‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಈ ವಾರ ಭಾರಿ ತಿರುವು ಪಡೆದುಕೊಂಡಿದ್ದು, ನಿರಂತರ ಹೋರಾಟ, ತಾಳ್ಮೆ ಮತ್ತು ಆಟದ ಚಾಣಾಕ್ಷತನದಿಂದ ರಾಶಿಕಾ ಶೆಟ್ಟಿ (Rashika Shetty) ಕ್ಯಾಪ್ಟನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರಂಭದಿಂದಲೂ ಟಾಸ್ಕ್‌ಗಳಲ್ಲಿ ಹುಡುಗರಿಗೂ ಸಮಾನವಾಗಿ ಪೈಪೋಟಿ ನೀಡುತ್ತಾ ಬಂದಿದ್ದ ರಾಶಿಕಾ, ಹಲವು ಬಾರಿ ಕ್ಯಾಪ್ಟನ್ಸಿ ರೇಸ್‌ಗೆ ಹತ್ತಿರ ಬಂದಿದ್ದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪಿತ್ತು. ಆದರೆ ಈ ವಾರ ಅವರ ಅದೃಷ್ಟವೂ, ಶ್ರಮವೂ ಕೈ ಹಿಡಿದಿದೆ.
ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಬಂದಾಗಲೆಲ್ಲಾ ರಾಶಿಕಾ ತಮ್ಮ ಆಕ್ರಮಣಕಾರಿ ಆಟದಿಂದ ಸೆಳೆದಿದ್ದರು. ದೈಹಿಕವಾಗಿಯೂ, ಮಾನಸಿಕವಾಗಿಯೂ ಕಠಿಣವಾಗಿದ್ದ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ಗಳಲ್ಲಿ ರಾಶಿಕಾ ತೋರಿದ ಪರ್ಫಾರ್ಮೆನ್ಸ್ ಮನೆಮಂದಿಯ ಮೆಚ್ಚುಗೆಗೆ ಪಾತ್ರವಾಯಿತು. ಪ್ರತಿಯೊಂದು ಸುತ್ತಿನಲ್ಲೂ ಗಟ್ಟಿಯಾಗಿ ನಿಂತ ರಾಶಿಕಾ, ಕೊನೆಗೂ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ವಿಲನ್ ಮನೆ-ಕಠಿಣ ಟಾಸ್ಕ್‌ಗಳ ವಾರ
ಈ ವಾರ ಬಿಗ್ ಬಾಸ್ ಮನೆ ‘ವಿಲನ್ ಮನೆ’ಯಾಗಿ ಪರಿವರ್ತನೆಗೊಂಡಿತ್ತು. ಕ್ಯಾಪ್ಟನ್ಸಿ ರೇಸ್‌ಗಾಗಿ ವಿಲನ್‌ಗಳು ಸ್ಪರ್ಧಿಗಳಿಗೆ ಅತಿ ಕಠಿಣ ಹಾಗೂ ಚಾಲೆಂಜಿಂಗ್ ಟಾಸ್ಕ್‌ಗಳನ್ನು ನೀಡಿದರು. ದೈಹಿಕ ನೋವು ಮತ್ತು ತ್ಯಾಗದ ಟಾಸ್ಕ್‌ಗಳ ಮೂಲಕ ಯಾರು ಕ್ಯಾಪ್ಟನ್ ಆಗಬೇಕು ಎಂಬುದನ್ನು ನಿರ್ಧರಿಸಲಾಯಿತು.
ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟರಿಗೆ ಡೈರೆಕ್ಟ್ ಆಗಿ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿಯಾಗುವ ಅವಕಾಶ ದೊರೆಯಿತು. ರಜತ್ ಮತ್ತು ಅಶ್ವಿನಿಗೆ ನೀಡಿದ ಟಾಸ್ಕ್‌ನಲ್ಲಿ ಎರಡು ಸುತ್ತುಗಳಲ್ಲಿ ರಜತ್ ಗೆದ್ದಿದ್ದರು. ಮೊದಲ ಟಾಸ್ಕ್‌ನಲ್ಲಿ ಹೇರ್ ಕಲರ್ ಮಾಡಿಸಿಕೊಳ್ಳಬೇಕಾಗಿತ್ತು. ಈ ಟಾಸ್ಕ್‌ಗೆ ರಾಶಿಕಾ ಒಪ್ಪಿಗೆ ನೀಡಲಿಲ್ಲ. ನಂತರ ಕಾವ್ಯ ಈ ಟಾಸ್ಕ್‌ಗೆ ಒಪ್ಪಿಕೊಂಡು ಅದನ್ನು ಪೂರ್ಣಗೊಳಿಸಿದರು.
