ಬೆಂಗಳೂರು: ಕಿರುತೆರೆ ಪ್ರೇಕ್ಷಕರು ಹಾಗೂ ಬಿಗ್ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಗ್ರ್ಯಾಂಡ್ ಟೇಕಾಫ್‌ಗೆ ಕ್ಷಣಗಣನೆ ಆರಂಭವಾಗಿದೆ. ಶೋ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಮೊದಲ ಪ್ರೋಮೋ ಬಿಡುಗಡೆಯಾಗಿದ್ದು, ಸ್ಪರ್ಧಿಗಳ ಕುರಿತಾಗಿ ಒಂದೊಂದೇ ಸುಳಿವುಗಳು ಹೊರಬೀಳುತ್ತಿವೆ. ಈ ಬಾರಿ ದೊಡ್ಮನೆಯೊಳಗೆ ಯಾರೆಲ್ಲಾ ಪ್ರವೇಶಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿರುವ ನಡುವೆಯೇ, ಮೊದಲ ಪ್ರೋಮೋದಲ್ಲಿ ಇಬ್ಬರು ಪ್ರಮುಖ ನಟಿಯರ ಎಂಟ್ರಿ ಗಮನ ಸೆಳೆದಿದೆ.
ಮೊದಲ ಪ್ರೋಮೋದ ವಿಶೇಷತೆ ಎಂದರೆ ಇಬ್ಬರು ಸ್ಪರ್ಧಿಗಳು ಒಂದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು. ಸಿನಿಮಾ ನಟಿ ಸಂಗೀತಾ ಭಟ್ ಹಾಗೂ ಕಿರುತೆರೆ ನಟಿ ಕಾವ್ಯ ಗೌಡ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಇಬ್ಬರೂ ದೊಡ್ಮನೆಗೆ ಪ್ರವೇಶಿಸಿರುವುದು ಪ್ರೇಕ್ಷಕರ ಗಮನ ಸೆಳೆದಿದೆ.
ಒಂದೇ ಧಾರಾವಾಹಿಯ ಇಬ್ಬರು ಪ್ರಮುಖ ಪಾತ್ರಧಾರಿಗಳು
ಸಂಗೀತಾ ಭಟ್ ಹಾಗೂ ಕಾವ್ಯ ಗೌಡ ಅವರ ಬಿಗ್ ಬಾಸ್ ಎಂಟ್ರಿಗೆ ಮತ್ತೊಂದು ವಿಶೇಷ ಹಿನ್ನೆಲೆಯೂ ಇದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಸುದರ್ಶನ್ ರಂಗಪ್ರಸಾದ್ ಅವರು ‘ತಾಂಡವ್’ ಪಾತ್ರದಲ್ಲಿ ನಟಿಸಿದ್ದರು. ಇದೇ ಧಾರಾವಾಹಿಯಲ್ಲಿ ಕಾವ್ಯ ಗೌಡ ಅವರು ‘ಶ್ರೇಷ್ಠಾ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಧಾರಾವಾಹಿ ಮುಕ್ತಾಯಗೊಂಡ ಬಳಿಕ ಸುದರ್ಶನ್ ರಂಗಪ್ರಸಾದ್ ಅವರ ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ದೊಡ್ಡ ಘೋಷಣೆ ಹೊರಬಂದಿರಲಿಲ್ಲ. ಇದೀಗ ಅವರು ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಆದರೆ ಸುದರ್ಶನ್ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿಲ್ಲ. ಬದಲಿಗೆ ಅವರ ಪತ್ನಿ ಸಂಗೀತಾ ಭಟ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಪತ್ನಿಗೆ ಸುದರ್ಶನ್ ಕಿವಿಮಾತು!
ಬಿಗ್ ಬಾಸ್ ವೇದಿಕೆಯಲ್ಲಿ ಸಂಗೀತಾ ಭಟ್ ಮತ್ತು ಕಾವ್ಯ ಗೌಡ ಒಟ್ಟಿಗೆ ಕಾಣಿಸಿಕೊಂಡಾಗ ಸುದರ್ಶನ್ ರಂಗಪ್ರಸಾದ್ ಸಖತ್ ಕ್ವಾಟ್ಲೆ ಮಾಡಿದ್ದಾರೆ. ‘ಆನ್‌ಸ್ಕ್ರೀನ್ ವೈಫ್, ಆಫ್‌ಸ್ಕ್ರೀನ್ ವೈಫ್ ಇಬ್ಬರೂ ಕಿತ್ತಾಡಿದ್ರೆ ಎಲ್ಲಿಗೆ ಸರ್ ಹೋಗಲಿ?’ ಎಂದು ಕಿಚ್ಚ ಸುದೀಪ್ ಅವರ ಮುಂದೆ ತಮಾಷೆಯಾಗಿ ಹೇಳಿ ಎಲ್ಲರನ್ನೂ ನಗಿಸಿದ್ದಾರೆ.
ಸುದರ್ಶನ್ ಅವರ ಮಾತಿಗೆ ಕಿಚ್ಚ ಸುದೀಪ್ ಸೇರಿದಂತೆ ವೇದಿಕೆಯಲ್ಲಿದ್ದವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ. ಕೊನೆಯಲ್ಲಿ ಪತ್ನಿ ಸಂಗೀತಾ ಭಟ್‌ಗೆ ‘ನೀನು ಸ್ವಲ್ಪ ಹುಷಾರಾಗಿರು’ ಎಂಬ ರೀತಿಯಲ್ಲಿ ಸುದರ್ಶನ್ ಕಿವಿಮಾತು ಹೇಳಿದ್ದಾರೆ. ಈ ಪ್ರೋಮೋ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೂ ಮುನ್ನವೇ ಫಸ್ಟ್ ಪ್ರೋಮೋ ಭರ್ಜರಿ ಸದ್ದು ಮಾಡುತ್ತಿದೆ. ದೊಡ್ಮನೆಯಲ್ಲಿ ಈ ಬಾರಿ ಯಾವೆಲ್ಲಾ ತಿರುವುಗಳು ಎದುರಾಗಲಿವೆ, ಯಾರೆಲ್ಲಾ ಸ್ಪರ್ಧಿಗಳು ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.





