ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ನಡುವೆ, ಇರಾನ್ ತನ್ನ ಶಾಂತಿ ಪ್ರಸ್ತಾವನೆಯನ್ನು ಅಮೆರಿಕಕ್ಕೆ ಕಳುಹಿಸಿದೆ. ಆದರೆ ಈ ಪ್ರಸ್ತಾವನೆಯನ್ನು ಕೃತಕ ಬುದ್ಧಿಮತ್ತೆಯ ಸಾಧನವಾದ ‘ಚಾಟ್‌ಜಿಪಿಟಿ’ (ChatGPT) ಬಳಸಿ ಬರೆಯಲಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ತೀವ್ರ ಲೇವಡಿ ಮಾಡಿದ್ದಾರೆ. ಇರಾನ್ ಒಂದೇ ವಿಷಯಕ್ಕೆ ಮೂರು ವಿಭಿನ್ನ ಆವೃತ್ತಿಗಳನ್ನು ಕಳುಹಿಸಿದೆ. ಅದರಲ್ಲಿ ಒಂದನ್ನು AI ಬಳಸಿ ತಯಾರಿಸಲಾಗಿದೆ.
ಪ್ರಸ್ತಾವನೆಯಲ್ಲಿ ಏನಿದೆ?
ಇರಾನ್ ಕಳುಹಿಸಿರುವ ಹತ್ತು ಅಂಶಗಳ ಪ್ರಸ್ತಾವನೆಯಲ್ಲಿ ಪ್ರಮುಖವಾಗಿ ಎರಡು ಬೇಡಿಕೆಗಳಿವೆ. ಮೊದಲನೆಯದು, ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕಬೇಕು. ಎರಡನೆಯದು, ಯುರೇನಿಯಂ ಸಮೃದ್ಧಗೊಳಿಸುವ ತನ್ನ ಕಾರ್ಯಕ್ರಮವನ್ನು ಮುಂದುವರಿಸಲು ಅಮೆರಿಕ ಅನುಮತಿ ನೀಡಬೇಕು. ಜೊತೆಗೆ, ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ನಡೆಸಿದ ಯುದ್ಧದಿಂದಾದ ಹಾನಿಗೆ ಪರಿಹಾರ ಕೂಡ ಇರಾನ್ ಬೇಡಿದೆ. ಈ ಬೇಡಿಕೆಗಳು ತುಂಬಾ ಅತಿರೇಕದವು ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನ ಹೇಳಿಕೆ ಮತ್ತು ಅಮೆರಿಕದ ನಿರಾಕರಣೆ
ಬುಧವಾರ ಇರಾನ್ ಸರ್ಕಾರ ತನಗೆ ಐತಿಹಾಸಿಕ ಜಯ ಸಿಕ್ಕಿದೆ ಎಂದು ಘೋಷಿಸಿಕೊಂಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ವಾರಗಳ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಮತ್ತು ಇರಾನ್‌ನ ಪ್ರಸ್ತಾವನೆಗಳಿಗೆ ಸಮ್ಮತಿ ನೀಡಿದ್ದಾರೆ ಎಂದು ಟೆಹ್ರಾನ್ ಪ್ರತಿಪಾದಿಸಿತ್ತು. ಆದರೆ ಅಮೆರಿಕ ತಕ್ಷಣವೇ ಈ ವಾದವನ್ನು ತಳ್ಳಿಹಾಕಿತು. “ಟ್ರಂಪ್ ಯಾವುದೇ ಇರಾನ್ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿಲ್ಲ. ಇದು ಸಂಪೂರ್ಣ ಸುಳ್ಳು” ಎಂದು ಹೈಟ್ ಹೌಸ್ ವಕ್ತಾರರು ಸ್ಪಷ್ಟಪಡಿಸಿದರು.
ಜೆಡಿ ವ್ಯಾನ್ಸ್‌ನ ತಿರುಗೇಟು
ಈ ಗೊಂದಲದ ನಡುವೆ ಮಾತನಾಡಿದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ಇರಾನ್ ನಡೆ ವಿಚಿತ್ರವಾಗಿದೆ ಎಂದು ವ್ಯಂಗ್ಯವಾಡಿದರು. “ಇರಾನ್ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಬೇರೆ ಬೇರೆ ರೀತಿಯ ಪ್ರಸ್ತಾವನೆಗಳನ್ನು ಕಳುಹಿಸಿದೆ. ಅದರಲ್ಲಿ ಒಂದು ಆವೃತ್ತಿಯನ್ನು ಚಾಟ್‌ಜಿಪಿಟಿ ಬಳಸಿ ಬರೆಯಲಾಗಿದೆ. ಇದು ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ. ನಾವು ಯಾವ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಬೇಕು? AI ಮೂಲಕ ಬರೆದದ್ದನ್ನು ತೆಗೆದುಕೊಳ್ಳುವುದೇ ಅಥವಾ ಇರಾನ್ ಅಧಿಕಾರಿಗಳು ಸ್ವತಃ ಬರೆದದ್ದನ್ನು?” ಎಂದು ಅವರು ಪ್ರಶ್ನಿಸಿದರು. ಇದು ಇರಾನ್‌ನ ಗಂಭೀರತೆಯ ಕೊರತೆಯನ್ನು ತೋರಿಸುತ್ತದೆ ಎಂದು ವ್ಯಾನ್ಸ್ ಹೇಳಿದರು.
ಏಪ್ರಿಲ್ 11ರಿಂದ ಇಸ್ಲಾಮಾಬಾದ್‌ನಲ್ಲಿ ಸಂಧಾನ
ಈ ಎಲ್ಲಾ ಬೆಳವಣಿಗೆಗಳ ನಡುವೆಯೂ, ಏಪ್ರಿಲ್ 11 ರಿಂದ ಪಾಕಿಸ್ತಾನದ ಇಸ್ಲಾಮಾಬಾದ್ ನಗರದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನ ಮಾತುಕತೆಗಳು ಆರಂಭವಾಗುವ ಸಾಧ್ಯತೆಯಿದೆ. ಪಾಕಿಸ್ತಾನ ಸರ್ಕಾರ ಈ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ.
ಅಮೆರಿಕ ಮತ್ತು ಇಸ್ರೇಲ್ ನಿಲುವು
ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ತಡೆಯಲು ಅಮೆರಿಕ ಮತ್ತು ಇಸ್ರೇಲ್ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿವೆ. ಇರಾನ್‌ನ ಈ AI ಪ್ರಸ್ತಾವನೆಯನ್ನು ಅಮೆರಿಕ ಗಂಭೀರವಾಗಿ ಪರಿಗಣಿಸಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ಇರಾನ್‌ನ ChatGPT ಪ್ರಸ್ತಾವನೆ ಅವರ ಅಸ್ಥಿರತೆಯ ಸಂಕೇತ. ನಾವು ಯಾವುದೇ ಕುಶಲತೆಗೆ ಮರುಳಾಗುವುದಿಲ್ಲ” ಎಂದು ಹೇಳಿದ್ದಾರೆ.





