ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ವಿಜಯಲಕ್ಷ್ಮಿ ನಿರಂತರವಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಪತಿ ಜೈಲಿನಿಂದ ಹೊರಬಂದು ಸಂಕಷ್ಟಗಳಿಂದ ಮುಕ್ತರಾಗಲಿ ಎಂಬ ಆಶಯದೊಂದಿಗೆ ಈಗಾಗಲೇ ಹಲವು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದ ವಿಜಯಲಕ್ಷ್ಮಿ, ಇದೀಗ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ದರ್ಗಾಕ್ಕೆ ಭೇಟಿ ನೀಡಿದ ಅವರು, ತಮ್ಮ ಕುಟುಂಬಕ್ಕೆ ಎದುರಾಗಿರುವ ಸಂಕಷ್ಟಗಳು ದೂರವಾಗಲಿ ಹಾಗೂ ದರ್ಶನ್ಗೆ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
ದರ್ಶನ್ ಜೈಲು ಸೇರಿದ ದಿನಗಳಿಂದಲೂ ವಿಜಯಲಕ್ಷ್ಮಿ ಪತಿಯ ಬಿಡುಗಡೆಗಾಗಿ ಪ್ರಯತ್ನಿಸುತ್ತಿದ್ದಾರೆ. ಕಾನೂನು ಹೋರಾಟದ ಜೊತೆಗೆ ದೇವರ ಮೊರೆ ಹೋಗಿರುವ ಅವರು, ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಶಕ್ತಿದೇವತೆಗಳ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ್ ಶೀಘ್ರವಾಗಿ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿದ್ದರು. ಇದೀಗ ದರ್ಗಾಕ್ಕೂ ಭೇಟಿ ನೀಡಿರುವುದು ಗಮನ ಸೆಳೆದಿದೆ.
ದೇಗುಲಗಳ ಬಳಿಕ ದರ್ಗಾದಲ್ಲಿ ಪ್ರಾರ್ಥನೆ
ದರ್ಶನ್ ಪ್ರಕರಣದ ವಿಚಾರಣೆ ಹಾಗೂ ಜೈಲಿನಲ್ಲಿನ ಬೆಳವಣಿಗೆಗಳ ನಡುವೆ ವಿಜಯಲಕ್ಷ್ಮಿ ಹಲವು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಪತಿಯ ಸಂಕಷ್ಟ ನಿವಾರಣೆಯಾಗಬೇಕು ಎಂಬ ಉದ್ದೇಶದಿಂದ ವಿಶೇಷ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ಇದೀಗ ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ದರ್ಗಾಕ್ಕೆ ತೆರಳಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.
ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಕುಟುಂಬದ ಮೇಲಿರುವ ಸಂಕಷ್ಟಗಳು ದೂರವಾಗಬೇಕು ಹಾಗೂ ದರ್ಶನ್ಗೆ ನ್ಯಾಯ ಸಿಗಬೇಕು ಎಂಬ ಆಶಯದೊಂದಿಗೆ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿರುವ ದರ್ಶನ್ ಮತ್ತು ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಗೌಡ ನಡುವೆ ವಿಡಿಯೋ ಕಾಲ್ ಮೂಲಕ ಮಾತುಕತೆ ನಡೆದಿತ್ತು ಎನ್ನಲಾದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಬೆಳವಣಿಗೆಯ ಬಳಿಕ ವಿಜಯಲಕ್ಷ್ಮಿ ಸಾರ್ವಜನಿಕವಾಗಿ ಹೆಚ್ಚು ಪ್ರತಿಕ್ರಿಯೆ ನೀಡದೆ ಮೌನವಾಗಿದ್ದರು.
ದರ್ಶನ್ ಮತ್ತು ಪವಿತ್ರಗೌಡ ನಡುವಿನ ಮಾತುಕತೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಯಾಗಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೂ ವಿಜಯಲಕ್ಷ್ಮಿ ಪತಿಯ ಬಿಡುಗಡೆಗಾಗಿ ತಮ್ಮ ಪ್ರಯತ್ನ ಹಾಗೂ ಪ್ರಾರ್ಥನೆಗಳನ್ನು ಮುಂದುವರಿಸಿದ್ದಾರೆ.
ನಟ ಧನ್ವೀರ್ ಜೊತೆಗಿನ ವಿವಾದವೂ ಸುದ್ದಿಯಾಗಿತ್ತು
ಇನ್ನೊಂದೆಡೆ ಇತ್ತೀಚೆಗೆ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವೆ ನಡೆದಿದ್ದ ವಾಗ್ವಾದವೂ ಸುದ್ದಿಯಾಗಿತ್ತು. ಇಬ್ಬರ ನಡುವಿನ ಮಾತಿನ ಚಕಮಕಿ, ನಿಂದನೆ ಆರೋಪಗಳ ಹಿನ್ನೆಲೆಯಲ್ಲಿ ಧನ್ವೀರ್ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಧನ್ವೀರ್ಗೆ ಮಧ್ಯಂತರ ರಿಲೀಫ್ ನೀಡಿತ್ತು. ಅವರ ವಿರುದ್ಧ ದಾಖಲಾಗಿದ್ದ ಮೂರು ಪ್ರತ್ಯೇಕ ಎಫ್ಐಆರ್ಗಳ ತನಿಖೆಗೆ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಒಂದೆಡೆ ದರ್ಶನ್ ಪ್ರಕರಣದ ಕಾನೂನು ಪ್ರಕ್ರಿಯೆಗಳು ಮುಂದುವರಿದಿದ್ದರೆ, ಮತ್ತೊಂದೆಡೆ ಪತಿಯ ಬಿಡುಗಡೆಗಾಗಿ ವಿಜಯಲಕ್ಷ್ಮಿ ದೇವರ ಮೊರೆ ಹೋಗುತ್ತಿದ್ದಾರೆ.





