ಮಾರುತಿ ಸುಜುಕಿ, ಭಾರತದ ಜನಪ್ರಿಯ ಕಾರು ತಯಾರಿಕಾ ಕಂಪನಿ, ತನ್ನ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ (Ciaz) ಕಾರಿನ ಉತ್ಪಾದನೆಯನ್ನು ಮುಚ್ಚಲು ಸಿದ್ಧತೆ ನಡೆಸುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಮಾರ್ಚ್ 2025 ರ ವೇಳೆಗೆ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದು, ಏಪ್ರಿಲ್ 2025 ರಿಂದ ಸಿಯಾಜ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು.
ಮಾರುತಿ ಸಿಯಾಜ್ ಸ್ಥಗಿತಗೊಳ್ಳುವ ಪ್ರಮುಖ ಕಾರಣಗಳು:
- ಸೆಡಾನ್ ಮಾರುಕಟ್ಟೆಯಲ್ಲಿ ಕುಸಿತ: 2015 ರಲ್ಲಿ ಸೆಡಾನ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಶೇಕಡಾ 20 ಪ್ರಭಾವ ಇತ್ತು. ಆದರೆ 2024 ರ ವೇಳೆಗೆ ಈ ಸಂಖ್ಯೆಯು ಶೇಕಡಾ 10 ಕ್ಕೆ ಇಳಿದಿದೆ. ಇದಕ್ಕೆ ಬದಲಾಗಿ, SUV ಕಾರುಗಳ ಮಾರಾಟ ಶೇಕಡಾ 50 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ.
- ಮಾರುತಿ ಸುಜುಕಿ ಸಿಯಾಜ್‌ನ ಮಾರಾಟದಲ್ಲಿ ಇಳಿಮುಖ: FY18 ರಲ್ಲಿ 1,73,374 ಯುನಿಟ್ ಮಾರಾಟವಾದರೆ, FY24 ರಲ್ಲಿ ಕೇವಲ 97,466 ಯುನಿಟ್‌ಗಳಷ್ಟೇ ಮಾರಾಟವಾಗಿದೆ. 2025 ರ ಹಣಕಾಸು ವರ್ಷದ ಮೊದಲ 9 ತಿಂಗಳಲ್ಲಿ ಕೇವಲ 5861 ಯುನಿಟ್‌ಗಳ ಮಾರಾಟವಾಗಿದೆ.
- ನವೀಕರಣದ ಕೊರತೆ: ಸಿಯಾಜ್‌ಗೆ ಕೊನೆಯದಾಗಿ 2018 ರಲ್ಲಿ ಅಪ್‌ಗ್ರೇಡ್ ಮಾಡಲಾಗಿದ್ದು, ಅದರ ನಂತರ ಯಾವುದೇ ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿಲ್ಲ. ಆದರೆ ಸ್ಪರ್ಧಾತ್ಮಕ ಬ್ರಾಂಡ್‌ಗಳ ಸೆಡಾನ್ ಕಾರುಗಳಲ್ಲಿ ಸನ್‌ರೂಫ್, ADAS, ಟರ್ಬೋ ಪೆಟ್ರೋಲ್ ಎಂಜಿನ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮುಂತಾದ ಆಧುನಿಕ ವೈಶಿಷ್ಟ್ಯಗಳು ಲಭ್ಯವಿವೆ.
- ಡೀಸೆಲ್ ರೂಪಾಂತರ ಸ್ಥಗಿತ: 2020 ರಲ್ಲಿ ಸಿಯಾಜ್‌ನ ಡೀಸೆಲ್ ಮಾದರಿಯನ್ನು ನಿಲ್ಲಿಸಲಾಗಿದ್ದು, ಇದರಿಂದ ಗ್ರಾಹಕರ ಸಂಖ್ಯೆ ಕುಸಿಯಿತು. ಡೀಸೆಲ್ ಮಾದರಿಯ ಬೇಡಿಕೆಯು ಶೇಕಡಾ 30 ರಷ್ಟಿತ್ತು.
SUV ಕಾರುಗಳ ಭವಿಷ್ಯ ಮತ್ತು ಸೆಡಾನ್‌ಗಳ ಹಿನ್ನಡೆ:
SUV ಕಾರುಗಳು ಎತ್ತರವಾಗಿ, ಬಲಿಷ್ಠವಾಗಿ ಮತ್ತು ಹೆಚ್ಚಿನ ಸ್ಥಳಾವಕಾಶವನ್ನು ಹೊಂದಿರುವುದರಿಂದ ಜನರು ಅವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಸೆಡಾನ್‌ಗಳ ಬೆಲೆ SUV ಗಳ ಹತ್ತಿರ ತಲುಪಿರುವುದರಿಂದ, ಗ್ರಾಹಕರು SUV ಕಾರುಗಳನ್ನು ಆದ್ಯತೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿ, ಸ್ಕೋಡಾ ಆಕ್ಟೇವಿಯಾ ಮತ್ತು ಸೂಪರ್ಬ್ ಮುಂತಾದ ಅನೇಕ ಸೆಡಾನ್‌ಗಳ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ.