, ಸಾಕ್ಷಿಯನ್ನು ಪರಿಗಣಿಸದಂತೆ ತಡೆಯುವ ಅಧಿಕಾರ ಇಲ್ಲ ಎಂಬುದು ಸ್ಪಷ್ಟವಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಅವರ ಮಾಫಿ ಸಾಕ್ಷಿ ಹೇಳಿಕೆಯನ್ನು ತಡೆಯಲು ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.





