ಉಪೇಂದ್ರ-ಪ್ರಿಯಾಂಕಾ ಮಗ ಆಯುಷ್ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡೋಕೆ ಹೋಗಿದ್ದ ಮೊದಲಾಸಲ ಡೈರೆಕ್ಟರ್ ಪುರುಷೋತ್ತಮ್ಗೆ.. 40 ಪರ್ಸೆಂಟ್ ಶೂಟಿಂಗ್ ಆದ್ಮೇಲೆ ಗೇಟ್ಪಾಸ್ ನೀಡಲಾಗಿತ್ತು. ಈ ಬಗ್ಗೆ ನ್ಯಾಯಕ್ಕಾಗಿ ಗ್ಯಾರಂಟಿ ನ್ಯೂಸ್ ಮೆಟ್ಟಿಲೇರಿದ್ದ ಬಡಪಾಯಿ ಡೈರೆಕ್ಟರ್ಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ಸ್ವತಃ ಫಿಲ್ಮ್ ಚೇಂಬರ್ ಅವ್ರನ್ನ ಕರೆಸಿ ಸಂಧಾನ ಮಾಡಿಸಿದೆ. ಆದ್ರೆ ಪುರುಷೋತ್ತಮ್ಗೆ ಸಿಕ್ಕ ಸಂಭಾವನೆ ಎಷ್ಟು..? ಕಥೆಗೆ NOC ಕೊಟ್ರಾ..? ಬಲವಂತವಾಗಿ ಕ್ಷಮೆ ಕೇಳಿಸಿದ್ರಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ನೋಡಿ.
- ಗ್ಯಾರಂಟಿ ನ್ಯೂಸ್ ಇಂಪ್ಯಾಕ್ಟ್.. ಡೈರೆಕ್ಟರ್ಗೆ ಕೊನೆಗೂ ಸಿಕ್ತು ನ್ಯಾಯ
- 2 ಲಕ್ಷ ಅಡ್ವಾನ್ಸ್ ಬಿಟ್ಟು 8 ಲಕ್ಷಕ್ಕೆ ಸೆಟಲ್ಮೆಂಟ್.. ಸದ್ಯಕ್ಕೆ 5 ಲಕ್ಷ ಚೆಕ್
- ತಪ್ಪು ಮಾಡಿದವ್ರಿಗೆ ಮೋಸ ಹೋದವ್ರಿಂದಲೇ ಬಲವಂತದ ಕ್ಷಮೆ..?!
- ಅನ್ಯಾಯ ಪ್ರಶ್ನಿಸಿದ ಗ್ಯಾರಂಟಿ ನ್ಯೂಸ್ಗೆ ಪುರುಷೋತ್ತಮ್ ಧನ್ಯವಾದ
ಇಂಡಿಯಾದ ಟಾಫ್ ಡೈರೆಕ್ಟರ್ಗಳಲ್ಲಿ ಒಬ್ಬರಾದ.. ಸ್ಯಾಂಡಲ್ವುಡ್ನ ಆಲ್ ಟೈಂ ಬುದ್ಧಿವಂತ, ಡಿಫರೆಂಟ್ಗೆ ಕೇರ್ ಆಫ್ ಅಡ್ರೆಸ್.. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್.. ಪರಭಾಷಾ ಸೂಪರ್ ಸ್ಟಾರ್ಗಳ ಅಚ್ಚುಮೆಚ್ಚಿನ ನಟ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಮಗ ಆಯುಷ್ ಇಂಡಸ್ಟ್ರಿಗೆ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಯಶ್ಗೆ ಮೊದಲಾಸಲ ಸಿನಿಮಾ ಡೈರೆಕ್ಟ್ ಮಾಡಿದ್ದ ಮೈಸೂರಿನ ಪುರುಷೋತ್ತಮ್ ಈ ಚಿತ್ರಕ್ಕೆ ಕಥೆ ಬರೆದು, ಆ್ಯಕ್ಷನ್ ಕಟ್ ಕೂಡ ಹೇಳ್ತಿದ್ರು. ತಾರಾ ಪತಿ, ಖ್ಯಾತ ಸಿನಿಮಾಟೋಗ್ರಾಫರ್ ವೇಣು ಆ ಚಿತ್ರದ ಸಿನಿಮಾಟೋಗ್ರಾಫರ್ ಆಗಿದ್ರು.
