ಆ್ಯಕ್ಟರ್ ಡಾಲಿ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಸತಿ-ಪತಿಗಳಾದ ವಿಷಯ ನಿಮಗೆಲ್ಲಾ ಗೊತ್ತೇಯಿದೆ. ಅವ್ರ ಕಲ್ಯಾಣಕ್ಕೆ ಮುದ್ದಾಗ ಮಗು ಕೂಡ ಸಾಕ್ಷಿಯಾಗಿದ್ದು, ಈಗ ಆ ಧನ-ಧನ್ಯಾ ಕಲ್ಯಾಣ ಸಿನಿಮಾ ರೂಪ ಪಡೆದುಕೊಂಡಿದೆ. ಈ ವಿಷಯ ಕೇಳಿ ಡಾಲಿ ಫ್ಯಾನ್ಸ್ ಸಖತ್ ದಿಲ್ಖುಷ್ ಆಗಿದ್ದು.. ಅದು ಯಾವಾಗ ರಿಲೀಸ್..? ಥಿಯೇಟರ್ಗೆ ಬರುತ್ತಾ ಹೇಗೆ ಎತ್ತ ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
- ಧನ-ಧನ್ಯಾ ಕಲ್ಯಾಣಕ್ಕೆ ಸಿನಿಮಾ ರೂಪ.. ಡಾಲಿ ಫ್ಯಾನ್ಸ್ ಖುಷ್
- ಸಿನಿಮಾ ಪ್ರೀತಿ.. ಟೀಕೆ-ಟಿಪ್ಪಣಿಗಳ ಹೊರತಾಗಿ ವೆಡ್ಡಿಂಗ್ ಫಿಲ್ಮ್
- ಆ್ಯಕ್ಟರ್-ಡಾಕ್ಟರ್ ಸತಿ-ಪತಿಗಳಾದ ಅವಿಸ್ಮರಣೀಯ ಕ್ಷಣಗಳು
- ಎಂಗೇಜ್ಮೆಂಟ್ನಿಂದ ಮಗು ತನಕ.. ಆದ್ರೆ ಥಿಯೇಟರ್ಗಿಲ್ಲ ಸಿನ್ಮಾ
ಕಳೆದ ವರ್ಷ.. ಅಂದ್ರೆ 2025ರ ಫೆಬ್ರವರಿ 15 ಹಾಗೂ 16ರಂದು ಆ್ಯಕ್ಟರ್ ಡಾಲಿ ಧನಂಜಯ ಡಾಕ್ಟರ್ ಧನ್ಯತಾ ಅವರ ಕೈ ಹಿಡಿಯೋ ಮೂಲಕ ಸತಿ-ಪತಿಯಾಗಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಹೌದು.. ಮೈಸೂರಿನಲ್ಲಿ ಇವರ ವಿವಾಹ ಮಹೋತ್ಸವ ಬಹಳ ಅದ್ಧೂರಿ, ವೈಭವೋಪೇತವಾಗಿ ಹಾಗೂ ಶಾಸ್ತ್ರೋಕ್ತವಾಗಿ ನಡೆದಿತ್ತು. ಅದಕ್ಕೆ ಚಿತ್ರರಂಗ, ರಾಜಕೀಯ ರಂಗದ ಗಣ್ಯರು ಹಾಗೂ ಅಪಾರ ಅಭಿಮಾನಿ ಬಳಗ ಕೂಡ ಸಾಕ್ಷಿಯಾಗಿತ್ತು. ಡಾಲಿ-ಧನ್ಯತಾ ಕಲ್ಯಾಣಕ್ಕೆ ಎರೆಯ ಅನ್ನೋ ಮುದ್ದಾಗ ಗಂಡು ಮಗು ಕೂಡ ಸಾಕ್ಷಿಯಾಗಿದೆ.
ಇದೆಲ್ಲಾ ಮುಗಿದು ಹೋದ ಅಧ್ಯಾಯವಲ್ಲವೇ..? ಈಗ್ಯಾಕೆ ಆಗೋಗಿರೋ ಮದ್ವೆಗೆ ಮೇಳ ಅಂತ ಗೊಣಗಿಕೊಳ್ಳಬೇಡಿ. ಯಾಕಂದ್ರೆ ಆ ಸುಂದರ, ಅವಿಸ್ಮರಣೀಯ ಕ್ಷಣಗಳು ಈಗ ಸಿನಿಮಾ ರೂಪ ಪಡೆದಿದೆ. ಯೆಸ್.. ಧನ-ಧನ್ಯಾ ಕಲ್ಯಾಣ ಹೆಸರಲ್ಲಿ ಆ ಸಿನಿಮಾ ರಿಲೀಸ್ಗೂ ಸಜ್ಜಾಗಿದೆ. ಅರೇ.. ಥಿಯೇಟರ್ಗೆ ಬರುತ್ತಾ ಇದು..? ಯಾವಾಗ..? ಎಷ್ಟು ಗಂಟೆ ಇದೆ ಅನ್ನೋ ನಿಮ್ಮ ಕ್ಯೂರಿಯಾಸಿಟಿ ಸಹಜವೇ. ಆದ್ರೆ ಬೇಸರ ಏನಪ್ಪಾ ಅಂದ್ರೆ ಈ ಸಿನ್ಮಾ ಚಿತ್ರಮಂದಿರಕ್ಕೆ ಬರ್ತಿಲ್ಲ. ಬದಲಿಗೆ ನೇರವಾಗಿ ಡಾಲಿ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗ್ತಿದೆ.
