ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದಲ್ಲಿ ಈಗ ಹಗಲಿನಲ್ಲಿ ಮಾತ್ರವಲ್ಲ, ರಾತ್ರಿ ವೇಳೆಯೂ ಉಷ್ಣಾಂಶ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತೀಚಿನ ವರದಿಯೊಂದರ ಪ್ರಕಾರ, ಕಳೆದೆರಡು ದಶಕಗಳಿಗೆ ಹೋಲಿಸಿದರೆ ಈಗ ರಾಜ್ಯದ ಜನರು ವರ್ಷಕ್ಕೆ ಕನಿಷ್ಠ 9 ರಿಂದ 13 ಹೆಚ್ಚುವರಿ ಬಿಸಿ ರಾತ್ರಿಗಳನ್ನು ಅನುಭವಿಸುತ್ತಿದ್ದಾರೆ. ಈ ಬದಲಾವಣೆ ಕೇವಲ ಅಸ್ವಸ್ಥತೆ ಮಾತ್ರವಲ್ಲದೆ, ಮನುಷ್ಯನ ಉತ್ಪಾದಕತೆ ಮತ್ತು ಪ್ರಮುಖ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಆಂಡ್ ವಾಟರ್ (CEEW) ಪ್ರಕಟಿಸಿರುವ ವರದಿಯ ಪ್ರಕಾರ, ಕರ್ನಾಟಕದ ಶೇ. 93 ರಷ್ಟು ಜಿಲ್ಲೆಗಳು ಅತ್ಯಧಿಕ ಉಷ್ಣದ ಅಪಾಯದ (Heat Risk) ವರ್ಗಕ್ಕೆ ಸೇರಿವೆ. ನಗರೀಕರಣ ಮತ್ತು ತೇವಾಂಶದ ಏರಿಕೆಯಂತಹ ಸುಮಾರು 35 ವಿವಿಧ ಕಾರಣಗಳಿಂದಾಗಿ ರಾತ್ರಿ ತಾಪಮಾನ ಏರುತ್ತಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗದಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ.
ವರದಿಯ ಪ್ರಕಾರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳು ‘ಅತ್ಯಂತ ಅಪಾಯಕಾರಿ’ ವಲಯದಲ್ಲಿವೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಸದ್ಯಕ್ಕೆ ಮಧ್ಯಮ ಅಪಾಯದ ವರ್ಗದಲ್ಲಿವೆ.
ಸಾಮಾನ್ಯವಾಗಿ ಹಗಲಿನ ಬಿಸಿಲಿನಲ್ಲಿ ಸುಸ್ತಾದ ದೇಹವು ರಾತ್ರಿಯ ತಂಪಾದ ವಾತಾವರಣದಲ್ಲಿ ಚೇತರಿಸಿಕೊಳ್ಳುತ್ತದೆ. ಆದರೆ, ರಾತ್ರಿ ವೇಳೆಯೂ ಉಷ್ಣಾಂಶ ಹೆಚ್ಚಿರುವುದರಿಂದ ದೇಹಕ್ಕೆ ತಂಪಾಗಲು ಅವಕಾಶವೇ ಸಿಗುತ್ತಿಲ್ಲ. ಇದರಿಂದಾಗಿ ಕೆಳಗಿನ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ:
-
ಹೃದಯ ಸಂಬಂಧಿ ಕಾಯಿಲೆಗಳು: ತಾಪಮಾನ ಹೆಚ್ಚಾದಾಗ ರಕ್ತದೊತ್ತಡದಲ್ಲಿ ಏರುಪೇರಾಗಿ ಹೃದಯದ ಮೇಲೆ ಒತ್ತಡ ಬೀಳುತ್ತದೆ.
-
ಹೀಟ್ ಸ್ಟ್ರೋಕ್ ಮತ್ತು ಸುಸ್ತು: ದೀರ್ಘಕಾಲದ ಉಷ್ಣತೆಯಿಂದಾಗಿ ದೇಹದ ನಿರ್ಜಲೀಕರಣ ಉಂಟಾಗಿ ಹೀಟ್ ಎಕ್ಸಾಸ್ಷನ್ ಸಂಭವಿಸಬಹುದು.
-
ಮೂತ್ರಪಿಂಡ ಸಮಸ್ಯೆ: ನಿರಂತರ ಸೆಕೆಯಿಂದಾಗಿ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ಕಿಡ್ನಿಗಳ ಮೇಲೆ ಪರಿಣಾಮ ಬೀರಬಹುದು.
-
ಮಾನಸಿಕ ಆಯಾಸ: ಸರಿಯಾದ ನಿದ್ರೆ ಬಾರದೆ ಇರುವುದರಿಂದ ಮಾನಸಿಕ ಒತ್ತಡ ಮತ್ತು ಕೆಲಸದ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ.
ಪರಿಹಾರವೇನು ?
ಹೆಚ್ಚುತ್ತಿರುವ ಈ ಹೀಟ್‌ವೇವ್‌ಗಳನ್ನು ಎದುರಿಸಲು ಜನರು ಹೆಚ್ಚು ನೀರು ಕುಡಿಯುವುದು, ಹಗುರವಾದ ಹತ್ತಿ ಬಟ್ಟೆ ಧರಿಸುವುದು ಮತ್ತು ಮನೆಯೊಳಗೆ ಗಾಳಿಯಾಡುವಂತೆ ನೋಡಿಕೊಳ್ಳುವುದು ಅಗತ್ಯ. ನಗರೀಕರಣದ ಜೊತೆಗೆ ಗಿಡಮರಗಳನ್ನು ಬೆಳೆಸುವುದು ದೀರ್ಘಕಾಲೀನ ಪರಿಹಾರವಾಗಿ ಕಾಣಿಸುತ್ತಿದೆ