ಕಾಶ್ಮೀರದಲ್ಲಿ ಸುಮಾರು 40 ಪರ್ಸೆಂಟ್ ಶೂಟಿಂಗ್ ಮುಗಿದ ಬಳಿಕ ಡೈರೆಕ್ಟರ್ ಪುರುಷೋತ್ತಮ್ ಹಾಗೂ ಕ್ಯಾಮೆರಾಮ್ಯಾನ್ ವೇಣು ಅವ್ರನ್ನ ಚಿತ್ರದಿಂದ ಕೈಬಿಡಲಾಯ್ತು. ಪ್ರಿಯಾಂಕಾ ಉಪೇಂದ್ರ ಅವರೇ ಆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾದ್ರು. ಆ ಮೂಲಕ ಡೈರೆಕ್ಟರ್ ಕ್ಯಾಪ್ ಕೂಡ ತೊಟ್ಟು, ಪತಿ ರೀತಿ ತಾವೂ ಡೈರೆಕ್ಟರ್ ಪಟ್ಟಕ್ಕೇರಿದ್ರು. ಆದ್ರೆ ಡೈರೆಕ್ಟರ್ ಅನ್ನೋ ಕ್ರೆಡಿಟ್ ಆಗಲಿ ಅಥ್ವಾ ಮಾಡಿದ ಕೆಲಸಕ್ಕೆ ತಕ್ಕ ಸಂಭಾವನೆ ಆಗಲಿ ಯಾವುದೂ ಇಲ್ಲದೆ ಬೀದಿಗೆ ಬಿದ್ದ ಡೈರೆಕ್ಟರ್ ಪುರುಷೋತ್ತಮ್ ನ್ಯಾಯಕ್ಕಾಗಿ ನಮ್ಮ ಗ್ಯಾರಂಟಿ ನ್ಯೂಸ್ ಕಚೇರಿಗೆ ಆಗಮಿಸಿ, ತಮ್ಮ ಅಳಲು ತೋಡಿಕೊಂಡಿದ್ರು.
ತಮ್ಮ ಕೈಗೂ ಸಿಗದ, ಕರೆಗೂ ಸಿಗದ ಪ್ರಿಯಾಂಕಾ ಉಪೆಂದ್ರ ಹಾಗೂ ಉಪೇಂದ್ರ ಅವರು ನನ್ನ ಗಮನಕ್ಕೆ ಇಲ್ಲದೆ ಶೂಟಿಂಗ್ ಮಾಡಿಕೊಳ್ತಿದ್ದಾರೆ. ನನಗೆ ಸಂಭಾವನೆಯೂ ಕೊಟ್ಟಿಲ್ಲ. ನನ್ನ ಕತೆಗೆ ಲಿಂಕ್ ಇಲ್ಲ ಅನ್ನೋ NOCಯೂ ಇಲ್ಲ. ನನ್ನ ಭವಿಷ್ಯದ ಸಿನಿಮಾ ಕರಿಯರ್ ಹೇಗೆ ಅಂತೆಲ್ಲಾ ನೋವನ್ನು ಹೊರಹಾಕಿದ್ರು. ಆದ್ರೆ ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ, ರಾಕ್ಲೈನ್ ವೆಂಕಟೇಶ್, ಸಾರಾ ಗೋವಿಂದು, ಬಾಮಾ ಹರೀಶ್, ಸುಂದರ್ ರಾಜ್ ಸೇರಿದಂತೆ ಸಾಕಷ್ಟು ಮಂದಿ ಹಿರಿಯರು ಪ್ರಿಯಾಂಕಾ ಉಪೇಂದ್ರ, ಪುರುಷೋತ್ತಮ್ ಹಾಗೂ ಚಿತ್ರದ ನಿರ್ಮಾಪಕರನ್ನ ಚೇಂಬರ್ಗೆ ಕರೆಸಿ ರಾಜಿ ಪಂಚಾಯ್ತಿ ಮಾಡಿದ್ದಾರೆ.
ಅಲ್ಲಿ ಈಗಾಗಲೇ ಡೈರೆಕ್ಟರ್ ಪುರುಷೋತ್ತಮ್ಗೆ ನೀಡಲಾಗಿದ್ದ 2 ಲಕ್ಷ ಅಡ್ವಾನ್ಸ್ ಬಿಟ್ಟು, 8 ಲಕ್ಷ ಹಣವನ್ನ ನಿರ್ಮಾಪಕರು ಡೈರೆಕ್ಟರ್ಗೆ ನೀಡಬೇಕು ಅಂತ ತೀರ್ಮಾನಿಸಲಾಗಿದೆ. ಆ ಪೈಕಿ 5 ಲಕ್ಷದ ಚೆಕ್ ಈಗ ನೀಡುವುದಾಗಿ ಹೇಳಿ ಉಳಿದ 3 ಲಕ್ಷ ಹಣದ ಚೆಕ್ನ ಸಿನಿಮಾ ರಿಲೀಸ್ ಆದ ಮೂರು ದಿನದಲ್ಲಿ ನೀಡಲು, ಆ ಮೂರು ಲಕ್ಷ ಚೆಕ್ನ ಚೇಂಬರ್ನಲ್ಲೇ ಇಟ್ಟುಕೊಳ್ಳೋದಾಗಿ ನಿರ್ಣಯಿಸಲಾಗಿದೆ. ಇದೆಲ್ಲವೂ ಓಕೆ.. ಆದ್ರೆ ಬಲವಂತವಾಗಿ ಆ ಅಸಹಾಯಕ ನಿರ್ದೇಶಕ ಬಾಯಲ್ಲಿ ಪ್ರಿಯಾಂಕಾ ಉಪೇಂದ್ರಗೆ ಕ್ಷಮೆ ಕೇಳಿಸಿರೋದು ಬೇಸರದ ವಿಷಯ.
