ದೇಶಾದ್ಯಂತ ಇಂದು ಬ್ಯಾಂಕ್ ಗ್ರಾಹಕರಿಗೆ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಾರಕ್ಕೆ ಐದು ದಿನಗಳ ಕೆಲಸದ ಪದ್ಧತಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ಯೂನಿಯನ್‌ಗಳು ಇಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇದರ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿಯೂ ಬ್ಯಾಂಕ್ ಶಾಖೆಗಳ ಕಾರ್ಯನಿರ್ವಹಣೆಗೆ ಅಡಚಣೆ ಉಂಟಾಗಲಿದೆ.
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಈ ಮುಷ್ಕರ ನಡೆಯಲಿದೆ. ಬ್ಯಾಂಕ್ ಸಿಬ್ಬಂದಿಯ ಹಲವು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈಡೇರಿಸಬೇಕು ಎಂದು ಯೂನಿಯನ್‌ಗಳು ಒತ್ತಾಯಿಸಿವೆ. ಪ್ರಮುಖವಾಗಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರಬೇಕು, ಪಿಂಚಣಿ ಸಂಬಂಧಿತ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಹಾಗೂ ಕೆಲಸದ ಸಾಮರ್ಥ್ಯ ಆಧರಿತ ಪ್ರೋತ್ಸಾಹ ಯೋಜನೆಗಳನ್ನು ಜಾರಿಗೊಳಿಸಬೇಕು ಎಂಬುದು ಯೂನಿಯನ್‌ಗಳ ಪ್ರಮುಖ ಬೇಡಿಕೆಗಳಾಗಿವೆ.
ನಾಲ್ಕು ದಿನ ಬ್ಯಾಂಕ್ ಸೇವೆಗಳಿಗೆ ವ್ಯತ್ಯಯ ಏಕೆ?
ಶುಕ್ರವಾರದ ಬ್ಯಾಂಕ್ ಮುಷ್ಕರದ ಬಳಿಕ ಸೆಪ್ಟೆಂಬರ್ 12ರಂದು ಎರಡನೇ ಶನಿವಾರ ಇರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ನಂತರ ಸೆಪ್ಟೆಂಬರ್ 13ರಂದು ಭಾನುವಾರವಾಗಿದ್ದು, ಅಂದು ಸಹ ಬ್ಯಾಂಕ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಾದ ಬಳಿಕ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ರಜೆ ಇರುವುದರಿಂದ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್ ಶಾಖೆಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಶುಕ್ರವಾರದಿಂದ ಸೋಮವಾರದವರೆಗೆ ಬ್ಯಾಂಕ್ ಶಾಖೆಗಳಿಗೆ ತೆರಳಿ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಗ್ರಾಹಕರು ಹಣ ಠೇವಣಿ, ಚೆಕ್ ಕ್ಲಿಯರೆನ್ಸ್, ಬ್ಯಾಂಕ್ ಖಾತೆ ಸಂಬಂಧಿತ ಕೆಲಸಗಳು ಸೇರಿದಂತೆ ಶಾಖೆ ಆಧಾರಿತ ಹಲವು ಸೇವೆಗಳಿಗೆ ತೊಂದರೆ ಎದುರಿಸಬೇಕಾಗಬಹುದು.
ಆದರೆ ಎಟಿಎಂ, ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ಸಾಮಾನ್ಯವಾಗಿ ಲಭ್ಯವಿರುವ ಸಾಧ್ಯತೆ ಇದೆ. ಆದರೂ ಚೆಕ್ ಕ್ಲಿಯರೆನ್ಸ್ ಹಾಗೂ ಶಾಖೆಯಲ್ಲಿ ನಡೆಯುವ ಕೆಲವು ಸೇವೆಗಳು ಮುಷ್ಕರ ಮತ್ತು ಸತತ ರಜೆಗಳಿಂದ ವಿಳಂಬವಾಗಬಹುದು.
ಬ್ಯಾಂಕ್ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಮುಷ್ಕರ ಕೈಗೊಳ್ಳಲಾಗಿದೆ. ಹೀಗಾಗಿ ಬ್ಯಾಂಕ್ ಗ್ರಾಹಕರು ಅಗತ್ಯವಿರುವ ಶಾಖಾ ವಹಿವಾಟುಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸಿಕೊಳ್ಳುವುದು ಅಥವಾ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ.





