ತುಮಕೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಒಟ್ಟಾರೆ ತೇರ್ಗಡೆ ಪ್ರಮಾಣ ಶೇ.84 ರಷ್ಟಿದೆ. ಕಳೆದ ವರ್ಷಕ್ಕಿಂತ ಗಮನಾರ್ಹ ಪ್ರಗತಿ ಕಂಡುಬಂದಿದ್ದು, ವಿದ್ಯಾರ್ಥಿಗಳ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾವಾರು ಸಾಧನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ತಮ್ಮ ಮೊದಲ ಎರಡು ಸ್ಥಾನಗಳನ್ನು ಕಾಯ್ದುಕೊಂಡಿವೆ. ಬೆಂಗಳೂರು ನಗರ ಹಾಗೂ ಮೈಸೂರು ನಂತರದ ಸ್ಥಾನಗಳಲ್ಲಿವೆ.
ರೋಹನ್ ಸಾಧನೆ
ಇದೇ ಸಂದರ್ಭದಲ್ಲಿ, ತುಮಕೂರಿನ ದ್ವಿತೀಯ ಪಿಯುಸಿ ರೋಹನ್ ಎಂಬ ವಿದ್ಯಾರ್ಥಿ 597 ಅಂಕಗಳನ್ನು ಪಡೆದು ಸಂಭ್ರಮಿಸಿದ್ದಾರೆ. ನಂತರ ಮಾತನಾಡಿದ ಅವರು ನನ್ನ ತಂದೆ-ತಾಯಿ ಢಾಬಾ ನಡೆಸುತ್ತಿದ್ದು, ಅವರ ಪ್ರೋತ್ಸಾಹದಿಂದಲೇ ಈ ಸಾಧನೆ ಸಾಧ್ಯವಾಗಿದೆ ಎಂದು ರೋಹನ್ ಹೇಳಿದ್ದಾರೆ.
“ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ತುಂಬಾ ಖುಷಿಯಾಗ್ತಿದೆ. ಇವತ್ತು ತುಂಬಾ ಒಳ್ಳೆ ಮಾರ್ಕ್ಸ್ ಬಂದಿದೆ. ಎಲ್ಲಾ ಟೀಚರ್ಸ್ ಸಪೋರ್ಟ್ ಮಾಡಿದ್ರು. ನಾನು ಹಾಸ್ಟೆಲ್‌ನಲ್ಲಿ ಇದ್ದಿದ್ದು, ಅಲ್ಲಿಯೂ ಎಲ್ಲರೂ ಸಪೋರ್ಟ್ ಮಾಡಿದ್ರು” ಎಂದು ರೋಹನ್ ಸಂತಸ ವ್ಯಕ್ತಪಡಿಸಿದ್ದಾರೆ.
2024ನೇ ಸಾಲಿನಲ್ಲಿ ರೋಹನ್ ಅವರ ಅಕ್ಕನು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದರು. ಅದೇ ಅಕ್ಕನಿಗೆ 597 ಅಂಕಗಳು ಬಂದಿದ್ದವು. ಈ ಬಾರಿ ರೋಹನ್ ಸಹ ಅದೇ ಅಂಕಗಳಿಸಿ ಕುಟುಂಬದ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. “ನನ್ನ ಅಕ್ಕನಿಗೂ ಕೂಡ ಸೇಮ್ ಮಾರ್ಕ್ಸ್ ಬಂದಿತ್ತು. ಅವರು ಸ್ಟೇಟ್‌ಗೆ ಫಸ್ಟ್ ರ್ಯಾಂಕ್ ಬಂದಿದ್ರು. ನನಗೂ 597 ಮಾರ್ಕ್ಸ್ ಬಂದಿದೆ. ತುಂಬಾ ಖುಷಿಯಾಗ್ತಿದೆ” ಎಂದು ರೋಹನ್ ಹೇಳಿದ್ದಾರೆ.
ರೀವ್ಯಾಲ್ಯೂಯೇಷನ್ ಮಾಡಿಸುವ ಪ್ಲಾನ್
ಕನ್ನಡ ಮತ್ತು ಇಂಗ್ಲಿಷ್ ಪೇಪರ್‌ಗಳಲ್ಲಿ ಕೆಲವು ಮಾರ್ಕ್‌ಗಳು ಕಡಿಮೆ ಬಂದಿರುವ ಕುರಿತು ರೋಹನ್ ಅವರು, “ನಂದು ಕನ್ನಡದಲ್ಲಿ 1 ಮಾರ್ಕ್, ಇಂಗ್ಲಿಷ್‌ನಲ್ಲಿ 2 ಮಾರ್ಕ್ ಹೋಗಿದೆ. ಮತ್ತೆ ರೀವ್ಯಾಲ್ಯೂಯೇಷನ್‌ಗೆ ಅಪ್ಲೈ ಮಾಡಬೇಕು” ಎಂದು ತಿಳಿಸಿದ್ದಾರೆ.
ಜೂನಿಯರ್ಸ್‌ಗೆ ಸಂದೇಶ
ತಮ್ಮ ಅನುಭವವನ್ನು ಹಂಚಿಕೊಂಡ ರೋಹನ್, “ನಾನು ಜೂನಿಯರ್ಸ್‌ಗೆ ಹೇಳೋದೇನೆಂದರೆ ಯಾರು ಯಾವ್ ಭಾಷೆನೂ ನೆಗೆಲೇಟ್ ಮಾಡಬೇಡಿ. ಎಲ್ಲಾ ಭಾಷೆಗಳಿಗೂ ಗೌರವ ಕೊಡಿ. ಶ್ರದ್ಧೆಯಿಂದ ಓದಿ, ಯಶಸ್ಸು ಖಂಡಿತಾ ನಿಮ್ಮದಾಗುತ್ತದೆ” ಎಂದು ಸಲಹೆ ನೀಡಿದ್ದಾರೆ.