ಡೈರೆಕ್ಟರ್ ಪಟ್ಟ ಹೇಗೋ ಹೋಯ್ತು.. ಇತ್ತ ಮಾಡಿದ ಕಷ್ಟಕ್ಕೆ ತಕ್ಕ ಪ್ರತಿಫಲವಾಗಿ 8 ಲಕ್ಷ ಸಿಗ್ತಿರೋದು ಪುರುಷೋತ್ತಮ್ ಅವರ ಪುಣ್ಯ. ಸ್ಟಾರ್ಗಳ ಪ್ರಭಾವಳಿಗೆ ಹೀಗೆ ಬಡಪಾಯಿ ಡೈರೆಕ್ಟರ್ಗಳು ಅಸಹಾಯಕರಾಗಿ ಚೇಂಬರ್ ಮೆಟ್ಟಿಲೇರಿದಾಗ, ಅವರಿಗೆ ತಕ್ಕ ನ್ಯಾಯ ಒದಗಿಸುವುದು ಮಾತೃಸಂಸ್ಥೆಯಾದ ಫಿಲ್ಮ್ ಚೇಂಬರ್ ಕರ್ತವ್ಯ. ಆದ್ರೆ ಇಲ್ಲಿ ಪುರುಷೋತ್ತಮ್ ಅವರಿಗೆ ನಿಜಕ್ಕೂ ನ್ಯಾಯ ಸಿಕ್ತಾ..? ನೋ ಅಂತಲೇ ಹೇಳಬಹುದು. ಇದು ಭಾಗಶಃ ನ್ಯಾಯವಷ್ಟೇ. ಅಲ್ಲದೆ.. ಕಥೆ ವಿಚಾರಕ್ಕೂ ತಲೆ ಹಾಕಬಾರದು ಅಂತ ಕಥೆಗಾರನಾದ ಪುರುಷೋತ್ತಮ್ರಿಂದ NOCಗೆ ಸಹಿ ಪಡೆಯುತ್ತಿದ್ದಾರಂತೆ.
ನ್ಯಾಯಕ್ಕಾಗಿ ಗ್ಯಾರಂಟಿ ನ್ಯೂಸ್ ಮೆಟ್ಟಿಲೇರಿದ್ದ ಪುರುಷೋತ್ತಮ್.. ಅವರಿಗೆ ಆದ ಅನ್ಯಾಯದ ಪರ ಧ್ವನಿ ಎತ್ತಿದ ಗ್ಯಾರಂಟಿ ನ್ಯೂಸ್ ಸುದ್ದಿ ವಾಹಿನಿಗೆ ಧನ್ಯವಾದ ತಿಳಿಸಿದ್ದಾರೆ. ಇವರಂತೆ ದರ್ಶನ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಹಿರಿಯ ನಿರ್ದೇಶಕ ನಾಗಣ್ಣಗೂ ಕೂಡ ಕರ್ಣಾಟ ಬಲಂ ಚಿತ್ರದಿಂದ ನಿರ್ಮಾಪಕರು ಗೇಟ್ಪಾಸ್ ನೀಡಿದ್ದಾರೆ ಎನ್ನಲಾಗ್ತಿದೆ. ಇಂತಹ ಅರಾಜಕತೆಗಳು ನಿಲ್ಲೋದು ಯಾವಾಗ..? ಇವರನ್ನ ಪ್ರಶ್ನಿಸುವವರು ಅಥ್ವಾ ಮಾಡಿದ ಅನಾಚಾರಗಳನ್ನ ಹತ್ತಿಕ್ಕುವವರು ಯಾರೂ ಇಲ್ಲದೇ ಇರೋದು ದುರಂತವೇ ಸರಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





