ಬೆಂಗಳೂರು, ಮಾ.28: ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿ (RCB) ಪರ ಆಡುತ್ತಿರುವ ನ್ಯೂಜಿಲೆಂಡಿನ ವೇಗದ ಬೌಲರ್ ಜಾಕೋಬ್ ಡಫಿ ಅಬ್ಬರಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಡಫಿ ತಮ್ಮ ಮೊದಲ ಪಂದ್ಯದಲ್ಲೇ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು.
ಡಫಿಯ ಆರಂಭಿಕ ಆಘಾತ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ RCB ನಾಯಕ ರಜತ್ ಪಾಟೀದಾರ್, ಹೊಸ ಬೌಲರ್ ಡಫಿಗೆ ಎರಡನೇ ಓವರ್ ನೀಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದರು. ಈ ವಿಶ್ವಾಸವನ್ನು ಡಫಿ ಸಮರ್ಥಿಸಿಕೊಂಡರು. ತಮ್ಮ ಮೊದಲ ಓವರಿನ ಮೊದಲ ಎಸೆತದಲ್ಲೇ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (7) ಅವರನ್ನು ಕ್ಯಾಚ್ ಔಟ್ ಮಾಡಿದರು.
ಇದೇ ಓವರಿನ ಆರನೇ ಎಸೆತದಲ್ಲಿ SRHದ ಅತ್ಯಂತ ಅಪಾಯಕಾರಿ ಬ್ಯಾಟರ್ ಟ್ರಾವಿಸ್ ಹೆಡ್ ಅವರನ್ನು ಕ್ಯಾಚ್ ಔಟ್ ಮಾಡಿ ಡಫಿ ತಮ್ಮ ಎರಡನೇ ಬಲಿಯನ್ನಾಗಿಸಿಕೊಂಡರು. ಹೆಡ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಬೇಕಾಯಿತು. ಒಂದೇ ಓವರ್ ನಲ್ಲಿ SRHದ ಇಬ್ಬರು ಪ್ರಮುಖ ಆರಂಭಿಕ ಆಟಗಾರರನ್ನು ಪೆವಿಲಿಯನ್ ಸೇರಿಸುವ ಮೂಲಕ ಡಫಿ ಪಂದ್ಯದ ಭವಿಷ್ಯವನ್ನೇ ಬದಲಾಯಿಸಿದರು.
ಮೂರನೇ ವಿಕೆಟ್ ಕೂಡ ಡಫಿ ಪಾಲು
ತಮ್ಮ ಮೂರನೇ ಓವರಿನ ಎರಡನೇ ಎಸೆತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಔಟ್ ಮಾಡುವ ಮೂಲಕ ಡಫಿ ತಮ್ಮ ಮೂರನೇ ವಿಕೆಟ್ ಪಡೆದರು. ನಿತೀಶ್ ಕೇವಲ 6 ರನ್ ಗಳಿಸಿ ಹೊರ ನಡೆದರು.
ಅಂತಿಮ ಅಂಕಿಅಂಶ
ಡಫಿ ಅವರು 4 ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಿದರು. 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ಅಮೂಲ್ಯ ವಿಕೆಟ್‌ಗಳನ್ನು ಪಡೆದರು. ಇವರ ಈ ಅಬ್ಬರದ ಬೌಲಿಂಗ್‌ನಿಂದಾಗಿ SRH ತಂಡವು ಆರಂಭದಲ್ಲಿಯೇ ಬ್ಯಾಕ್‌ಫೂಟ್‌ಗೆ ಸರಿಯುವಂತಾಯಿತು. ರಜತ್ ಪಾಟೀದಾರ್ ಅವರು ಡಫಿ ಅವರಿಗೆ ಯಾವುದೇ ವಿರಾಮ ನೀಡದೇ ನೇರವಾಗಿ ನಾಲ್ಕು ಓವರ್‌ಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಿದರು.
ರಜತ್‌ನ ತಂತ್ರ ಸಮರ್ಥನೆ:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ರಜತ್ ಪಾಟೀದಾರ್ ಅವರ ನಿರ್ಧಾರವನ್ನು ಡಫಿ ಅವರ ಬೌಲಿಂಗ್ ಸಮರ್ಥಿಸಿತು. ಚಿನ್ನಸ್ವಾಮಿ ಮೈದಾನದಲ್ಲಿ ಸಾಮಾನ್ಯವಾಗಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳಿಗೆ ಅನುಕೂಲವಿದ್ದರೂ, ರಜತ್ ಬೌಲಿಂಗ್ ಆಯ್ಕೆ ಮಾಡಿಕೊಂಡು ಹೊಸ ಬೌಲರ್ ಡಫಿಗೆ ಅವಕಾಶ ನೀಡಿದ್ದರು. ಡಫಿ ತಮ್ಮ ಮೊದಲ ಪಂದ್ಯದಲ್ಲೇ ಈ ನಿರ್ಧಾರವನ್ನು ಸಮರ್ಥಿಸಿಕೊಂಡರು.