ಅಕ್ಷಯ್ ಎನ್ ರಾವ್ ನಿರ್ದೇಶಿಸಿ, ಎಡಿಟ್ ಕೂಡ ಮಾಡಿರೋ ಈ ಡಾಕ್ಯುಮೆಂಟರಿಯನ್ನ ಸಿನಿಮಾ ರೂಪದಲ್ಲಿ ಮೊದಲ ವೆಡ್ಡಿಂಗ್ ಆ್ಯನಿವರ್ಸರಿಗೆ ಡಾಲಿ-ಧನ್ಯತಾಗೆ ಗಿಫ್ಟ್ ಮಾಡ್ತೀವಿ ಅಂದರಂತೆ. ಆಗ ಮದ್ವೆ ಸಮಯದಲ್ಲಿ ಬಂದಂತಹ ಟೀಕೆ, ಟಿಪ್ಪಣಿಗಳನ್ನೆಲ್ಲಾ ಯೋಚಿಸಿ ಬೇಡ ಅಂದಿದ್ರಂತೆ ಡಾಲಿ. ಆದ್ರೆ ಒಬ್ಬ ಸಿನಿಮಾ ಲವರ್ ಆಗಿದ್ದುಕೊಂಡು ಅವರ ಕ್ರಿಯೇಟಿವಿಟಿಯನ್ನ ಕೊಲ್ಲುವುದು ಸರಿಯಲ್ಲ ಅಂತ ಕೊನೆಗೆ ಸಿನಿಮಾ ಮಾಡಿ ರಿಲೀಸ್ ಮಾಡೋಕೆ ಓಕೆ ಅಂದಿದ್ದಾರೆ.
ಇದರಲ್ಲಿ ಡಾಲಿಯ ಎಂಗೇಜ್ಮೆಂಟ್ನಿಂದ ಹಿಡಿದು, ಮದ್ವೆ, ರಿಸೆಪ್ಷನ್, ಗೆಸ್ಟ್ಗಳು, ಫ್ಯಾನ್ಸ್ ಎಲ್ಲವೂ ಅಡಗಿದೆ. ಅವರಿಗೆ ಎರೆಯ ಅನ್ನೋ ಮುದ್ದಾದ ಗಂಡು ಮಗು ಜನಿಸುವವರೆಗೆ ಎಲ್ಲವೂ ಅದರಲ್ಲಿ ಸೇರಿಕೊಂಡಿವೆ. ಮಿಗಿಲಾಗಿ.. ಆ್ಯಕ್ಟರ್ ಆಗಿ ಡಾಲಿಯ ಬದುಕು, ಬವಣೆ.. ಡಾಕ್ಟರ್ ಆಗಿ ಧನ್ಯತಾ ಅವ್ರ ವರ್ಕ್ ಹೇಗಿರುತ್ತೆ ಅನ್ನೋದು ಕೂಡ ಈ ಧನ-ಧನ್ಯ ಕಲ್ಯಾಣದಲ್ಲಿ ತೋರಿಸಲಾಗಿದೆ. ಇನ್ವಿಟೇಷನ್ಗಳನ್ನ ಹಂಚುವುದರಿಂದ ಹಿಡಿದು, ಡಾಲಿಯ ಬಣ್ಣ, ಧನ್ಯತಾ ಆಸ್ಪತ್ರೆ.. ಎಲ್ಲವೂ ಸಂಥಿಂಗ್ ಸ್ಪೆಷಲ್ ಆಗಿರಲಿವೆ. ಅದ್ರ ಟ್ರೈಲರ್ ಕೂಡ ರಿಲೀಸ್ ಆಗಿದ್ದು.. ಸಿನಿಮಾ ಇದೇ ನವೆಂಬರ್ 6ರಂದು ಡಾಲಿ ಪಿಚ್ಚರ್ಸ್ ಯೂಟ್ಯೂಬ್ಗೆ ಲಗ್ಗೆ ಇಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





