ಪ್ರಶ್ನೆ ಪತ್ರಿಕೆ ಲೀಕ್ ಆರೋಪದಿಂದ ರದ್ದುಗೊಂಡಿದ್ದ ನೀಟ್ ಮರುಪರೀಕ್ಷೆ ಇಂದು ರಾಜ್ಯದಾದ್ಯಂತ ನಡೆಯಿತು. ವರ್ಷದಲ್ಲೇ ಎರಡನೇ ಬಾರಿಗೆ ವಿದ್ಯಾರ್ಥಿಗಳು ಈ ಮಹತ್ವದ ಪರೀಕ್ಷೆಯನ್ನು ಎದುರಿಸಿದರು. ಆದರೆ ಪರೀಕ್ಷೆ ಬರೆಯುವ ಕನಸು ಹೊತ್ತ ಅನೇಕ ವಿದ್ಯಾರ್ಥಿಗಳು ಈ ಬಾರಿ ಕೂಡ ವಿವಿಧ ಕಾರಣಗಳಿಂದ ಪರೀಕ್ಷೆಯಿಂದ ವಂಚಿತರಾದ ಘಟನೆಗಳು ವರದಿಯಾಗಿವೆ.
ಬೆಂಗಳೂರಿನ ಆರ್‌ಸಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮನಕಲುಕುವ ಘಟನೆ ನಡೆದಿದೆ. ಮೂವರು ವಿದ್ಯಾರ್ಥಿನಿಯರು ಕೇವಲ ಎರಡು ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಕಾರಣ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಆ ವೇಳೆಗಾಗಲೇ ಗೇಟ್‌ಗಳನ್ನು ಮುಚ್ಚಲಾಗಿತ್ತು. ಟ್ರಾಫಿಕ್ ಜಾಮ್‌ನಿಂದಾಗಿ ಒಬ್ಬ ವಿದ್ಯಾರ್ಥಿನಿ ತಡವಾಗಿ ಬಂದಿದ್ದರೆ, ಬಸ್ ತಪ್ಪಿಸಿಕೊಂಡ ಮತ್ತೊಬ್ಬ ವಿದ್ಯಾರ್ಥಿನಿ ಸಮಯಕ್ಕೆ ಸರಿಯಾಗಿ ತಲುಪಲು ವಿಫಲವಾದಳು. ಇನ್ನೊಬ್ಬ ವಿದ್ಯಾರ್ಥಿನಿ ಹಳೆಯ ಹಾಲ್ ಟಿಕೆಟ್ ತಂದ ಕಾರಣ ಗೊಂದಲ ಉಂಟಾಗಿ ಪ್ರವೇಶ ಕಳೆದುಕೊಂಡಿದ್ದಾಳೆ.
ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಗೇಟ್ ಮುಂದೆ ನಿಂತು ಕಣ್ಣೀರು ಹಾಕಿದರು. “ಒಳಗೆ ಬಿಡಿ” ಎಂದು ಬೇಡಿಕೊಂಡರೂ ಸಿಬ್ಬಂದಿ ನಿಯಮಗಳನ್ನು ಉಲ್ಲೇಖಿಸಿ ಗೇಟ್ ತೆರೆಯಲಿಲ್ಲ. ಈ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿನಿ ಗೇಟ್ ಬಳಿ ಕುಸಿದು ಬಿದ್ದ ಘಟನೆ ಕೂಡ ನಡೆಯಿತು. ಮತ್ತೊಬ್ಬ ವಿದ್ಯಾರ್ಥಿನಿ ತಡೆಗೋಡೆ ಏರಿ ಒಳಗೆ ಪ್ರವೇಶಿಸಲು ಯತ್ನಿಸಿದರೂ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಆಕೆಯನ್ನು ಕೆಳಗಿಳಿಸಿದರು.
ಇದೇ ರೀತಿ ಕೊಪ್ಪಳದಲ್ಲಿಯೂ ಘಟನೆ ನಡೆದಿದೆ. ಗಂಗಾವತಿಯಿಂದ ಪರೀಕ್ಷೆ ಬರೆಯಲು ಬಂದ ಫಾತಿಮಾ ಎಂಬ ವಿದ್ಯಾರ್ಥಿನಿ ಕೇವಲ ಹತ್ತು ನಿಮಿಷ ತಡವಾಗಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ತಲುಪಿದ್ದಾಳೆ. ನಿಯಮದ ಪ್ರಕಾರ 2 ಗಂಟೆಯವರೆಗೆ ಪ್ರವೇಶ ಅವಕಾಶ ಇದ್ದರೂ ಆಕೆಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿಲ್ಲ. ಪರೀಕ್ಷೆಗೆ ಅವಕಾಶ ನೀಡುವಂತೆ ಆಕೆ ಗೇಟ್ ಎದುರು ನಿಂತು ಕಣ್ಣೀರಿಟ್ಟು ಬೇಡಿಕೊಂಡಿದ್ದಾಳೆ. ಆದರೆ ಸಿಬ್ಬಂದಿ ನಿಯಮ ಉಲ್ಲಂಘನೆ ಸಾಧ್ಯವಿಲ್ಲ ಎಂದು ಗೇಟ್ ತೆರೆಯಲು ನಿರಾಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಪೋಷಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದವೂ ಉಂಟಾಗಿದೆ. ಕೊನೆಗೆ ನಿರಾಶೆಯಿಂದಲೇ ಫಾತಿಮಾ ಪರೀಕ್ಷಾ ಕೇಂದ್ರದಿಂದ ವಾಪಸ್ ತೆರಳಬೇಕಾಯಿತು. ರಾಜ್ಯಾದ್ಯಂತ ನಡೆದ ಈ ಘಟನೆಗಳು ವಿದ್ಯಾರ್ಥಿಗಳ ಭವಿಷ್ಯ ಮತ್ತು ಪರೀಕ್ಷಾ ನಿಯಮಗಳ ಕಠಿಣತೆ ಕುರಿತು ಮತ್ತೆ ಚರ್ಚೆ ಹುಟ್ಟಿಸಿವೆ.