ರಜತ್ ಸಾಹಸ, ಮಾಳು ತ್ಯಾಗ
ಮುಂದಿನ ಹಂತದಲ್ಲಿ ಟ್ಯಾಟೂ ಟಾಸ್ಕ್ ನೀಡಲಾಗಿದ್ದು, ಅದನ್ನೂ ರಜತ್ ಸ್ವತಃ ಹಾಕಿಸಿಕೊಂಡು ಪಾಯಿಂಟ್ ಗಳಿಸಿದರು. ಮೂರನೇ ಬಾರಿ ಮಾಳು ತಮ್ಮ ಕೂದಲನ್ನು ಕಟ್ ಮಾಡಿಸಿಕೊಂಡು ಒಂದೇ ಸಾರಿ ಎರಡು ಪಾಯಿಂಟ್ ಗಳನ್ನು ಪಡೆದುಕೊಂಡರು.
ಕೊನೆಗೆ ರಜತ್ ಕೆಲವು ಸದಸ್ಯರನ್ನು ಆಯ್ಕೆ ಮಾಡಿ ಅಂತಿಮ ಹಂತದ ಟಾಸ್ಕ್‌ಗೆ ಕಳುಹಿಸಿದರು. ಕಾವ್ಯ, ಸೂರಜ್, ಅಶ್ವಿನಿ, ಗಿಲ್ಲಿ ಮತ್ತು ರಾಶಿಕಾ ನಡುವೆ ನಡೆದ ಬಾಲ್ ಟಾಸ್ಕ್‌ನಲ್ಲಿ ಅತ್ಯಧಿಕ ಬಾಲ್ ಸಂಗ್ರಹಿಸುವ ಮೂಲಕ ರಾಶಿಕಾ ಗೆಲುವು ಸಾಧಿಸಿದರು. ಈ ಮೂಲಕ ರಾಶಿಕಾ ಅಧಿಕೃತವಾಗಿ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದರು.
ಚೈತ್ರಾ–ಅಶ್ವಿನಿ ನಡುವೆ ವಾಗ್ವಾದ
ಟಾಸ್ಕ್ ಮುಗಿದ ಬಳಿಕ ಅಶ್ವಿನಿ ಗೌಡ ಮತ್ತು ಚೈತ್ರಾ ನಡುವೆ ಮಾತಿನ ಚಕಮಕಿ ನಡೆಯಿತು. “ಕೂತಿರುವವರು ಯಾರೂ ನನಗೆ ನಿಯಮ ಹೇಳಿಕೊಡಬಾರದು” ಎಂದು ಅಶ್ವಿನಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೈತ್ರಾ, “ರೂಲ್ಸ್ ಗೊತ್ತಿಲ್ಲದವರು ಹತ್ತು ಸಲ ಪಾಠ ಮಾಡಿಕೊಳ್ಳಲಿ, ನನಗೆ ಹೇಳುವ ಅಗತ್ಯವಿಲ್ಲ” ಎಂದು ಟಾಂಗ್ ನೀಡಿದರು.
ಈ ವೇಳೆ ರಜತ್ ಮಧ್ಯ ಪ್ರವೇಶಿಸಿ, ಇಂತಹ ಡ್ರಾಮಾಗಳಿಗೆ ಮನೆಯಲ್ಲಿ ಯಾವತ್ತೂ ಕೊರತೆ ಇಲ್ಲ ಎಂದು ವ್ಯಂಗ್ಯವಾಡಿದರು.. ಇದರಿಂದ ಮತ್ತಷ್ಟು ಗಲಾಟೆ ಉಂಟಾಗಿ, ಇಬ್ಬರೂ ಪರಸ್ಪರ ಕೂಗಾಡಿಕೊಂಡರು. ಒಟ್ಟಾರೆ, ಈ ವಾರದ ಎಪಿಸೋಡ್‌ಗಳಲ್ಲಿ ರಾಶಿಕಾ ಶೆಟ್ಟಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.





